ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಸರ್ಕಾರವು 545 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಗೆ ಆದೇಶಿಸಿದೆ. ಈ ಹಿಂದೆ ಪರೀಕ್ಷೆ ಬರೆದಿದ್ದವರು, ತರಬೇತಿಗೆ ಹೋಗಿದ್ದಾರೆ. ಆದಾಗ್ಯೂ, ರಾಜ್ಯದಲ್ಲ ಇನ್ನೂ 402 ಪಿಎಸ್‌ಐ ಹುದ್ದೆಗಳು ಮತ್ತು ಸುಮಾರು 15,000 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೂ ಶೀಘ್ರವೇ ನೇಮಕಾತಿ ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಉತ್ತಮವಾಗಿದೆ. ಇತ್ತೀಚೆಗೆ, ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಸಂವಾದದಲ್ಲಿ ಕ್ರೈಮ್ ರೇಟ್ ಕಡಿಮೆಯಾಗಿದೆ ಎಂಬುದು ಗೊತ್ತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದಿದ್ದಾರೆ.