ಜ್ಞಾನವಾಪಿ ಮಸೀದಿಯನ್ನು ವಿವಾದಗೊಳಿಸಿ, ಮಸೀದಿ ವಿರುದ್ಧ 1991ರಲ್ಲಿ ದಾಖಲಿಸಲಾಗಿದ್ದ ಮೂಲ ಮೊಕದ್ದಮೆಯನ್ನು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಿಂದ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು. ಮಸೀದಿ ಜಾಗವು ಕಾಶಿ ವಿಶ್ವನಾಥ ದೇವಾಲಯಕ್ಕೆ ಸೇರಿದ್ದೆಂದು ವಿವಾದ ಸೃಷ್ಟಿಸಲಾಗಿದೆ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ದಾವೆದಾರರ ಪರವಾಗಿ ವಕೀಲ ವಿಜಯ್ ಶಂಕರ್ ರಸ್ತೋಗಿ ಅವರು ಮೂಲ ಮೊಕದ್ದಮೆಯ ವರ್ಗಾವಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ಜಿಲ್ಲಾ ನ್ಯಾಯಾಧೀಶ ಜಯ ಪ್ರಕಾಶ್ ತಿವಾರಿ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ. “ಅರ್ಜಿದಾರರು ಮೂಲ ಮೊಕದ್ದಮೆಯಲ್ಲಿ ದಾವೆದಾರ/ವಾದಿಗಳಲ್ಲ. ಆದ್ದರಿಂದ, ಅವರು ಮೊಕದ್ದಮೆಯ ವರ್ಗಾವಣೆ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬ್ರಿಟನ್ ಮತ್ತು ಫ್ರಾನ್ಸ್ ಮಧ್ಯಪ್ರಾಚ್ಯವನ್ನು ಹೇಗೆ ವಸಾಹತುಗೊಳಿಸಿದವು
ಪ್ರಕರಣದಲ್ಲಿ ವಾದಿಗಳಾಗಿರುವ ಮಣಿಕುಂಟಲ ತಿವಾರಿ, ನೀಲಿಮಾ ಮಿಶ್ರಾ ಹಾಗೂ ರೇಣು ಪಾಂಡೆ ಅವರು ಅರ್ಜಿ ಸಲ್ಲಿಸಿದ್ದಾರೆ. ಈ ಮೂವರೂ ಮೂಲ ಮೊಕದ್ದಮೆಯ ದಾವೆದಾರರಲ್ಲಿ ಒಬ್ಬರಾದ ದಿ. ಹರಿಹರ ಪಾಂಡೆ ಅವರ ಪುತ್ರಿಯರು.
1991ರಿಂದ ಮೂಲ ಮೊಕದ್ದಮೆ ಬಾಕಿ ಉಳಿದಿದೆ. ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) ತ್ವರಿತಗತಿಯ ನ್ಯಾಯಾಲಯದ ಮುಂದೆ ದಾವೆದಾರರು ವಾದ ಮಂಡಿಸಲು ಸಾಕಷ್ಟು ಸಮಯ ನೀಡುತ್ತಿಲ್ಲ. ಹೀಗಾಗಿ, ಮೊಕದ್ದಮೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಕೋರಲಾಗಿದೆ ಎಂದು ವಕೀಲ ರಸ್ತೋಗಿ ಹೇಳಿದ್ದಾರೆ.