ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಘಟ್ಟೆ ಗ್ರಾಮದಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಗೀತ ಎಂಬ ಮಹಿಳೆಯನ್ನು ಆಶಾ ಎಂಬ ಮಹಿಳೆ ಥಳಿಸಿ ಕೊಂದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಾದ ಆಶಾ, ಅವರ ಪತಿ ಸಂತೋಷ್ ಹಾಗೂ ಮೃತಳ ಮಗ ಸಂಜಯ್ ಎಂಬುವರನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು, ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿದೆ. ದೆವ್ವ ಬಿಡಿಸುವ ನೆಪದಲ್ಲಿ ಮೌಢ್ಯವನ್ನು ನಂಬಿ ಈ ಕೃತ್ಯ ಎಸಗಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಗೀತಮ್ಮ (55) ಎಂಬ ಮಹಿಳೆ ಮೃತರು. ಗೀತಮ್ಮನಿಗೆ ಮೂರು ಜನ ಮಕ್ಕಳು. ಇಬ್ಬರು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಇದ್ದಾಳೆ. ಓರ್ವ ಮಗ ಜಂಬರಘಟ್ಟ ಗ್ರಾಮದಲ್ಲಿ ಗೀತಮ್ಮನ ಜೊತೆ ವಾಸವಾಗಿದ್ದಾರೆ. ಗೀತಮ್ಮಗೆ ಯಾರೋ ತೀರಿಕೊಂಡವರು ಮೈ ಮೇಲೆ ಬಂದಿದ್ದಾರೆ ಎಂದು ಗ್ರಾಮದವರು ಮಾತನಾಡಿಕೊಳ್ಳುತ್ತಿದ್ದರು ಎಂದು ಅವರ ಮಗ ಹೇಳಿದ್ದಾರೆ. ಅದೇ ಗ್ರಾಮದಲ್ಲಿ ಆಶಾ (45) ಅವರಿಗೆ ತನ್ನ ತಾಯಿ ಮೇಲೆ ದೆವ್ವ ಬಂದಿದೆ ಎಂದು ಮೃತಳ ಮಗ ಸಂಜಯ ತಿಳಿಸಿದ್ದ. ಆಗ ಆಶಾ ಹಾಗೂ ಆಕೆಯ ಗಂಡ ಸಂತೋಷ್ ಭಾನುವಾರ ರಾತ್ರಿ ಗೀತಮ್ಮನನ್ನು ಕರೆದುಕೊಂಡು ಹೋಗಿ ಹೊಡೆದಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಿಕ್ಕಿದೆ. ನೀರು ಕೊಡಿ ಎಂದ್ರು ಬಿಟ್ಟಿಲ್ಲ. ಸುಮಾರು ನಾಲ್ಕು ತಾಸು ಹೊಡೆದಿದ್ದಾರೆ. ಗೀತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅದಾದ ಬಳಿಕ ಅರ್ಧ ಗಂಟೆಗೆ ಆಕೆ ಪ್ರಾಣ ಬಿಟ್ಟಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಗುಜರಾತ್ | ವಡೋದರದಲ್ಲಿ ಕುಸಿದ ಸೇತುವೆ; ಮೂವರ ಸಾವು, ನದಿಗೆ ಉರುಳಿದ 5 ವಾಹನಗಳು
ಮೂರು ಜನ ಆರೋಪಿತರಾದ ಎ-1 ಆಶಾ, ಎ-2 ಆಶಾ ಪತಿ ಸಂತೋಷ್ ಹಾಗೂ ಎ-3 ಮೃತಳ ಮಗ ಸಂಜಯ್ ಅವರನ್ನು ಬಂಧಿಸಲಾಗಿದೆ. ಮೃತಳು ನೀರು ಕೇಳಿದ್ದರೂ ಕೂಡ, ಕೊಡದೆ ಥಳಿಸಿದ್ದಾರೆ. ಆಶಾಳ ಹಿನ್ನೆಲೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆ ಕೂಡ ಈ ರೀತಿಯಲ್ಲಿ ಏನಾದರೂ ನಡೆಸಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಇಂದಿನ ಆಧುನಿಕ ಕಾಲಘಟ್ಟದಲ್ಲೂ ಈ ರೀತಿ ನಡೆದುಕೊಳ್ಳುವುದನ್ನು ನೋಡಿ ನಮಗೆ ಆಶ್ಚರ್ಯ ಆಗುತ್ತದೆ. ಈ ರೀತಿಯ ಘಟನೆ ಕಂಡುಬಂದರೆ ನಮಗೆ ತಿಳಿಸಬೇಕೆಂದು ಗ್ರಾಮಸ್ಥರಿಗೆ ತಿಳಿಸಲಾಗಿದೆ.ಯಾವುದೇ ಪ್ರದೇಶದಲ್ಲಿ ಈ ರೀತಿಯ ಮೌಢ್ಯ ಕಂಡು ಬಂದರೆ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ.
ಮೌಢ್ಯಗಳಿಗೆ ಕಿವಿಗೊಡಬಾರದು ಎಂದು ತಾಕೀತು ಮಾಡಲಾಗಿದೆ. ದೇವರು, ದೆವ್ವ ಬಂದಿದೆ ಎಂದು ಹಲ್ಲೆ ನಡೆಸಬಾರದು. ಅವರವರ ನಂಬಿಕೆ ಅವರ ಮನೆಯಲ್ಲಿ ಇರಬೇಕು. ಈ ರೀತಿ ಮಾಡಬಾರದು ಎಂದು ಹೇಳಿದ್ದಾರೆ.
