ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, ಇದೇ 2025 ಜನವರಿ 7ರಿಂದ 10ನೇ ತಾರೀಖಿನವರೆಗೆ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದಿತ್ತು. ₹15,000 ನಿಶ್ಚಿತ ಗೌರವಧನಕ್ಕಾಗಿ ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ರಾಜ್ಯದ ಸುಮಾರು 40,000 ಮಂದಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. 2025ರ ಜನವರಿ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನ ಸಭೆ ಯಶಸ್ವಿಯಾಗಿ ಮಾಸಿಕ ₹10,000 ಗೌರವಧನ ನೀಡುವ ಘೋಷಣೆ ಮಾಡಲಾಗಿತ್ತು. ಅದುವೇ, ಏಪ್ರಿಲ್ ತಿಂಗಳಿನಿಂದಲೇ ಜಾರಿಯಾಗುವುದೆಂದು ಹೊಗಳಿಕೊಂಡಿತ್ತು. ಅದರ ಜೊತೆ ಜೊತೆಗೆ ಆಶಾ ಕಾರ್ಯಕರ್ತರ ಕೈ ಹಿಡಿದ ಕಾಂಗ್ರೆಸ್ ಸರ್ಕಾರ ಎಂಬ ಪ್ರಚಾರ ಗಿಟ್ಟಿಸಿಕೊಂಡಿತೇ ಹೊರತು, ಕೊಟ್ಟ ಮಾತನ್ನು ಮರೆತೇಬಿಟ್ಟಿತು.
ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ₹10,000 ಗೌರವಧನ ನೀಡಲಾಗುವುದು. ₹10,000 ಹೊರತುಪಡಿಸಿ, ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟೀವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್‌ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ₹10,000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದೆಂದು ಕೊಟ್ಟ ಭರವಸೆ ಇಂದು ಹುಸಿಯಾಗಿದೆ.

ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಪತ್ರಿಕಾ ಸಂದರ್ಶನದಲ್ಲಿ ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತರಿಗೆ ₹5000 ಹಾಗೂ ಕೇಂದ್ರ ಸರ್ಕಾರದಿಂದ ₹2000 ನೀಡಲಾಗುತ್ತಿದೆ. ಸರ್ಕಾರ ಆಶಾಗಳ ಮನವಿಗೆ ಸ್ಪಂದಿಸಿ ₹10,000 ಪ್ರೋತ್ಸಾಹ ಗೌರವಧನ ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಅದನ್ನು ಏಪ್ರಿಲ್ ತಿಂಗಳಿನಿಂದ ಜಾರಿ ಮಾಡಲು ಅಗತ್ಯವಿರುವ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಹೇಳಿಕೆ ನೀಡಿದ್ದರು.
ಇದೀಗ 6 ತಿಂಗಳು ಕಳೆದಿದ್ದರೂ ಕೂಡಾ ಆಶಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಗೆ ಮಾಡದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ನೇರವಾಗಿ ಸರಿ ಸುಮಾರು 42 ಸಾವಿರ ಮಂದಿ ಆಶಾ ಕಾರ್ಯಕರ್ತರಿಗೆ ಮೋಸ ಮಾಡಿದೆ. ನಾಲ್ಕು ದಿನಗಳ ಅಹೋರಾತ್ರಿ ಹೋರಾಟವನ್ನು ಹುಸಿ ಆಶ್ವಾಸನೆ ಮೂಲಕ ಗ್ಯಾರೆಂಟಿ ಸರ್ಕಾರ ಎನ್ನುವ ನಂಬಿಕೆ ಮೂಡಿಸಿ ಇಡೀ ಹೋರಾಟವನ್ನೇ ಹಿಂಪಡೆಯುವಂತೆ ಮಾಡಿ, ಕಾರ್ಯಸಾಧನೆ ಮಾಡಿದ ಅಪಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು. ಒಂದು ಹೋರಾಟವನ್ನು ಯಾವ ದಾಟಿಯಲ್ಲಿ ಹತ್ತಿಕ್ಕಬೇಕು, ಸುಳ್ಳು ಆಶ್ವಾಸನೆಯಿಂದ ನಂಬಿಸಿ ಹೇಗೆಲ್ಲಾ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎಂಬುದನ್ನು ಇವರಿಂದಲೇ ಕಲಿಯಬೇಕಿದೆ. ಗೌರವಧನ ಹೆಚ್ಚಿಸುವ ಭರವಸೆ ಕೊಟ್ಟ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖಮಂತ್ರಿ ಡಿ ಕೆ ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದೇ ಮಾಡಿದ್ದು. ಆಶಾ ಕಾರ್ಯಕರ್ತರ ಕೈ ಹಿಡಿದ ಸರ್ಕಾರ ಎಂದಿದ್ದೇ, ಎಂದಿದ್ದು. ಆದರೆ, ಕೊಟ್ಟ ಮಾತು ಈಡೇರಿತೇ? ಎಂಬುದಕ್ಕೆ ಇಡೀ ಸರ್ಕಾರವೇ ಉತ್ತರ ನೀಡಬೇಕಿದೆ.

ಕೇವಲ ₹7,000ದಿಂದ ₹10,000 ವೇತನದಲ್ಲಿ ಆಶಾ ಕಾರ್ಯಕರ್ತರು ತಮ್ಮ ಕುಟುಂಬ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ನಿರ್ವಹಣೆ ಸಾಧ್ಯವೇ? ಎನ್ನುವುದನ್ನು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದೈನಂದಿನ 2 ಗಂಟೆಗಳ ಅವಧಿಯಲ್ಲಿ ಕೆಲಸ ಎಂದು ಹೇಳಿದ್ದು, ಇದೀಗ, ದಿನವಿಡೀ ಕೆಲಸ ಮಾಡಿಸಿಕೊಂಡು ಮಾನಸಿಕ ಖಿನ್ನತೆಗೆ ದೂಡಲ್ಪಡುತ್ತಿದೆ. ಯಾವುದೇ ಭದ್ರತೆ ಇಲ್ಲ. ಯಾವುದೇ ಗೌರವಯುತ ಸಂಭಾವನೆ ಇಲ್ಲ. ಹೀಗಿರುವಾಗ ಬದುಕು ಸಾಗಿಸುವುದಾದರು ಹೇಗೆ? ಆಶಾ ಕಾರ್ಯಕರ್ತರು ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಮನೆ ಮನೆ ಬಾಗಿಲಿಗೆ ತೆರಳಬೇಕು. ಸಾವಿರಕ್ಕೆ ಒಬ್ಬರೇ ಇರುವುದು. ಜವಾಬ್ದಾರಿ ದೊಡ್ಡದಿದೆ. ಕೆಲಸ ಹೆಚ್ಚಿದೆ. ಓಡಾಟ ವಿಪರೀತವಾಗಿದೆ. ಇದರ ಜತೆಗೆ ಸರ್ಕಾರದ ಭಾಗವಾಗಿ ಯಾವುದೇ ನೆರವು ಇಲ್ಲದೆ ಸಮೀಕ್ಷೆ ಇತ್ಯಾದಿ ಕೆಲಸಗಳಲ್ಲಿಯೂ ಕೂಡ ತೊಡಗಿಸಿಕೊಳ್ಳಬೇಕು.
ಇವತ್ತಿನವರೆಗೆ ಇಎಸ್ಐ(ಆರೋಗ್ಯ ವಿಮೆ), ಪಿಎಫ್ ಯಾವುದನ್ನೂ ನೀಡದೆ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ. ಪ್ರತಿ ಕಾರ್ಯಕರ್ತರೂ ಕೂಡಾ ಜಿಪಿಎಸ್ ಫೋಟೋ ಹಾಕಬೇಕು ಕಡ್ಡಾಯವಾಗಿ. ದೈನಂದಿನ ವರದಿ ಅಪ್ಡೇಟ್ ಮಾಡಿಸಬೇಕು. ಯಾವುದೇ ಸಮಯದಲ್ಲಾಗಲಿ ಕೇಳಿದ ಮಾಹಿತಿ ಬರೆದು ಕಳಿಸಲೇಬೇಕು. ಇಂತಹ ಸಂದರ್ಭ ಸೃಷ್ಟಿ ಮಾಡಿದ್ದಾರೆ. ಒಂದು ವೇಳೆ ಇದೆಲ್ಲ ಆಗಲಿಲ್ಲ ಅಂದರೆ ಈಗ ಬರುತ್ತಿರುವ ₹7200ಕ್ಕೆ ತಡೆ ಒಡ್ದುತ್ತಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸ್ಮಾರ್ಟ್ ಮೊಬೈಲ್ ಇಲ್ಲ. ಕೊಳ್ಳಲು ಆರ್ಥಿಕವಾಗಿ ಶಕ್ತಿಯಿಲ್ಲ, ಇನ್ನ ಸರ್ಕಾರ ಬೇಡಿಕೆಯನ್ನು ಮಾನ್ಯ ಮಾಡುವುದೂ ಇಲ್ಲ. ಇದರ ಜೊತೆಗೆ ಬರುವ ಅಲ್ಪ ಸಂಭಾವನೆಯಲ್ಲಿ ಕನಿಷ್ಠ 380ಕ್ಕೂ ಹೆಚ್ಚು ರೂಪಾಯಿ ಡೇಟಾ ಪ್ಯಾಕ್ ಹಾಕಿಸಿಕೊಳ್ಳಬೇಕು. ಇದಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೇಗಾದರೂ ಸರಿಯೇ ತಲುಪಲೇಬೇಕು. ದಿನನಿತ್ಯ ಮನೆ ಮನೆ ಭೇಟಿ ಮಾಡಿ
ವೈದ್ಯಕೀಯ ನೆರವಿನ ಕೆಲಸ ಮಾಡಲೇಬೇಕು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಖಜಾಂಚಿ ಪಿ ಎಸ್ ಸಂಧ್ಯಾ ಈ ದಿನ.ಕಾಮ್ ಜೊತೆ ಮಾತನಾಡಿ, “ಯುವಜನ ಕಾರ್ಯಕರ್ತೆಯರು ಅಥವಾ ಸಿಬ್ಬಂದಿಗಳೆಂದು ಆಯ್ಕೆ ಮಾಡಿರೋದು. ಇವರು ಎರಡು ಗಂಟೆಗಳ ಕೆಲಸ ಮಾಡಿದರೆ ಸಾಕು ಎನ್ನುವುದಿದೆ. ಆದರೆ, ಈಗ ದಿನವಿಡೀ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಗರ್ಭಿಣಿ, ಬಾಣಂತಿಯರ ಆರೋಗ್ಯ ಸಮಸ್ಯೆ ನೋಡುವುದಾಗಿತ್ತು. ಆದರೆ, ಈಗ ಸರ್ಕಾರಿ ಸರ್ವೇಯಿಂದ ಹಿಡಿದು ಎಲ್ಲ ಕೆಲಸವನ್ನು ಮಾಡಬೇಕಿದೆ. ಹಳ್ಳಿಯಲ್ಲಾದರೆ ಸಾವಿರಾಕ್ಕೆ ಒಬ್ಬರು ಆಶಾ ಕಾರ್ಯಕರ್ತೆ ಇರುತ್ತಾರೆ. ನಗರ ಪ್ರದೇಶದಲ್ಲಿ 2 ಸಾವಿರಕ್ಕೆ ಒಬ್ಬರಂತೆ ಇರುತ್ತಾರೆ. ಆದರೆ, ಶ್ರಮಪಟ್ಟು ಏನು ಕೆಲಸ ಮಾಡುತ್ತ ಇದ್ದಾರೆ, ಅದಕ್ಕೆ ತಕ್ಕಂತೆ ಗೌರವಧನ ಬರುತ್ತಿಲ್ಲ ಎನ್ನುವುದು ಶೋಚನಿಯ ಸಂಗತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರದಿಂದ ₹5 ಸಾವಿರ ನಿಗದಿತ ಗೌರವಧನ. ಪ್ರೋತ್ಸಾಹ ಧನ ಇಂತಹ ಕೆಲಸಕ್ಕೆ ಇಂತಿಷ್ಟು ಎನ್ನುವಂತೆ (ಕಂಪೋನೆಂಟ್), ಆಶಾ ಸಾಫ್ಟ್(ಆರ್‌ಸಿಹೆಚ್ ಪೋರ್ಟಲ್)ನಲ್ಲಿ ಮಾಡಿದ ಕೆಲಸ ಸರಿಯಾಗಿ ನಮೂದಾಗದೆ ಇದ್ದಲ್ಲಿ ಈ ಹಣವು ಬರುವುದಿಲ್ಲ. ₹10,000 ಖಚಿತವೆಂದು ಭರವಸೆ ಕೊಟ್ಟಿದ್ದ ಸರ್ಕಾರ, ಏಪ್ರಿಲ್ ಒಂದರಿಂದ ಜಾರಿ ಎಂದು ಹೇಳಿತ್ತು. ಆದರೆ, ಈವರೆಗೆ ಹೇಳಿದಂತೆ ಜಾರಿಯಾಗಿಲ್ಲ. ಬಜೆಟ್‌ನಲ್ಲಿ ₹1,000 ಹೆಚ್ಚಿಸುವ ಭರವಸೆಯನ್ನೂ ಈಡೇರಿಸಿಲ್ಲ. ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತರಿಗೆ ಮಾತ್ರ ಒಂದು ಸಾವಿರ ಸಿಕ್ಕಿದೆ. ಆಶಾ ಕಾರ್ಯಕರ್ತರಿಗೆ ಯಾವುದೇ ಭರವಸೆ ಈಡೇರಿಲ್ಲ. ಹೀಗೆ ಆದರೆ ಮತ್ತೆ ರಾಜ್ಯ ಮಟ್ಟದ ಬೃಹತ್ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪುತ್ತಿರುವುದು ಇದೇನು ಮೊದಲ ಬಾರಿ ಅಲ್ಲ. ಇದು ಎರಡನೇ ಬಾರಿ. ಒಮ್ಮೆ ಕೊಟ್ಟ ಮಾತು ತಪ್ಪಿದಾಗ ಜನವರಿ ತಿಂಗಳಲ್ಲಿ ಹೋರಾಟ ಮಾಡಬೇಕಾಯಿತು. ಈಗ ಮತ್ತದೇ ರೀತಿಯಲ್ಲಿ ವರ್ತನೆ ತೋರುತ್ತಿದೆ” ಎಂದರು.
“ಮೊಬೈಲ್ ಆಧಾರಿತ ಸೇವೆ ಮಾಡಬೇಕು ಎನ್ನುತ್ತಾರೆ. ಯಾವ ಮೊಬೈಲ್ ಕೊಟ್ಟಿಲ್ಲ. ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರನ್ನು ಭೇಟಿಯಾದಾಗ, ಬಜೆಟ್‌ನಲ್ಲಿ ಈ ವಿಚಾರದ ಪ್ರಸ್ತಾಪ ಆಗಿದೆಯಾ ಎಂದು ಕೇಳಿದರು. ಇಲ್ಲ ಅಂತೇಳಿ ಹೇಳಿದ್ವಿ. ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು, ಆರೋಗ್ಯ ಮಂತ್ರಿ ಘೋಷಣೆ ಮಾಡಿದ್ರಲ್ಲ ಅಂತ ಕೇಳಿದಾಗ, ಸಚಿವರು ಅದೆಲ್ಲ ಬೇರೆ ಅಂತ ಹೇಳಿದ್ದಾರೆ. ಒಂದು ರೀತಿ ಚುನಾವಣೆ ಸಂದರ್ಭದಲ್ಲಿ ನೀಡುವ ಭರವಸೆಯಂತೆ ಹುಸಿ ಮಾಡಿದ್ದಾರೆ. ಕೊಟ್ಟ ಮಾತನ್ನು ಎರಡು ಬಾರಿ ಉಳಿಸಿಕೊಂಡಿಲ್ಲ. ಈಗಲಾದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು” ಎಂದು ಆಗ್ರಹ ಮಾಡಿದರು.

ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ ಈದಿನ.ಕಾಮ್ ಜೊತೆ ಮಾತನಾಡಿ, “ಹಗಲು ರಾತ್ರಿ ಎನ್ನದೆ ನಾಲ್ಕು ದಿನ ಅಹೋರಾತ್ರಿ ಧರಣಿ ಮಾಡಿದ್ದೆವು. ಸ್ಥಳಕ್ಕೆ ಯಾರೇ ಬಂದರು ಯಾರಿಂದಲೂ ಸರಿಯಾದ ಸ್ಪಂದನೆ ಇರಲಿಲ್ಲ. ಮುಖ್ಯಮಂತ್ರಿಗಳು ಕರೆದಾಗ ಅವರ ಬಳಿ ನಮ್ಮ ಬೇಡಿಕೆ ₹15,000 ಗೌರವಧನ ನಿಗದಿ ಪಡಿಸಿ ಎಂದು ಕೋರಿದ್ದೆವು. ಕಳೆದ ವಾರದಲ್ಲಿ ಮೈಸೂರಿನಲ್ಲಿ ಆಶಾ ಕಾರ್ಯಕರ್ತೆ ಬೈಕ್ ಡ್ರಾಪ್ ಕೇಳಿದ್ದಾರೆ. ಬೈಕ್ ಜೋರಾಗಿ ಓಡಿಸಿದ್ದರಿಂದ ಕೆಳಗೆ ಬಿದ್ದು ಕಾರ್ಯಕರ್ತೆ ಅಲ್ಲಿಯೇ ಜೀವ ಬಿಟ್ಟಿದ್ದಾಳೆ. ಹಾಗೆಯೇ ಆಸ್ಪತ್ರೆಯಲ್ಲಿ ಜೆರಾಕ್ಸ್ ಕೇಳಿದಕ್ಕೆ ಅದನ್ನು ತರಲು ಬಂದ ಇನ್ನೊಬ್ಬ ಕಾರ್ಯಕರ್ತೆ ರಸ್ತೆ ದಾಟುವಾಗ ಆಕ್ಸಿಡೆಂಟ್ ಆಗಿ ಕಾಲು, ಕೈ ಮುರಿದುಕೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾಳೆ. ಯಾವ ಸರ್ಕಾರಿ ಸವಲತ್ತುಗಳೂ ಸಿಗುತ್ತಿಲ್ಲ. ಆರೋಗ್ಯ ವಿಮೆ ಇಲ್ಲ. ಇದ್ದರೂ, ಅದರ ಬಳಕೆಯನ್ನು ಯಾರು ಮಾಡುತ್ತಿದ್ದಾರೆಂದು ಹುಡುಕುವ ಪರಿಸ್ಥಿತಿ ಇದೆ. ಆಶಾ ಕಾರ್ಯಕರ್ತೆಯರೇ ಅಭಾ ಕಾರ್ಡ್ ಮಾಡಿಸುತ್ತಾರೆ. ಆದರೆ, ಅವರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ” ಎಂಬ ಆರೋಪ ವ್ಯಕ್ತಪಡಿಸಿದರು.
“ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಎಲ್ಲರಿಗೂ ತಿಳಿದಿರುವಂತದ್ದು, ಅಧೋಗತಿಗೆ ತಲುಪಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ
ಆಸ್ಪತ್ರೆ ಎಂದರೆ ಜೀವ ಕಳೆದುಕೊಳ್ಳಲು ಹೋಗಬೇಕೇ? ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವ ಉಳಿಸಿಕೊಳ್ಳುವುದಕ್ಕಾಗಿ ಸಾಲ, ಸೋಲ ಮಾಡಿ ಪ್ರಾಣ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಕಡಿಮೆ ಸಮಯ ದುಡಿಮೆ ಎನ್ನುತ್ತಾರೆ. ಕೆಲವು ಸಂದರ್ಭ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಎರಡೆರೆಡು ದಿನ ಅವರೊಟ್ಟಿಗೆ ಇರಬೇಕಾಗಿ ಬರುತ್ತದೆ. ಇದರ ಜತೆಗೆ ಓಡಾಟ. ಇಷ್ಟೆಲ್ಲ ಕೆಲಸ ಮಾಡಿದರೂ ಸೂಕ್ತವಾದ ಗೌರವಧನ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ನುಡಿದಂತೆ ನಡೆವ ಸರ್ಕಾರ ಎನ್ನುತ್ತೆ. ಆದರೆ, ಎಲ್ಲಿ ನಡೆದುಕೊಂಡಿದೆ ಎನ್ನುವುದು ಮುಖ್ಯ. ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಯಾವ ಸವಲತ್ತು ನಮಗೆ ಇಲ್ಲ. ಇಡೀ ದಿನ ದುಡಿಯುವ ಹೆಣ್ಣು ಮಕ್ಕಳನ್ನು ಇಷ್ಟರ ಮಟ್ಟಿಗೆ ನಿಕೃಷ್ಟವಾಗಿ ನಡೆಸಿಕೊಳ್ಳುವುದು ಎಷ್ಟು ಸರಿ? ನಮಗೆ ₹15,000 ಗೌರವಧನ ಕೊಡದೆ ಇದ್ದರೂ ಪರವಾಗಿಲ್ಲ. ಒಪ್ಪಿಗೆ ಕೊಟ್ಟಿರುವ ₹10,000 ಗೌರವಧನವನ್ನಾದರೂ ನೀಡಿ. ಇದರ ಜತೆಗೆ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಆಗಿರುವ ಮೋಸ ಅಂದರೆ ಈ ಬಜೆಟ್‌ನಲ್ಲಿ ₹1000 ಹೆಚ್ಚಿಸುವುದಾಗಿ ಹೇಳಿದ್ದರು. ಅದನ್ನು ಈವರೆಗೂ ಮಾಡಲಿಲ್ಲ. ತಂಡ ಆಧಾರಿತ ಪ್ರೋತ್ಸಾಹಧನ(ಟೀಮ್ ಬೇಸ್ಡ್ ಇನ್ಸೆಂಟಿವ್) ಕಡಿಮೆ ಜನಕ್ಕೆ ನೀಡಿ ಎಲ್ಲರಿಗೂ ನೀಡಿರುವುದಾಗಿ ಸುಳ್ಳು ಹೇಳುತ್ತಿದೆ ಈ ಸರ್ಕಾರ. ಇದು ನ್ಯಾಯವೇ? ಹೋರಾಟ ಮಾಡುತ್ತ ಇದ್ದವರಿಗೆ ಮುಖ್ಯ ಮಂತ್ರಿಗಳೇ ಭರವಸೆ ನೀಡಿ, ಗೌರವಧನ ಘೋಷಣೆ ಮಾಡಿ ಈವರೆಗೆ ಕೊಡದೆ ಇರುವುದು ಅಕ್ಷರಶಃ ಮೋಸ. ಕೂಡಲೇ ಗೌರವಧನ ಆದೇಶ ಮಾಡಬೇಕು. ಇಲ್ಲದೆ ಇದ್ದರೆ ಮತ್ತೆ ಹೋರಾಟ ಮಾಡುತ್ತೇವೆ” ಎನ್ನುವ ಎಚ್ಚರಿಕೆ ನೀಡಿದರು.

ಮಡಿಕೇರಿಯಿಂದ ಮಾತನಾಡಿದ ಆಶಾ ಕಾರ್ಯಕರ್ತೆ ನಾಗಮಣಿ ಯವರು ” ನಾವಿರುವುದು ಕೊಡಗಿನಲ್ಲಿ. ವಿಪರೀತ ಮಳೆ. ಕಾಡು ಪ್ರಾಣಿಗಳ ಹಾವಳಿ. ದಟ್ಟವಾದ ಅರಣ್ಯ ಜೊತೆಗೆ ಕಾಫಿ ತೋಟ. ಒಂದು ಮನೆ ಇಲ್ಲಿದ್ದರೆ ಇನ್ನೊಂದು ಮನೆ ಇನ್ನೆಲ್ಲಿಯೋ ಇರುತ್ತದೆ. ಗುಡ್ಡಗಾಡು ಪ್ರದೇಶ. ಓಡಾಟಕ್ಕೆ ತುಂಬಾ ತೊಂದರೆ ಇಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಯಾವುದು ಇಲ್ಲ. ಇಲ್ಲಿ ವಯಕ್ತಿಕವಾಗಿ ವಾಹನ ಬಳಸಬೇಕು. ಇಲ್ಲ ಖಾಸಗಿ ವಾಹನಗಳ ಅವಲಂಬನೆ. ಇನ್ನ ನೆಟ್ವರ್ಕ್ ಕೇಳಲೇ ಬೇಡಿ. ಜಿಪಿಎಸ್ ಆಧಾರಿತವಾಗಿ, ಆನ್ಲೈನ್ ಮೂಲಕ ಹೇಗೆ ಕೆಲಸ ಮಾಡೋದು?. ಮೊಬೈಲ್ ಕೊಟ್ಟಿಲ್ಲ, ಡಾಟಾ ನಾವೇ ಹಾಕಿಸಿಕೊಳ್ಳಬೇಕು. ಪಟ್ಟಣದ ಕಡೆ ಬಂದರೆ ನೆಟ್ವರ್ಕ್. ಇಲ್ಲಾಂದ್ರೆ ಫೋನು ಮಾಡಲು ಆಗದ ಪರಿಸ್ಥಿತಿ ಇರುವಾಗ. ಕಡ್ಡಾಯವಾಗಿ ವರದಿ ಮಾಡಬೇಕು. ಜಿಪಿಎಸ್ ಫೋಟೋ ಕಳಿಸಬೇಕು. ಆನ್ಲೈನ್ ಬಳಕೆ ಮಾಡಬೇಕು ಅಂದರೇ ಅದು ಹೇಗೆ ಸಾಧ್ಯ.”
” ಈಗೊಂದು ಭಯ ಹುಟ್ಟಿಸಿದ್ದಾರೆ 10 ನೇ ತರಗತಿ ಒಳಗೆ ಇದ್ದವರನ್ನು ಕೆಲಸದಿಂದ ವಜಾ ಮಾಡ್ತೀವಿ ಅಂತೇಳಿ. ಅದೆಷ್ಟು ಸರಿ, ನಿಜ ಗೊತ್ತಿಲ್ಲ. ಆದರೆ, ಕೆಲಸಕ್ಕೆ ತೆಗೆದುಕೊಳ್ಳುವಾಗ ಇದ್ಯಾವುದನ್ನು ನೋಡದೆ ಈಗ ಹೀಗೆ ಹೇಳಿದರೆ ನಾವೆಲ್ಲಿ ಹೋಗಬೇಕು. ಈ ವಯಸಿನಲ್ಲಿ ಬೇರೆ ಕೆಲಸ ಹೇಗೆ ಹುಡುಕುವುದು. ನಮ್ಮ ಕುಟುಂಬಗಳು ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ ಇಲ್ಲದೆಲ್ಲಾ ಕಾನೂನು ಮಾಡ್ತಾರೆ. ಅದೇ ನಮಗೆಲ್ಲ ಗೌರವದಿಂದ ನಮಗೆ ಸಿಗಬೇಕಾದ ಸವಲತ್ತು, ಗೌರವಧನ ಕೊಡಲ್ಲ ” ಎಂದು ಅಳಲು ತೋಡಿಕೊಂಡರು.

ಚಾಮರಾಜನಗರದಿಂದ ಆಶಾ ಕಾರ್ಯಕರ್ತೆ ಕವಿತಾ ಮಾತನಾಡಿ ” 60 ವರ್ಷಕ್ಕೆ ನಿವೃತ್ತಿ ಅಂತೇಳಿ ಈಗ ಆರಂಭ ಮಾಡಿದ್ದಾರೆ. ಈ ಹಿಂದೆ ಇದೆಲ್ಲ ಇರಲಿಲ್ಲ. ಈಗ 60 ವರ್ಷ ವಯಸ್ಸು ದಾಟಿದವರನ್ನು ನಿವೃತ್ತಿ ಮಾಡುತ್ತಾ ಇದ್ದಾರೆ. ನಿವೃತ್ತಿಯಾದವರಿಗೆ ಇಡಿ ಗಂಟು (ನಿವೃತ್ತಿ ಧನ ) ಯಾವುದು ಇಲ್ಲ. ಹೋಗಲಿ ಸಾಮಾಜಿಕವಾಗಿ ಇಷ್ಟೆಲ್ಲ ಕೆಲಸ ಮಾಡುವ ನಮ್ಮನ್ನು ಪ್ರಾಥಮಿಕ ಚಿಕಿತ್ಸಾ ಕೇಂದ್ರ ಆಗಲಿ, ತಾಲ್ಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರ ಆಗಲಿ ಗೌರವದಿಂದ ಬೀಳ್ಕೊಡುಗೆ ಸಹ ಕೊಡಲ್ಲ. ಬರೋದೇ ತಿಂಗಳಿಗೆ 7 ಸಾವಿರ. ಅದುವೇ, ಸರಿಯಾಗಿ ಆಶಾ ಸಾಫ್ಟ್ ಎಂಟ್ರಿ ಆಗಿದ್ದರೆ. ಇಲ್ಲಾಂದ್ರೆ ಅದು ಸಿಗಲ್ಲ. ಹೀಗಿರುವಾಗ ನಿವೃತ್ತಿಯಾದ ಮೇಲೆ ನಾವೇನು ಮಾಡಬೇಕು?. ಜೀವನ ಸಾಗಿಸೋದು ಹೇಗೆ?. ನಮಗೂ ಮಕ್ಕಳು ಮರಿ ಇದ್ದಾರೆ ಅಲ್ವಾ. ಸರ್ಕಾರಕ್ಕೆ ಇದೆಲ್ಲ ಯಾಕೆ ತಿಳಿಯಲ್ಲ. ನಮಗೆ ಸರಿಯಾಗಿ ಗೌರವಧನ ನೀಡಿ. ನಿವೃತ್ತಿಯದಾಗ ಗೌರವದಿಂದ ನಡೆಸಿಕೊಳ್ಳಿ. ನಮಗೂ ಭದ್ರತೆ ಒದಗಿಸಿ. ಯಾವ ಸವಲತ್ತು ನೀಡದೆ ದುಡಿಸಿಕೊಳ್ಳುತ್ತಿರುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.

ಹನಸೋಗೆಯಿಂದ ಕೋಮಲ ಅವರು ಮಾತನಾಡಿ ” ದಿನ ಹೋರಾಟ ಮಾಡುವುದೇ ಆಯಿತು. ಹೇಳಿದಂತೆ ಯಾರು ನಡೆದುಕೊಳ್ಳುತ್ತಿಲ್ಲ. ನಾವು ಎಲ್ಲರಲ್ಲೂ ಮನವಿ ಮಾಡಿದ್ದೀವಿ. ಇಂದು ಕೂಡ ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಾ ಇದ್ದೀವಿ. ಅದರಲ್ಲೂ ವಿಶೇಷವಾಗಿ ಒತ್ತು ಕೊಟ್ಟು ಆಶಾ ಕಾರ್ಯಕರ್ತೆಯರಿಗೆ ಆಗಿರುವ ಅನ್ಯಾಯದ ಬಗ್ಗೆಯೂ ಮನವಿ ಮಾಡುತ್ತಾ ಇದ್ದೀವಿ. ಈ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ನಮ್ಮ ಓಡಾಟ, ಶ್ರಮಕ್ಕೆ ಬೆಲೆ ಕೊಟ್ಟಿಲ್ಲ. ತಾಲ್ಲೂಕು ಮಟ್ಟದಲ್ಲಿ ಇದ್ದವರಿಗೆ ಹಳ್ಳಿ ಹಳ್ಳಿಯ ಮಾಹಿತಿ ಇರಲ್ಲ. ಹಳ್ಳಿಯ ಪ್ರತಿ ಮನೆ ಮನೆಗೂ ಹೋಗುವವರು ನಾವು. ಆದರೆ, ನಮ್ಮ ಜೀವನಕ್ಕೆ ಯಾವ ಭದ್ರತೆ ಇಲ್ಲ.”
” ಕಾರ್ಮಿಕ ಕಾಯ್ದೆ ಪ್ರಕಾರ 18 ಸಾವಿರಕ್ಕೂ ಹೆಚ್ಚು ಗೌರವಯುತ ಸಂಬಾವನೆ ಕೊಡಬೇಕು. ಅದು ಹೋಗಲಿ ಸರ್ಕಾರ ಘೋಷಣೆ ಮಾಡಿದ ₹10 ಸಾವಿರನು ಕೊಡ್ತಾ ಇಲ್ಲ. ಹೀಗಾದರೆ ನಾವು ಬದುಕುವುದಾದರು ಹೇಗೆ?. ನಮ್ಮ ಆರೋಗ್ಯದ ಪರಿಸ್ಥಿತಿ ಏನು?. ನಾವು ಹೆಚ್ಚು ಸಮಯ ದುಡಿಯುತ್ತ ಇದ್ದೀವಿ ನಮಗೂ ನ್ಯಾಯತವಾಗಿ ನಡೆಸಿಕೊಳ್ಳಬೇಕಿತ್ತು. ಕೊಟ್ಟ ಮಾತು ಉಳಿಸಿಕೊಳ್ಳದೆ ಸರ್ಕಾರ ತಪ್ಪು ಮಾಡಿದೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಮತ್ತೆ ಹೋರಾಟದ ಬಿಸಿ ಮುಟ್ಟಿಸುತ್ತೇವೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ₹2000 ರೂಪಾಯಿ ಗೌರವಧನವನ್ನು ಹೆಚ್ಚಿಗೆ ಮಾಡಬೇಕು. ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ₹5 ಲಕ್ಷ ನೀಡುವ ಬಗ್ಗೆ ಹೇಳಿದ್ದೀರಿ. ಈ ತೀರ್ಮಾನಗಳನ್ನು ಆರೋಗ್ಯ ಇಲಾಖೆಯ ಆಯುಕ್ತರು ತಮ್ಮ ಪರವಾಗಿ ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್‌ಗೆ ಆಗಮಿಸಿ ಸಾವಿರಾರು ಆಶಾಗಳ ಮುಂದೆ ಬಂದು ಘೋಷಣೆ ಮಾಡಿದರು. ನಂತರ ಹೋರಾಟ ಹಿಂತೆಗೆದುಕೊಳ್ಳಲಾಯಿತು. ಮಾಧ್ಯಮಗಳಲ್ಲೂ ಕೂಡ ಅಧಿಕೃತವಾಗಿ ತಾವು ಘೋಷಿಸಿರುತ್ತೀರಿ. ತಮ್ಮ ಪಕ್ಷದ ಹಲವಾರು ಸಚಿವರುಗಳು, ಶಾಸಕರು ಈ ಬಗ್ಗೆ ಪೋಸ್ಟಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ, ನೋವಿನ ವಿಷಯವೆಂದರೆ ಇಲ್ಲಿಯವರಗೆ 6 ತಿಂಗಳು ಕಳೆದರೂ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ.

ಒಂದೆಡೆ ಸಂಘಟನೆಯಿಂದ ತಮ್ಮನ್ನು ಭೇಟಿ ಮಾಡಿ ಕೇಳಿದಾಗ ‘ ನಾನು ಹೇಳಿದ ಮೇಲೆ ಆಯಿತು. ಆದೇಶ ಆಗುತ್ತದೆ ‘. ಎಂದಿರುತ್ತೀರಿ. ಆರೋಗ್ಯ ಮಂತ್ರಿಗಳು ಸಭೆ ಮಾಡೋಣ ಅನ್ನುತ್ತಾರೆ. ಈ ಕುರಿತು ಯಾವುದೇ ಸಂದೇಶವಿಲ್ಲ. ಅಧಿಕಾರಿಗಳು ಕಳೆದ 6 ತಿಂಗಳಿಂದ ಈ ಕುರಿತ ಫೈಲ್ ಹಣಕಾಸು ಇಲಾಖೆಗೆ ಹೋಗಿದೆ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಬಳಿ ಇದೆ, ಆರೋಗ್ಯ ಮಂತ್ರಿಗಳ ಕಛೇರಿಯಲ್ಲಿ ಇದೆ ಎಂದು ವಿವಿಧ ಕಾರಣಗಳನ್ನು ಹೇಳಿ, ಆಗುತ್ತದೆ ಎಂದು ಹಲವಾರು ಬಾರಿ ಹೇಳುತ್ತಲೇ ಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು : ಹಮಾಲಿ ಕಾರ್ಮಿಕರ ಬದುಕು ಅತಂತ್ರ; ಜುಲೈ.10 ರಂದು ಪ್ರತಿಭಟನೆ

ಮತ್ತೊಂದೆಡೆ, ಆಶಾ ಕಾರ್ಯಕರ್ತೆಯರಿಗೆ ಪ್ರತೀ ತಿಂಗಳು ಸರಿಯಾಗಿ ವೇತನ ಆಗುತ್ತಿಲ್ಲ. ಈಗಲೂ ರಾಜ್ಯದಾದ್ಯಂತ 2 ರಿಂದ 3 ತಿಂಗಳ ಪ್ರೋತ್ಸಾಹಧನ ಬಾಕಿ ಇದೆ. ಇತ್ತೀಚಿಗೆ ಇಲಾಖೆಯಿಂದ ಕೆಳಗಿನ ಆದೇಶಗಳನ್ನು ಮಾಡಿರುವರು. ಆದರೆ, ಸೂಕ್ತ ಪರಿಹಾರ ನೀಡಿರುವುದಿಲ್ಲ. ಈ ಹಿನ್ನಲೆಯಲ್ಲಿ ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಿ, ನೊಂದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ದೊರಕಿಸಲು ತಮ್ಮೊಂದಿಗೆ ಆದ ತೀರ್ಮಾನಗಳಂತೆ ಸರ್ಕಾರದಿಂದ ಸ್ಪಷ್ಟ ಆದೇಶ ನೀಡುವಂತೆ ಸೂಕ್ತ ಕ್ರಮಕೈಗೊಳ್ಳಬೇಕಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮನವಿ ಮಾಡಿರುತ್ತಾರೆ. ಸರ್ಕಾರ ಈ ನಿಟ್ಟಿನಲ್ಲಿ ಗೌರವಧನ ಹೆಚ್ಚಿಸುವುದೇ ಎಂದು ಕಾದು ನೋಡಬೇಕಿದೆ. ಈದಿನ.ಕಾಮ್ ಆಶಾ, ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ವಿಚಾರವಾಗಿ ಹೆಚ್ಚಿನ ಮಾಹಿತಿಯೊಡನೆ ಮುಂದಿನ ಸಂಚಿಕೆಗಳಲಿ ವರದಿ ಮಾಡಲಿದೆ.