ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ನೊಂದ ಯುವಕನೋರ್ವ ಯುವತಿಗೆ ಚೂರಿಯಿಂದ ಇರಿದು ಆಕೆಯ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ-ಮಾರಿಪಳ್ಳ ಸಮೀಪದ ಸುಜೀರ್-ಮಲ್ಲಿ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಕೊಡ್ಮಣ್ ನಿವಾಸಿ ಸುಧೀರ್ (30) ಹಾಗೂ ಚೂರಿ ಇರಿತಕ್ಕೊಳಗಾದ ಯುವತಿಯನ್ನು ಫರಂಗಿಪೇಟೆ ನಿವಾಸಿ ದಿವ್ಯಾ ಯಾನೆ ದೀಕ್ಷಿತಾ (26) ಎಂದು ಗುರುತಿಸಲಾಗಿದೆ.
ದಿವ್ಯಾ ಯಾನೆ ದೀಕ್ಷಿತಾ ಹಾಗೂ ಸುಧೀರ್ ಸುಮಾರು ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಆದರೂ ಸಹ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದನು.
ಸುಧೀರ್ ಸೋಮವಾರ ಬೆಳಿಗ್ಗೆ ಫರಂಗಿಪೇಟೆ ಸಮೀಪದ ಸುಜೀರ್-ಮಲ್ಲಿ ಎಂಬಲ್ಲಿಗೆ ಬಂದು ದಿವ್ಯಾಳೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾಳಿಗೆ ಇರಿದಿದ್ದಾನೆ. ಆಕೆ ತಪ್ಪಿಸಿಕೊಂಡು ಓಡಿ ಹೋಗುವಾಗ ಬಿದ್ದಿದ್ದು, ಇದನ್ನು ನೋಡಿದ ಸುಧೀರ್ ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಅಲ್ಲಿಂದ ದಿವ್ಯಾಳ ಬಾಡಿಗೆ ಮನೆಗೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಸಂತ್ರಸ್ತ ಅಶ್ರಫ್ ಕುಟುಂಬಕ್ಕೆ ಯುಟಿ ಖಾದರ್, ಸಚಿವ ಜಮೀರ್‌ರಿಂದ ಪರಿಹಾರ ವಿತರಣೆ
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
