3,000 ರೂ. ಬೆಲೆ ಬಾಳುವ ಮಂಗಳಸೂತ್ರವನ್ನು ಕೇವಲ 20 ರೂ.ಗೆ ವೃದ್ಧ ದಂಪತಿಗಳು ಖರೀದಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದಂಪತಿಗಳಿಗೆ ಕೇವಲ 20 ರೂ.ಗೆ ತಾಳಿ ಮಾರಾಟ ಮಾಡಿದ ಅಂಗಡಿ ಮಾಲೀಕನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
93 ವರ್ಷದ ವೃದ್ಧಿ ದಂಪತಿಗಳು ತಾಳಿ ಖರೀದಿಗಾಗಿ ಚಿನ್ನದ ಅಂಗಡಿಗೆ ಬಂದಾಗ, ಗೋಪಿಕಾ ಜ್ಯುವೆಲ್ಲರ್ಸ್‌ನ ಮಾಲೀಕ ನಿಲೇಶ್ ಖಿವಂಶರ ಅವರು ತಾಳಿಯನ್ನು ಉಡುಗೊರೆಯಾಗಿ ದಂಪತಿಗಳಿಗೆ ನೀಡಿದ್ದಾರೆ. ಆದರೆ, ದಂಪತಿಗಳು ಉಚಿತವಾಗಿ ತಾಳಿ ಪಡೆಯಲು ನಿರಾಕಿಸಿದ ಕಾರಣ, 20 ರೂ. ಪಡೆದು ಮಂಗಳಸೂತ್ರವನ್ನು ಕೊಟ್ಟಿದ್ದಾರೆ.
ದಂಪತಿಗಳಿಗೆ 20 ರೂ.ಗೆ ತಾಳಿಯನ್ನು ಮಾರಾಟ ಮಾಡಿದ ಬಗ್ಗೆ ವಿವರಿಸಿರುವ ಅಂಗಡಿ ಮಾಲೀಕ ನಿಲೇಶ್ ಖಿವಂಶರ, “ಅವರು (ವೃದ್ಧ ದಂಪತಿ) ಸ್ವಾಭಿಮಾನಿ ಜನರು. ಉಚಿತವಾಗಿ ಏನನ್ನೂ ಪಡೆಯಲು ಬಯಸಲಿಲ್ಲ. ಹಣ ಪಾವತಿ ಮಾಡುವುದಾಗಿ ಹಠ ಹಿಡಿದಿದ್ದರು” ಎಂದು ಹೇಳಿವುದಾಗಿ ‘ಎಎನ್‌ಐ’ ವರದಿ ಮಾಡಿದೆ.
“ದಂಪತಿಗಳು ಆಭರಣಗಳನ್ನು ಹುಡುಕುತ್ತಾ ಹಲವು ಅಂಗಡಿಗಳನ್ನು ಸುತ್ತಾಡಿ ನಮ್ಮ ಅಂಗಡಿಗೆ ಬಂದರು. ಅವರು ಹಲವಾರು ಆಭರಣಗಳನ್ನು ನೋಡಿ, ಖರೀದಿಸದೆ ವಾಪಸ್ ಹೊರಟರು. ಅವರು ತಮ್ಮ ಪತ್ನಿಗೆ ಮಂಗಳಸೂತ್ರ ಖರೀದಿಸಲು ಹುಟುಕುತ್ತಿರುವುದು ತಿಳಿದು, ನಾವು ಅವರಿಗೆ 3,000 ರೂ. ಮೌಲ್ಯದ ಚಿನ್ನ ಲೇಪಿತ ತಾಳಿ ಸರವನ್ನು ಉಡುಗೊರೆಯಾಗಿ ಕೊಟ್ಟೆವು. ಆದರೆ, ಅವರು ಉಡುಗೊರೆಯಾಗಿ ಪಡೆಯಲು ನಿರಾಕರಿಸಿದರು, ಹಣ ಪಾವತಿ ಮಾಡುವುದಾಗಿ ಹೇಳಿದರು” ಎಂದು ತಿಳಿಸಿದ್ದಾರೆ.
“ವೃದ್ಧ ವ್ಯಕ್ತಿ ಮೊದಲು ನೋಟು-ನಾಣ್ಯಗಳನ್ನು ಒಳಗೊಂಡ 1,100 ರೂ. ಕೊಟ್ಟರು. ಬಳಿಕ, ವೃದ್ಧ ಮಹಿಳೆ ತಮ್ಮ ಚೀಲದಿಂದ ರೂ. 10 ಮತ್ತು ರೂ. 20 ನೋಟುಗಳನ್ನು ತೆಗೆದರು. ನಾವು ಹಣ ಪಾವತಿಸುವುದು ಬೇಡವೆಂದು ಹೇಳಿದೆವು. ಆದರೆ, ಅವರು ಹಣ ಪಾವತಿಲು ಹಠ ಹಿಡಿದರು. ಕೊನೆಗೆ, ಪತಿ ಮತ್ತು ಪತ್ನಿ ಇಬ್ಬರಿಂದಲೂ ತಲಾ 10 ರೂ.ಗಳನ್ನು ಆಶೀರ್ವಾದವಾಗಿ ಸ್ವೀಕರಿಸಿದೆ. ಅವರ ಸ್ವಾಭಿಮಾನ ಮತ್ತು ಬದುಕಿನ ಉತ್ಸಾಹವು ನಮ್ಮನ್ನು ಉತ್ಸುಕಗೊಳಿಸಿದೆ” ಎಂದು ಹೇಳಿದ್ದಾರೆ.