ಕೆಳಜಾತಿಗಳು ದಮನಿತ ಸಮುದಾಯಗಳು ಶಿಕ್ಷಣ ಕಲಿಯಬೇಕಾಗಿರುವುದು ಶೋಷಣೆಯಿಂದ ಮುಕ್ತವಾಗುವ ಮತ್ತು ಶೋಷಣೆಯ ವಿರುದ್ಧ ಬಂಡೇಳುವ ಅಸ್ತ್ರ. ಹಾಗಾಗಿ ಎಲ್ಲರೂ ವಿದ್ಯಾವಂತರಾಗಬೇಕು- ಇದು ಅಂಬೇಡ್ಕರ್ ಕಂಡ ಕನಸು...
ಇದೇ ದಿನ ಅಂದರೆ ಜುಲೈ 8, 1945 ರಂದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪೀಪಲ್ಸ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಉದ್ದೇಶದ ಬಗ್ಗೆ ಮಾತನಾಡುತ್ತಾ ‘ಪೀಪಲ್ಸ್ ಎಜುಕೇಶನ್ ಸೊಸೈಟಿಯ ಉದ್ದೇಶ ಕೇವಲ ಶಿಕ್ಷಣ ನೀಡುವುದಲ್ಲ, ಬೌದ್ಧಿಕ, ನೈತಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ರೀತಿಯಲ್ಲಿ ಶಿಕ್ಷಣ ನೀಡುವುದು’ ಎಂದು ಹೇಳುತ್ತಾರೆ. ಇಲ್ಲಿ ವಿಶೇಷವಾಗಿ ಶಿಕ್ಷಣ ‘ಪ್ರಜಾಪ್ರಭುತ್ವ’ವನ್ನು ಬಲಪಡಿಸಬೇಕು ಎನ್ನುವುದರ ಕಡೆ ಗಮನ ಸೆಳೆಯುತ್ತಾರೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜತೆಗೆ ಶಿಕ್ಷಣ ಸಂಸ್ಥೆಗೆ ಹೆಗಲಾದವರು ಹಲವರಿದ್ದಾರೆ. ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸದಸ್ಯರೊಂದಿಗೆ ತೆಗೆಸಿಕೊಂಡ ಛಾಯಾಚಿತ್ರದಲ್ಲಿ ಅವರನ್ನು ಕಾಣಬಹುದು. ಈ ಚಿತ್ರದಲ್ಲಿ (ಎಡದಿಂದ) ಪ್ರೊ. ವಿ.ಜಿ. (ವಿನಾಯಕ್ ಗಣಪತ್) ರಾವ್, ಪ್ರಾಂಶುಪಾಲರಾದ ಎ.ಬಿ. ಗಜೇಂದ್ರಗಡ್ಕರ್, ಎಂ.ವಿ. ದೋಂಡೆ, ಡಾ. ಅಂಬೇಡ್ಕರ್, ರಾವ್ ಬಹದ್ದೂರ್ ಸಿ.ಕೆ. ಬೋಲೆ, ಡಿ.ಜಿ. ಜಾಧವ್ ಮತ್ತು ಕಮಲಕಾಂತ್ ಚಿತ್ರೆ (ಕಾಲೇಜಿನ ರಿಜಿಸ್ಟ್ರಾರ್) ಅವರುಗಳಿದ್ದಾರೆ.
ಇದೀಗ ದೇಶವ್ಯಾಪಿ ಪೀಪಲ್ಸ್ ಎಜುಕೇಶನ್ ಸೊಸೈಟಿ 12 ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳನ್ನು ನಡೆಸುತ್ತಿದೆ, ಅವುಗಳಲ್ಲಿ 6 ಮುಂಬೈ ವಿಶ್ವವಿದ್ಯಾಲಯಕ್ಕೆ, 5 ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಮತ್ತು ಒಂದು ಪುಣೆ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ್ದು, 30,000 ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಶಿಕ್ಷಣವನ್ನು ನೀಡುತ್ತಿದೆ, ಅವರಲ್ಲಿ 15,000 ಕ್ಕೂ ಹೆಚ್ಚು ಜನರು ಹಿಂದುಳಿದ ವರ್ಗಗಳಿಗೆ ಸೇರಿದವರು.
ಇವುಗಳಲ್ಲದೆ, ಪಿ.ಇ.ಎಸ್ ಸಂಸ್ಥೆಯು ಅನೇಕ ಪ್ರೌಢಶಾಲೆಗಳು, ಡಿಪ್ಲೊಮಾ ಸಂಸ್ಥೆಗಳು ಮತ್ತು ಹಾಸ್ಟೆಲ್ಗಳನ್ನು ನಡೆಸುತ್ತಿದೆ. ಸಾಮಾನ್ಯವಾಗಿ ಬಡ ಜನರಿಗೆ ಮತ್ತು ಮುಖ್ಯವಾಗಿ ದಮನಿತ ಸಮುದಾಯಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತ್ತು ಹಿಂದುಳಿದ ಒಬಿಸಿಗಳಿಗೆ ಶಿಕ್ಷಣ ನೀಡುವುದು ಈ ಸಂಸ್ಥೆಯ ಧ್ಯೇಯವಾಗಿದೆ. ಈ ಸಂಸ್ಥೆ ಇದೀಗ ದೊಡ್ಡ ಆಲದ ಮರದಂತೆ ಹಬ್ಬಿದೆ. ಅದರ ಪ್ರಭಾವದಿಂದ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ‘ಕರ್ನಾಟಕ ಪೀಪಲ್ ಎಜುಕೇಷನ್ ಸೊಸೈಟಿ’ಯನ್ನು ಸ್ಥಾಪಿಸುತ್ತಾರೆ. ಇದರಂತೆ ಭಾರತದಾದ್ಯಂತ ದಲಿತ ದಮನಿತ ಸ್ಥಿತಿಯಿಂದ ಮೇಲೆ ಬಂದವರು ಪೀಪಲ್ ಎಜುಕೇಷನ್ ಸೊಸೈಟಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಿದ್ದೇಕೆ? ಬಾಬಾ ಸಾಹೇಬರ ಶಿಕ್ಷಣದ ಬಗೆಗಿನ ಅಗಾಧವಾದ ಸೆಳೆತಕ್ಕೆ ತಾತ್ವಿಕ ತಳಹದಿಯನ್ನು ಹಾಕಿದವರು ಯಾರು? ಎನ್ನುವ ಪ್ರಶ್ನೆಗಳು ಎದುರು ನಿಲ್ಲುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಗಮನಾರ್ಹ ಸಂಗತಿಯೊಂದು ಕಾಣುತ್ತಿದೆ.
ಡಾ.ಅಂಬೇಡ್ಕರ್ ಅವರು 1913ರಲ್ಲಿ ಅಮೆರಿಕಾದ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋದ ನಂತರ ಶಿಕ್ಷಣದ ಕುರಿತಾದ ತಾತ್ವಿಕ ನೆಲೆಗಳನ್ನು ಶೋಧಿಸತೊಡಗಿದರು. ಶಿಕ್ಷಣದ ಬಗ್ಗೆ ಆರಂಭದ ಚಿಂತನೆಗಳು ತಮ್ಮ ಗುರುಗಳಾದ ಪ್ರೊ.ಜಾನ್ ಡಿವೆ ಅವರ ಪ್ರಭಾವದಿಂದ ರೂಪುಗೊಂಡಿತು. ಜಾನ್ ಡಿವೆ ಅವರ ‘ಡೆಮಾಕ್ರಸಿ ಅಂಡ್ ಎಜುಕೇಷನ್’ ಕೃತಿಯನ್ನು ಮತ್ತೆ ಮತ್ತೆ ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ವಿಶೇಷವಾಗಿ ಈ ಕೃತಿಯ ‘ಶಿಕ್ಷಣದಲ್ಲಿ ಪ್ರಜಾಸತ್ತಾತ್ಮಕ ಪರಿಕಲ್ಪನೆ’ ಎನ್ನುವ ಅಧ್ಯಾಯದಲ್ಲಿ ಪ್ರಜಾಪ್ರಭುತ್ವದ ಆದರ್ಶದ ಬಗ್ಗೆ ಮಾತನಾಡುತ್ತಾರೆ. ಶಾಲಾ ಶಿಕ್ಷಣದ ಬಗ್ಗೆ ಡಿವೆಯವರು ಮಾತನಾಡುತ್ತಾ ಶಾಲಾ ಶಿಕ್ಷಣವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಮತ್ತು ಮಾನವ ಅಭಿವೃದ್ಧಿಯನ್ನು ಹೆಚ್ಚಿಸಲು ಬಹಳ ಮುಖ್ಯ ಸಾಧನವಾಗಿದೆ ಎನ್ನುತ್ತಾರೆ. (ಅಶೋಕ್ ಗೋಪಾಲ್:132/2023) ಈ ಚಿಂತನೆಯನ್ನು ಆಧರಿಸಿ ಅಂಬೇಡ್ಕರ್ ‘ಭಾರತದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ’ ಎಂಬ ಲೇಖನವನ್ನು ಬರೆಯುತ್ತಾರೆ. ಡಿವೆ ಅವರ ಎಲ್ಲಾ ಆಲೋಚನೆಗಳನ್ನು ಅಂಬೇಡ್ಕರ್ ಕುರುಡಾಗಿ ಅನುಕರಿಸಲಿಲ್ಲ, ಆದರೆ ‘ಯಾವುದೇ ದೇಶದಲ್ಲಿ ಪ್ರಜಾಸತ್ತಾತ್ಮಕ ಸಮಾಜ ಉಳಿಯಬೇಕಾದರೆ ಆಯಾ ದೇಶದ ಜನರು ಹೆಚ್ಚೆಚ್ಚು ಶಿಕ್ಷಣ ಪಡೆಯಬೇಕು’ ಎನ್ನುವ ನಿಲುವು ಮಾತ್ರ ಅಂಬೇಡ್ಕರ್ ಅವರನ್ನು ಗಾಢವಾಗಿ ಪ್ರಭಾವಿಸುತ್ತದೆ. ಕೆಲವೊಮ್ಮೆ ಪ್ರಭುತ್ವವೇ ಶಿಕ್ಷಣ ಕೊಡುವಾಗ ಪ್ರಭುತ್ವಕ್ಕೆ ವಿರೋಧ ಬರದ ಹಾಗೆ ಪಠ್ಯಕ್ರಮವನ್ನು ತಮಗೆ ಬೇಕಾದಂತೆ ರೂಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ನಾವೇ ಡೆಮಾಕ್ರಟಿಕ್ ಆದ ಶಾಲಾ ಪಠ್ಯಗಳನ್ನು ರೂಪಿಸಿ ಶಿಕ್ಷಣ ಕೊಡಿಸುವ ಶಾಲೆಗಳನ್ನೂ ನಾವೇ ತೆರೆಯಬೇಕಾಗುತ್ತದೆ ಎನ್ನುವ ಅರ್ಥದಲ್ಲಿ ಜ್ಹಾನ್ ಡಿವೆ ಚಿಂತಿಸುತ್ತಾರೆ. ಈ ಬಗೆಯ ಡಿವೆಯವರ ಶಾಲಾ ಶಿಕ್ಷಣವನ್ನು ರೂಪಿಸುವ ಬಗೆಗಿನ ಆಲೋಚನೆಯ ಪರಿಣಾಮ 1945ರಲ್ಲಿ ಅಂಬೇಡ್ಕರ್ ಅವರನ್ನು ಪೀಪಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಲು ಪ್ರೇರೇಪಿಸಿರಬಹುದು. ಮುಂದೆ ಪಿ.ಎ.ಎಸ್ (ಪೆಸ್) ಮೂಲಕ 1946ರಲ್ಲಿ ಮುಂಬೈನಲ್ಲಿ ಸಿದ್ದಾರ್ಥ ಕಾಲೇಜು, ಔರಾಂಗಬಾದನಲ್ಲಿ ಮಿಲಿಂದ ಕಾಲೇಜ್ ಸ್ಥಾಪಿಸುತ್ತಾರೆ. ಅಂದರೆ ಶಿಕ್ಷಣದ ಥಿಯರಿಯಿಂದ ಪ್ರಾಯೋಗಿಕ ನೆಲೆಗೆ ಇಳಿಯುತ್ತಾರೆ.

ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂದೇಶಗಳಲ್ಲಿ ಸಾಮಾನ್ಯವಾಗಿ ‘ಶಿಕ್ಷಣ ಸಂಘಟನೆ ಹೋರಾಟ’ ಎನ್ನುವ ಸೂತ್ರವನ್ನು ಕಾಣುತ್ತೇವೆ. ದಮನಿತರೆಲ್ಲರೂ ಶಿಕ್ಷಿತರಾಗಿ, ಜಾಗೃತರಾದ ನಂತರ ಒಟ್ಟಾಗಿ ಸಂಘಟಿತರಾಗಿ, ನಿಮ್ಮ ಹಕ್ಕುಗಳ ಪಡೆಯಲು ಹೋರಾಟ ಮಾಡಿ ಎನ್ನುವ ಕ್ರಿಯೆಯನ್ನು ಅಂಬೇಡ್ಕರ್ ಹೇಳುತ್ತಾರೆ. ಈ ಒಂದೊಂದು ಸಂಗತಿಯ ಬಗ್ಗೆಯೂ ಅಂಬೇಡ್ಕರ್ ಆಳವಾಗಿ ಚಿಂತಿಸಿದ್ದರು. ಅಂತೆಯೇ ತರ್ಕ-ಪ್ರಯೋಗ-ಆನ್ವಯಿಕತೆಯ ವೈಜ್ಞಾನಿಕ ನೆಲೆಯಿಂದ ಕಂಡುಕೊಂಡ ಸತ್ಯದ ನೆಲೆಯಲ್ಲಿ ಅಂಬೇಡ್ಕರ್ ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಟ ಮಾಡಿ ಎಂಬ ಸೂತ್ರವನ್ನು ನೀಡಿದ್ದಾರೆ.
ಇದರಲ್ಲಿ ಅಂಬೇಡ್ಕರ್ ಅವರ ಮೊದಲ ಆದ್ಯತೆ ಶಿಕ್ಷಣ. ಅಂಬೇಡ್ಕರ್ ಶಿಕ್ಷಣವನ್ನು ಯಾಕೆ ಅಷ್ಟು ಗಂಭೀರವಾಗಿ ಪರಿಗಣಿಸಿದರು, ಪೀಪಲ್ ಎಜುಕೇಷನ್ ಸೊಸೈಟಿಯ ಮೂಲಕ ಶಿಕ್ಷಣದ ಪ್ರಾಯೋಗಿಕತೆಯಿಂದ ಅಂಬೇಡ್ಕರ್ ಕಲಿತದ್ದೇನು ಎನ್ನುವುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಿದೆ.
ಇದನ್ನು ಓದಿದ್ದೀರಾ?: ಜಾತ್ಯತೀತತೆ, ಸಮಾಜವಾದದ ಪ್ರಖರ ಪ್ರತಿಪಾದಕ ಬುದ್ಧ; ಇದನ್ನು ಮರೆಮಾಚಲಾಗದು ಆರ್ಎಸ್ಎಸ್
ಅಂಬೇಡ್ಕರ್ ಅವರು 1904ರಲ್ಲಿ ಮುಂಬೈನ ಎಲ್ಫಿನಸ್ಟನ್ ಹೈಸ್ಕೂಲಲ್ಲಿ ಓದುವಾಗ ಒಬ್ಬ ಬ್ರಾಹ್ಮಣ ಶಿಕ್ಷಕ ‘ಅರ್ಹೆ, ಅಂಬೇಡ್ಕರ್ ನೀನೊಬ್ಬ ಮಹಾರ್, ಶಿಕ್ಷಣ ಪಡೆದುಕೊಂಡು ಏನು ಮಾಡುತ್ತೀ?’ ಎಂದು ಪ್ರಶ್ನಿಸುತ್ತಾನೆ. ತಕ್ಷಣಕ್ಕೆ ಅಂಬೇಡ್ಕರ್ ‘ಗುರೂಜಿ, ನಾನು ಶಿಕ್ಷಣ ಪಡೆದು ಏನು ಮಾಡುತ್ತೇನೆ ಎನ್ನುವುದು ನಿಮಗೆ ಸಂಬಂಧವಿಲ್ಲದ ವಿಷಯ. ಮುಂದೆ ಈ ತರಹದ ಪ್ರಶ್ನೆಗಳನ್ನು ಕೇಳಬೇಡಿ. ಪರಿಣಾಮ ನೆಟ್ಟಗಿರಲ್ಲ’ ಎಂದು ಗಡುಸಾಗಿಯೇ ಉತ್ತರಿಸುತ್ತಾರೆ (ಅಶೋಕ್ ಗೋಪಾಲ್:97/2023). ಈ ಉತ್ತರದಲ್ಲಿ ಪ್ರೌಢಶಾಲೆಯಲ್ಲಿರುವಾಗಲೇ ಅಂಬೇಡ್ಕರ್ ಅವರು ಶಿಕ್ಷಣದ ಶಕ್ತಿ ಏನು ಎನ್ನುವುದನ್ನು ಗ್ರಹಿಸಿದ್ದರು ಎನ್ನುವುದು ಮನವರಿಕೆಯಾಗುತ್ತದೆ.
ಭಾರತದಲ್ಲಿನ ಶಿಕ್ಷಣದ ಬಗ್ಗೆ ಅಂಬೇಡ್ಕರ್ ಅವರಿಗೆ ಖಚಿತವಾದ ತಿಳಿವಿತ್ತು. ಹಾಗಾಗಿಯೇ, ಭಾರತದಲ್ಲಿ ಬುದ್ಧಿಜೀವಿಗಳಾದ ಬ್ರಾಹ್ಮಣರು ಶಿಕ್ಷಣದಲ್ಲಿ ತಮ್ಮ ಏಕಸ್ವಾಮ್ಯ ಸ್ಥಾಪಿಸಿಕೊಂಡಿದ್ದೂ ಅಲ್ಲದೆ, ಕೆಳವರ್ಗದವರು ಶಿಕ್ಷಣ ಪಡೆಯುವುದನ್ನು ಅಪರಾಧವೆಂದು ಪರಿಗಣಿಸಿ ಅದಕ್ಕಾಗಿ ಅವರ ನಾಲಿಗೆ ಕತ್ತರಿಸುವ, ಅವರ ಕಿವಿಗಳಲ್ಲಿ ಕಾಯ್ದ ಸೀಸವನ್ನು ಸುರಿಯುವ ಶಿಕ್ಷೆಯನ್ನು ವಿಧಿಸುವ ಕಟ್ಟಳೆಯನ್ನು ಭಾರತದಲ್ಲಿ ಮಾತ್ರ ಕಾಣಬಹುದು. ಇದರ ಪರಿಣಾಮವಾಗಿ ಭಾರತದಲ್ಲಿ ಶತಶತಮಾನಗಳಿಂದ ಬ್ರಾಹ್ಮಣರು ಗುಲಾಮವರ್ಗಗಳವರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಿದ್ದಾರೆ. ಇಂದೂ ಕೂಡ ಬ್ರಾಹ್ಮಣರು ದಾಸ್ಯವರ್ಗಗಳ ಶಿಕ್ಷಣಕ್ಕೆ ವಿರೋಧ ಒಡ್ಡುತ್ತಿದ್ದಾರೆ. (ಸಂ:7/ಪು:438) ಎಂಬುದನ್ನು 1930ರ ಸಂದರ್ಭದಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. ಮುಂಬೈನ ಶಾಸಕಾಂಗದ ನಾಮನಿರ್ದೇಶಿತ ಸದಸ್ಯರಾಗಿದ್ದಾಗ ಮುಂಬೈ ಶಾಸನ ಸಭೆಯಲ್ಲಿ ಬ್ರಿಟೀಷ್ ಶಿಕ್ಷಣ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಸಮುದಾಯದವರನ್ನು ಹೇಗೆ ಕಡೆಗಣಿಸಲಾಗಿದೆ ಎನ್ನುವುದರ ಬಗ್ಗೆ ಅಧ್ಯಯನ ಮಾಡಿ ಅಂಕೆ ಸಂಖ್ಯೆಗಳೊಂದಿಗೆ ವಿಶ್ಲೇಷಿಸುತ್ತಾರೆ. ಈ ಮೂಲಕ ಬ್ರಿಟಿಷ್ ಸರಕಾರವನ್ನು ದಮನಿತ ಸಮುದಾಯಗಳ ಶಿಕ್ಷಣದ ಕಡೆಗೆ ಗಮನ ಸೆಳೆಯಲು ಪ್ರಯತ್ನಿಸಿದರು. ಬಾಂಬೆ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ 1927ರಲ್ಲಿ ಶಿಕ್ಷಣಕ್ಕೆ ಹಣಕಾಸು ನಿಗದಿಮಾಡುವ ಬಗ್ಗೆ ದೀರ್ಘವಾಗಿ ಚರ್ಚಿಸುತ್ತಾರೆ.
ನನ್ನ ಗೌರವಾನ್ವಿತ ಸ್ನೇಹಿತರಾದ ಶಿಕ್ಷಣ ಮಂತ್ರಿಗಳ ಲಕ್ಷ್ಯವನ್ನು ಸೆಳೆಯಬೇಕೆಂದಿರುವ ಇನ್ನೊಂದು ವಿಷಯವಿದೆ. ಅದೆಂದರೆ ನಾವು ಈಗ ಪಾಥಮಿಕ ಶಿಕ್ಷಣದ ಬಗ್ಗೆ ಖರ್ಚು ಮಾಡುತ್ತಿರುವ ಹಣವು ಹೆಚ್ಚಿನ ಮಟ್ಟಿಗೆ ವ್ಯರ್ಥವಾಗಿ ಖರ್ಚಾಗುತ್ತಿದೆ ಎಂಬುದು. ಪ್ರಾಥಮಿಕ ಶಾಲೆಯ ಆವರಣವನ್ನು ಪ್ರವೇಶಿಸುವ ಪ್ರತಿಯೊಂದು ಮಗುವೂ ಶಿಕ್ಷಣ ಪಡೆದುಕೊಂಡೇ ಅದನ್ನು ಬಿಡತಕ್ಕದು ಎಂಬುದೇ ಪ್ರಾಥಮಿಕ ಶಿಕ್ಷಣದ ಗುರಿಯಾಗಿರಬೇಕು. ಆದರೆ ನಾವು ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಪ್ರಾಥಮಿಕ ಶಾಲೆಯನ್ನು ಪ್ರವೇಶಿಸುವ ಪ್ರತಿ ನೂರು ಮಕ್ಕಳಲ್ಲಿ ಕೇವಲ ಹದಿನೆಂಟು ಮಕ್ಕಳು ನಾಲ್ಕನೆಯ ವರ್ಗದವರೆಗೆ ಓದುತ್ತಾರೆ. ಉಳಿದವರೆಲ್ಲ ಅಂದರೆ ಪ್ರತಿ ನೂರರಲ್ಲಿ 82 ಮಕ್ಕಳು ಪುನಃ ಅಶಿಕ್ಷಿತರಾಗಿಯೇ ಉಳಿಯುತ್ತಾರೆ. ಈ ಪರಿಸ್ಥಿತಿಗೆ ಪರಿಹಾರವೇನು? (ಸಂ-2,ಪು 50,2015) ಎಂದು ಪ್ರಶ್ನಿಸುತ್ತಾರೆ. ಮುಂದುವರಿದು, ಸಾಧ್ಯವಿದ್ದ ಎಲ್ಲ ವಿಧಾನಗಳಿಂದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಈ ವಾದವನ್ನು ನಾನು ಮುಂದಿಡುತ್ತಿರುವುದಕ್ಕೆ ಕಾರಣವೆಂದರೆ ಸಮಾಜದ ಕೆಳವರ್ಗದವರು ಹೈಸ್ಕೂಲಿನಲ್ಲಿ, ಮಿಡಲ್ ಸ್ಕೂಲುಗಳಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿ ಈಗೀಗ ಪ್ರವೇಶ ಪಡೆಯುತ್ತಿದ್ದಾರೆ. ಕಾರಣ ಇಲಾಖೆಯ ನೀತಿಯು ಉಚ್ಚ ಶಿಕ್ಷಣವು ಕೆಳವರ್ಗದವರಿಗೆ ಸಾಧ್ಯವಿದ್ದಷ್ಟು ಕಡಿಮೆ ಖರ್ಚಿನಲ್ಲಿ ಲಭ್ಯವಾಗುವಂತೆ ಮಾಡುವುದಾಗಬೇಕು ಎಂದು ಎಚ್ಚರಿಸುತ್ತಾರೆ.

ದಮನಿತ ಸಮುದಾಯಗಳು ನೀತಿ ನಿರೂಪಣೆಗಳನ್ನು ಜಾರಿಗೊಳಿಸುವ ಅಧಿಕಾರಿಗಳಾಗಬೇಕು ಎನ್ನುವುದು ಅಂಬೇಡ್ಕರ್ ಅವರ ಕನಸಾಗಿತ್ತು. ಹಾಗಾಗಿಯೇ ಅವರು ನಿಮ್ನವರ್ಗಗಳಿಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕೆಂದು ಚರ್ಚಿಸುವಷ್ಟು ಮುಖ್ಯವಾಗಿಯೇ ದಮನಿತ ಸಮುದಾಯಗಳಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಶಿಕ್ಷಣ ದೊರೆಯಬೇಕೆಂದು ಆಲೋಚಿಸುತ್ತಿದ್ದರು. ಈ ಬಗ್ಗೆ ಮಾತನಾಡುತ್ತಾ, ದಕ್ಷತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೇಮಕಾತಿಯ ಆಧಾರವನ್ನಾಗಿಟ್ಟುಕೊಳ್ಳುವುದರ ಮೂಲಕ, ಅಸ್ಪೃಶ್ಯರ ಬಗೆಗಿರುವ ತಮ್ಮ ವಿರೋಧ ನ್ಯಾಯಸಮ್ಮತವೆನಿಸುವಂತೆ ಮಾಡಲು ಹಿಂದುಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿ ಕೂಡ ಅವರ ವಾದ ಅಸಂಬದ್ಧವೆನಿಸುತ್ತದೆ. ಸಾರ್ವಜನಿಕ ಸೇವಾಕ್ಷೇತ್ರಗಳಿಗೆ ದಕ್ಷ ವ್ಯಕ್ತಿಗಳನ್ನು ಆರಿಸಲು ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಸೂಕ್ತ ವ್ಯವಸ್ಥೆ ಹೌದೇ ಅಲ್ಲವೇ ಎನ್ನುವುದು ಮುಖ್ಯವಲ್ಲ. ಎಲ್ಲಾ ಜಾತಿ ಪಂಗಡದವರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವಕಾಶವಿರುತ್ತದೆ ಎಂಬ ಏಕೈಕ ಕಾರಣದಿಂದಾಗಿ ಸಾರ್ವಜನಿಕ ಸೇವೆಗಳಲ್ಲಿ ಅವಕಾಶ ಲಭಿಸುತ್ತದೆಯೆ ಎಂಬುದೇ ಈಗಿನ ಪ್ರಶ್ನೆಯಾಗಿದೆ. ಅದು ಸರ್ಕಾರದ ಶೈಕ್ಷಣಿಕ ಪದ್ಧತಿಯನ್ನು ಅವಲಂಬಿಸಿರುತ್ತದೆ. ಅದು ಸಾಕಷ್ಟು ಪ್ರಜಾಸತ್ತಾತ್ಮಕವಾಗಿದೆಯೆ? ಎಲ್ಲಾ ವರ್ಗದ ಜನರೂ ಸ್ಪರ್ಧಿಸಲು ಮುಂದಾಗುವಷ್ಟು ಶಿಕ್ಷಣ ವ್ಯಾಪಕವಾಗಿದೆಯೆ? ಮತ್ತು ಸಾಕಷ್ಟು ಬಳಕೆಯಾಗಿದೆಯೆ? ಇಲ್ಲವಾದಲ್ಲಿ ಮುಕ್ತ ಸ್ಪರ್ಧಾತ್ಮಕ ವ್ಯವಸ್ಥೆ ಇದ್ದಾಗಲೂ ಕೂಡ ಬಹಳಷ್ಟು ಜನರು ಸ್ಪರ್ಧೆಯಿಂದ ಹೊರಗುಳಿಯಬೇಕಾಗುತ್ತದೆ.
ಇದನ್ನು ಓದಿದ್ದೀರಾ?: ಜಾತ್ಯತೀತ, ಸಮಾಜವಾದ ಬೇಡ; ಇದು ನೂರಕ್ಕೆ ನೂರು ಮೀಸಲಾತಿ ಪಡೆದವರ ಗೊಣಗಾಟ
ವ್ಯಾಪಕ ಶಿಕ್ಷಣವೆಂಬ ಮೂಲಭೂತ ಆವಶ್ಯಕತೆ ಭಾರತದಲ್ಲಿ ಇಲ್ಲವಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಹಿಂದುಗಳ ಅದರಲ್ಲೂ ವಿಶೇಷವಾಗಿ ಸವರ್ಣೀಯ ಹಿಂದುಗಳ ಏಕಸ್ವಾಮ್ಯವಾಗಿದೆ. ಅಸ್ಪೃಶ್ಯತೆಯ ಕಾರಣದಿಂದಾಗಿ ಅಸ್ಪೃಶ್ಯರು ಶಿಕ್ಷಣದಲ್ಲಿನ ಅವಕಾಶಗಳಿಂದ ವಂಚಿತರಾಗಿದ್ದಾರೆ. ಉನ್ನತ ಹುದ್ದೆಗಳಿಗೆ ಆವಶ್ಯಕವಾದದ್ದು ಉನ್ನತ ಶಿಕ್ಷಣ; ಅದಕ್ಕಿರುವ ಮಹತ್ವದಿಂದಾಗಿ ಸಾರ್ವಜನಿಕ ಸೇವಾಕ್ಷೇತ್ರದಲ್ಲಿರುವ ಉನ್ನತ ಹುದ್ದೆಗಳು ಬಹಳ ಮುಖ್ಯ. ಇವುಗಳು ಅನಕ್ಷರತೆ ದಾರಿದ್ರ್ಯದ ಕಾರಣದಿಂದಾಗಿ ಅಸ್ಪೃಶ್ಯರಿಗೆ ನಿಲುಕುವುದೆ ಇಲ್ಲ. ಸರ್ಕಾರ ಅವರಿಗೆ ಉನ್ನತ ಶಿಕ್ಷಣ ನೀಡುವ ಆರ್ಥಿಕ ಜವಾಬ್ದಾರಿಯನ್ನು ಹೊಂದಿಲ್ಲ- ಅದನ್ನು ಅಸ್ಪೃಶ್ಯರು ತಮ್ಮ ಗೊತ್ತುವಳಿಯ ಮೂಲಕ ಒತ್ತಾಯಿಸುತ್ತಿದ್ದಾರೆ. ಹಿಂದುಗಳ ಉದಾರತೆ ನಾಚಿಕೆಯಾಗುವಷ್ಟು ಜಾತೀಯ ಸ್ವರೂಪದ್ದಾಗಿದೆ. ಹೀಗಾಗಿ, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಹುದ್ದೆಯನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅವಲಂಬಿಸಿ ಎಂದು ಅಸ್ಪೃಶ್ಯರಿಗೆ ಹೇಳುವುದು ಅವರಿಗೆ ಅನ್ಯಾಯವೆಸಗಿದಂತೆ. (ಸಂ:7/ಪು:397-98) ಎಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಮನಿತ ಸಮುದಾಯಗಳು ಹಿಂದುಳಿದಿರುವುದನ್ನು ಗಮನ ಸೆಳೆಯುತ್ತಾರೆ.
1930 ರ ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ವಿದ್ಯಾರ್ಥಿಗಳನ್ನು ಕುರಿತು ಹಲವು ಭಾಷಣಗಳನ್ನು ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಲಿಯಲು ನನ್ನ ಕಾಲದಲ್ಲಿದ್ದ ಸೀಮಿತ ಅವಕಾಶಗಳಿಗಿಂತ ದಮನಿತ ಸಮುದಾಯಗಳಿಗೆ ಈಗ ಕಲಿಯಲು ಸಾಕಷ್ಟು ಅವಕಾಶದ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಕಠಿಣ ಪರಿಶ್ರಮದಿಂದ ವಿದ್ಯೆ ಕಲಿಯಿರಿ ಎಂದು ಹೇಳುತ್ತಾರೆ. ಹೀಗೆ ಹೇಳುವಾಗ ತಮ್ಮದೇ ಉದಾಹರಣೆಗಳನ್ನು ಕೊಡುತ್ತಾರೆ. 1932 ಅಕ್ಟೋಬರ್ 28ರಂದು ಮುಂಬೈನಲ್ಲಿ ಮಾತನಾಡುತ್ತಾ ಪಾರಂಪರಿಕ ವೃತ್ತಿಗಳನ್ನು ಬಿಟ್ಟು ಶಿಕ್ಷಣ ಕಲಿಯಿರಿ ಎಂದು ಕರೆಕೊಡುತ್ತಾರೆ. ಮೇಲ್ಜಾತಿಗಳು ಹೇಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೋ ಹಾಗೆ ದಲಿತ ಸಮುದಾಯದವರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸಬೇಕು ಎನ್ನುತ್ತಾರೆ. ಅನೇಕರು ತಮ್ಮ ಶಿಕ್ಷಣದಿಂದ ಇತರರನ್ನು ಹೇಗೆ ಶೋಷಿಸಬಹುದೆಂದು ಕಲಿಯುತ್ತಾರೆ. ಪಂಡಿತ, ಶೇಟ್ಜಿ, ಭಟ್ಟಿ, ವಕೀಲರು ಶಿಕ್ಷಣವನ್ನು ಶೋಷಣೆಯ ಅಸ್ತ್ರವಾಗಿ ಬಳಸುತ್ತಾರೆ. ಹಾಗಾಗಿಯೇ ಕೆಳಜಾತಿಗಳು ದಮನಿತ ಸಮುದಾಯಗಳು ಶಿಕ್ಷಣ ಕಲಿಯಬೇಕಾಗಿರುವುದು ಶೋಷಣೆಯಿಂದ ಮುಕ್ತವಾಗುವ ಮತ್ತು ಶೋಷಣೆಯ ವಿರುದ್ಧ ಬಂಡೇಳುವ ಅಸ್ತ್ರ ಎನ್ನುತ್ತಾರೆ. ಎಲ್ಲರೂ ವಿದ್ಯಾವಂತರಿಗೆ ಭಯ ಪಡುವಂತಾಗಬೇಕು. ಹಾಗಾಗಿ ಶಿಕ್ಷಣದ ಜತೆ ಒಳ್ಳೆಯ ನಡೆನುಡಿಗಳನ್ನು ಕಲಿಯಬೇಕಾಗುತ್ತದೆ. ಶಿಕ್ಷಣವು ನೈತಿಕತೆಯನ್ನು ಕಲಿಸಬೇಕು ಎನ್ನುತ್ತಾರೆ.

ಹೀಗೆ ಬಾಬಾ ಸಾಹೇಬರು ಶಿಕ್ಷಣದ ಬಗೆಗಿನ ಅರಿವಿನ ನೆಲೆಗಳನ್ನು ಪಾಶ್ಚಿಮಾತ್ಯರಿಂದ ಕಲಿತರೂ ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಶಿಕ್ಷಣದ ಬಗೆಗೆ ಆಳವಾದ ತಿಳಿವನ್ನು ಮಂಡಿಸಿದ್ದಾರೆ. ಭಾರತದಂತಹ ಜಾತಿವಾದಿ ದೇಶದಲ್ಲಿ ದಮನಿತ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಲು ಪಡುತ್ತಿರುವ ಬಿಕ್ಕಟ್ಟುಗಳನ್ನು ಬಾಬಾ ಸಾಹೇಬರು ತಾವೇ ಸ್ಥಾಪಿಸಿದ ಶಾಲಾ ಕಾಲೇಜು ವಸತಿ ಶಾಲೆಗಳ ಅನುಭವದ ಮೂಲಕ ಕಂಡುಕೊಂಡಿದ್ದರು. ಪೀಪಲ್ ಎಜುಕೇಷನ್ ಸೊಸೈಟಿಯ ಮೂಲಕ ಸ್ಥಾಪಿಸಿದ ಶಾಲೆ ಕಾಲೇಜುಗಳಲ್ಲಿ ಕಲಿಯುವ ಅಸ್ಪೃಶ್ಯ ವಿದ್ಯಾರ್ಥಿಗಳನ್ನು ಗಮನಿಸಿ ಪ್ರಾಯೋಗಿಕ ನೆಲೆಯಲ್ಲಿಯೂ ಅಂಬೇಡ್ಕರ್ ಶಿಕ್ಷಣದ ಒಳಸುಳಿಗಳನ್ನು ಅರಿಯುತ್ತಾರೆ. ಯಾಕೆ ದಮನಿತ ಸಮುದಾಯಗಳ ಮಕ್ಕಳಿಗೆ ವಸತಿಶಾಲೆಗಳ ಅಗತ್ಯವಿದೆ ಎಂದು ಹೇಳುತ್ತಾ, ದಮನಿತ ಸಮುದಾಯದ ಮಕ್ಕಳು ಮನೆಯ ಕಡುಕಷ್ಟಗಳನ್ನು ದಿನ ದಿನವೂ ನೋಡುತ್ತಾ ಅನುಭವಿಸುತ್ತಾ ಅಂತಹ ಮನೆಗಳಿಂದ ಶಾಲೆಗಳಿಗೆ ಕಲಿಯಲು ಬಂದಾಗಲೂ ಮಕ್ಕಳಿಗೆ ಮನೆಯ ಕಡುಕಷ್ಟವೇ ಕಣ್ಮುಂದೆ ಇರುತ್ತದೆ. ಹಾಗಾಗಿ ಅವರುಗಳು ಕಲಿಕೆಯಲ್ಲಿ ಆಸಕ್ತಿ ತೋರುವುದು ಕಷ್ಟ. ಇದೇ ಮಕ್ಕಳು ಊಟ ವಸತಿ ಇರುವ ಹಾಸ್ಟೆಲ್ಗಳಲ್ಲಿದ್ದು ಶಾಲೆಗಳಲ್ಲಿ ಕಲಿತರೆ ಕಲಿಕಾ ವಾತಾವರಣ ಬದಲಾಗಿ ಜತೆಗಿರುವ ವಿದ್ಯಾರ್ಥಿಗಳನ್ನು ನೋಡುತ್ತಾ ನಾನೂ ಕಲಿಯಬೇಕೆಂಬ ಛಲ ಬರುತ್ತದೆ ಎನ್ನುತ್ತಾರೆ. ಹೀಗಾಗಿ ಮುಂದೆ ಬಾಬಾ ಸಾಹೇಬರು ಸಂವಿಧಾನ ರಚನೆಯಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನೂ, ವಸತಿ ಶಾಲೆಗಳನ್ನೂ ಪರಿಚಯಿಸುತ್ತಾರೆ. ಈಗಿನ ಪರಿಶಿಷ್ಟ ಜಾತಿ/ ಪಂಗಡ/ ಹಿಂದುಳಿದ ವರ್ಗದ/ ಧಾರ್ಮಿಕ ಅಲ್ಪಸಂಖ್ಯಾತ ಮಕ್ಕಳ ಸರಕಾರಿ ಹಾಸ್ಟೆಲ್ಗಳು ಅಂಬೇಡ್ಕರ್ ಕಂಡ ಕನಸಾಗಿದೆ.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು