ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಟಖಂಡಿಕಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಬಳಿಕ ಪಿಡಿಒಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿ ಜಿ ಬಿರಾದಾರ ಮಾತನಾಡಿ, “ಭಂಟನೂರ ಪಂಚಾಯಿತಿ ವ್ಯಾಪ್ತಿಗೆ ಬರುವ ಗೊಟಖಂಡಿಕಿ ಗ್ರಾಮದಲ್ಲಿ ಕಳೆದ 11ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗದೆ ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಕುರಿತು ಗ್ರಾ.ಪಂ ಪಿಡಿಒ ಹಾಗೂ ಮೇಲಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಗೊಟಖಂಡಕಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಮುಗಿದಿದ್ದು, ಇದಕ್ಕೆ ನೀರು ಪೂರೈಸಲು ಖಾಸಗಿ ಮಾಲೀಕರ ಜಮೀನಲ್ಲಿ ನೀರಿನ ಟ್ಯಾಂಕರ್ ಮಾಡಲಾಗಿದೆ. ಹೊಲದ ಮಾಲೀಕರು ನೀರು ಬಿಡಲು ತಕರಾರು ತೆಗೆದಿದ್ದು, ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ಸಮಸ್ಯೆಯನ್ನು ಅಧಿಕಾರಿಗಳು ಪರಿಹರಿಸದೇ ಇರುವುದರಿಂದ ಸಮಸ್ಯೆ ಉಲ್ಬಣಗೊಂಡು ಗ್ರಾಮಸರಿಗೆ ತೊಂದರೆಯಾಗಿದೆ “ಎಂದು ಹೇಳಿದರು.
ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ಗುರುಪ್ರಸಾದ ಬಿ ಜಿ ಮಾತನಾಡಿ, “ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀದಿ ದೀಪಗಳು ಬಂದ್ ಆಗಿವೆ. ಜೊತೆಗೆ 15ನೇ ಹಣಕಾಸಿನ ಪ್ರವರ್ಗ-1 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನದ ದುರುಪಯೋಗ ಆಗಿದ್ದು, ಇದರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನಿನ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
“ಗ್ರಾಮದಲ್ಲಿ ಸುಸಜ್ಜಿತ ಚರಂಡಿ ಹಾಗೂ ರಸ್ತೆಗಳು ಇಲ್ಲದೆ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿದಾಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ” ಎಂದು ತಿಳಿಸಿದರು.
“ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಸುರೇಶ ದಳವಾಯಿ ಅವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ ಒಂದು ವಾರದ ಒಳಗಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸುತ್ತೇನೆ” ಎಂದು ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದರು.
ಇದನ್ನೂ ಓದಿದ್ದೀರಾ? ಚಿಂತಾಮಣಿ | ಪಿಎಂಶ್ರೀ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬರಹ ಪುಸ್ತಕ, ಲೇಖನಿ ಸಾಮಗ್ರಿಗಳ ವಿತರಣೆ
ಪಿಡಿಒ ಅವರ ಭರವಸೆ ಮಾತಿಗೆ ಗ್ರಾಮಸ್ಥರು ಒಪ್ಪಿಕೊಂಡು, ಬೇಗ ಸಮಸ್ಯೆ ಪರಿಹರಿಸದೆ ಹೋದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮನಗೌಡ ಬಿರಾದಾರ, ಸಾವೇಬಗೌಡ ಪೋಲಿಸಿ, ಕಾಳಪ್ಪ ಬಡಿಗೇರ, ರಾಮನಗೌಡ ಬಿರಾದಾರ, ದೇವು ಚಟ್ನಳ್ಳಿ, ಸಂಜೀವಪ್ಪ ದಾಸರ, ದೇವಪ್ಪ ಮಾದರ, ಶಂಕ್ರಪ್ಪ ಹರಿಜನ, ಚಂದ್ರಶೇಖರ ಚಲವಾದಿ, ನಾಗರಾಜ ಕೆ ದೇವಪ್ಪ ಪೂಜಾರಿ, ಬಸವರಾಜ ನಡಸೂರ ಸೇರಿದಂತೆ ಇತರರು ಇದ್ದರು.