ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ 10 ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಲೂರು ನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಸೆಮ್ಮಂಕುಪ್ಪಂನಲ್ಲಿ ಶಾಲಾ ವಾಹನದಲ್ಲಿ ಮಕ್ಕಳು ಶಾಲೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಾಹನ ರೈಲು ಕ್ರಾಸಿಂಗ್ ಮೂಲಕ ಹಾದುಹೋದಾಗ ರೈಲ್ವೆ ಗೇಟ್ ಮುಚ್ಚಿರಲಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಅಪಘಾತ ನಡೆದ ಸಂದರ್ಭದಲ್ಲಿ ಗೇಟ್‌ಕೀಪರ್ ನಿದ್ರಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತವೆ.
ಇದನ್ನು ಓದಿದ್ದೀರಾ? ನಾಯಕನಾಗಿ ಅಭೂತಪೂರ್ವ ದಾಖಲೆ ನಿರ್ಮಿಸಿದ ಶುಭ್ಮನ್ ಗಿಲ್
ಅಪಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಕೃಷ್ಣಸ್ವಾಮಿ ಶಾಲೆಗೆ ಸೇರಿದ ಶಾಲಾ ವಾಹನ ರೈಲ್ವೆ ಹಳಿಗಳಿಂದ ಸುಮಾರು 50 ಮೀಟರ್ ದೂರಕ್ಕೆ ಎಳೆದೊಯ್ದಿತ್ತು. ವಾಹನ ವಿಲ್ಲುಪುರಂ-ಮೈಲಾಡುತುರೈ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ. ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ
ಕಡಲೂರು ಜಿಲ್ಲಾಧಿಕಾರಿ ಸಿಬಿ ಆದಿತ್ಯ ಸೆಂಥಿಲ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗೇಟ್ ಕೀಪರ್ ಗೇಟ್‌ಗಳನ್ನು ಮುಚ್ಚದಿರುವುದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
