ಆರ್ಥಿಕವಾಗಿ ಸ್ವತಂತ್ರವಾಗಿರುವ, ಮನಸಲ್ಲಿದ್ದುದನ್ನು ಮಾತಾಡಿಬಿಡುವ, ತಾನು ಹೇಳಿದ್ದು ಸರಿಯೆಂದು ವಾದಿಸುವ, ಮುಂಚೂಣಿಯಲ್ಲಿರುವ ಹೆಣ್ಣುಮಕ್ಕಳನ್ನು ಈ ಕಂದಾಚಾರಕ್ಕೆ ಬಲಿ ಕೊಡಲಾಗುತ್ತಿರುವುದೂ ವಾಸ್ತವ. ಝಾರ್ಖಂಡದ ಮಂದರ್ ಗ್ರಾಮದ ಐವರು ಮಹಿಳೆಯರನ್ನು ಮಾಟಗಾತಿಯರೆಂಬ ಶಂಕೆಯ ಮೇರೆಗೆ ಕೊಲ್ಲಲಾಗುತ್ತದೆ. ಈ ಐವರೂ ಮಹಿಳೆಯರು ಮದ್ಯಪಾನ ವಿರೋಧಿ ಆಂದೋಲನದಲ್ಲಿ ಸಕ್ರಿಯರಾಗಿದ್ದ ಕಾರಣವೇ ಅವರ ಹತ್ಯೆ ಮಾಡಲಾಯಿತು ಎಂಬ ಆಂಶ ಆನಂತರ ಬೆಳಕಿಗೆ ಬರುತ್ತದೆ.
ಬಿಹಾರದ ಪೂರ್ಣಿಯಾ ಜಿಲ್ಲೆಯ ಮುಫಸ್ಸಿಲ್ ಠಾಣಾ ವ್ಯಾಪ್ತಿಯ ಟೇಟಗಾಮ ಎಂಬ ಕುಗ್ರಾಮದಲ್ಲಿ ಮೊನ್ನೆ ಜರುಗಿರುವ ಅಮಾನುಷ ಘಟನೆ ರಕ್ತ ಹೆಪ್ಪುಗಟ್ಟಿಸುವಂತಹುದು. ಮಾಟಮಂತ್ರ ಮಾಡುತ್ತಾರೆಂಬ ಆರೋಪದ ಮೇರೆಗೆ ಒಂದೇ ಕುಟುಂಬದ ಐವರನ್ನು ಬಡಿದು, ಪೆಟ್ರೋಲ್ ಸುರಿದು ಜೀವಂತ ಸುಡಲಾಗಿದೆ. ಅರೆಸುಟ್ಟ ಶವಗಳನ್ನು ಟ್ರ್ಯಾಕ್ಟರಿಗೆ ತುಂಬಿಕೊಂಡು ದೂರದ ಕೆರೆಯೊಂದಕ್ಕೆ ಎಸೆಯಲಾಗಿದೆ.
ಈ ಪ್ರಕರಣದ ಆರೋಪಿಗಳು ಮತ್ತು ಬಲಿಪಶುಗಳು ಇಬ್ಬರೂ ಉರಾಂವ್ ಆದಿವಾಸಿಗಳೇ ಎಂಬುದು ಈ ದುರಂತದ ಮತ್ತೊಂದು ಮುಖ. ಈ ಸಮುದಾಯಗಳನ್ನು ಈಗಲೂ ‘ಶಿಲಾಯುಗ’ದಲ್ಲೇ ಕೈದು ಮಾಡಿ ಇಟ್ಟಿರುವ ವ್ಯವಸ್ಥೆಯೇ ಈ ನರಸಂಹಾರದ ಹೊಣೆಯನ್ನು ಹೊರಬೇಕಿದೆ. ಆದಿವಾಸಿಗಳೇ ಆದಿವಾಸಿ ಕುಟುಂಬದ ಹತ್ಯೆ ಮಾಡಿದ್ದಾರೆಂದು ‘ಶ್ರೇಷ್ಠ ಜಾತಿ’ಗಳ ಅಹಂಕಾರಿಗಳು ಗಹಗಹಿಸಿದ್ದಾರೆ. ಛತ್ತೀಸಗಢದಲ್ಲಿ ನಕ್ಸಲರಾಗಿ ತಿರುಗಿದ ಆದಿವಾಸಿಗಳನ್ನು ಕೊಲ್ಲಲು ಸರ್ಕಾರಗಳೇ ‘ಸಾಲ್ವಾ ಜುದುಂ’ ಆದಿವಾಸಿಗಳ ಅರೆಪೊಲೀಸ್ ಪಡೆಯನ್ನು ಕಟ್ಟಿತು. ಆದಿವಾಸಿಗಳನ್ನು ಆದಿವಾಸಿಗಳಿಂದಲೇ ಬೇಟೆಯಾಡಿಸಲಾಯಿತು. ಜಾತಿಶ್ರೇಷ್ಠತೆಯ ಕಾಯಿಲೆ ಅಂಟಿಸಿಕೊಂಡಿರುವವರು ಈ ಹೀನ ಕೃತ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?
ಪೂರ್ಣಿಯಾ ಘಟನೆಯಲ್ಲಿ ಕಾಯಿಲೆಯ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ಮಂತ್ರಮಾಟದ ಮೊರೆ ಹೋಗಲಾಗುತ್ತದೆ. ಮಗು ಗತಿಸಿದ ನಂತರ ಮಾಟಮಂತ್ರ ಮಾಡಿದಾಕೆಯನ್ನು ಆಕೆಯ ಕುಟುಂಬ ಸಹಿತ ನಿರ್ನಾಮ ಮಾಡಲಾಗುತ್ತದೆ. ಶಿಕ್ಷಣ- ವಿಜ್ಞಾನ-ವೈದ್ಯಕೀಯ ಸ್ವತಂತ್ರ ಭಾರತದ ಸಾವಿರಾರು ಕುಗ್ರಾಮಗಳನ್ನು ಮುಟ್ಟಿಯೂ ಇಲ್ಲ. ಆದರೆ ವಿಶ್ವಗುರುವಿನ ಹುಸಿ ಗೌರವದ ಅಮಲನ್ನು ಸಮುದಾಯಗಳ ನೆತ್ತಿಗೇರಿಸಿ ಮೆರೆಸಲಾಗುತ್ತಿದೆ.
ಈಗಲೂ ಇಂತಹ ಪರಿಸ್ಥಿತಿ ಇರುವುದಾದರೆ ಸಾವಿರಾರು ವರ್ಷಗಳ ಹಿಂದೆ ಎಂತಹ ದುಸ್ಥಿತಿ ಇದ್ದೀತೆಂಬ ಆಲೋಚನೆಯೂ ನಡುಕ ಹುಟ್ಟಿಸುತ್ತದೆ. ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವದ ಅಭಾವವು ಸಮಾಜವನ್ನು ಯಾವ ಮಟ್ಟದ ವಿನಾಶದತ್ತ ಒಯ್ಯುತ್ತದೆ ಎಂಬುದರ ನಿದರ್ಶನ ಪೂರ್ಣಿಯಾ ಪ್ರಕರಣ.
ದೇಶದಲ್ಲಿ ಮಾಟಮಂತ್ರ ಮತ್ತು ಅತೀಂದ್ರಿಯ ‘ವೈದ್ಯಕೀಯ’ ಈಗಲೂ ಹಳ್ಳಿಗಾಡುಗಳಲ್ಲಿ ಸರ್ವೇಸಾಧಾರಣ. ದೆವ್ವ, ಭೂತ, ಪ್ರೇತ, ಪಿಶಾಚಿ, ಜಿನ್ನುಗಳಲ್ಲಿ ವಿಶ್ವಾಸ ಪ್ರಶ್ನಾತೀತ. ಭಾರತೀಯ ಧಾರ್ಮಿಕ ಪದ್ಧತಿಗಳ ಕುರಿತ ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯ ಪ್ರಕಾರ ಅರ್ಧಕ್ಕರ್ಧ ಜನಸಂಖ್ಯೆ ದೆವ್ವ ಭೂತಗಳನ್ನು ನಂಬುತ್ತಾರೆ. ಶೇ. 71ರಷ್ಟು ಮಂದಿ ಗಂಗಾಜಲ ಪವಿತ್ರವೆನ್ನುತ್ತಾರೆ. ಶೇ. 38ರಷ್ಟು ಮಂದಿ ಪುನರ್ಜನ್ಮದಲ್ಲೂ, ಶೇ.76ರಷ್ಟು ಕರ್ಮ ಮತ್ತು ಶೇ.70ರಷ್ಟು ಮಂದಿ ವಿಧಿಬರೆಹದಲ್ಲಿ ವಿಶ್ವಾಸ ಉಳ್ಳವರಾಗಿದ್ದಾರೆ. ಈ ನಂಬಿಕೆಗಳಿಗೆ ಧರ್ಮಭೇದವಿಲ್ಲ.
ಹೀಗಾಗಿ ಇಂಡಿಯಾ ದೇಶ ಮಾಟಗಾರ-ಮಾಟಗಾತಿಯರು, ತಾಂತ್ರಿಕರು, ಗುರುಗಳು, ಪುರೋಹಿತರ ಆಡುಂಬೊಲ. ಅಂಧಶ್ರದ್ಧೆಗಳ ಎರಡು ಮಗ್ಗುಲುಗಳು ವಿಶ್ವಾಸ ಮತ್ತು ಭಯ. ದಮನ ದಬ್ಬಾಳಿಕೆ ಮತ್ತು ಅನ್ಯಾಯಗಳನ್ನು ಪ್ರೋತ್ಸಾಹಿಸುತ್ತವೆ. ಪೂರ್ವಗ್ರಹಗಳನ್ನು ಬಿತ್ತುತ್ತವೆ. ಸಾಮಾಜಿಕ ರಾಜಕೀಯ ಆರ್ಥಿಕ ಯಥಾಸ್ಥಿತಿಯನ್ನು ಕಾಯಲು ಬಳಕೆಯಾಗುತ್ತವೆ, ಹೆಣ್ಣುಮಕ್ಕಳನ್ನು ಕೇಡಿನ ದುರಾತ್ಮಗಳಾಗಿ ಪ್ರತಿಬಿಂಬಿಸುತ್ತವೆ. ಮಾಟ ಮಂತ್ರಗಳು ಅಂಧಶ್ರದ್ಧೆಗಳು ಹತ್ಯೆಗಳಲ್ಲಿ ಅವಸಾನಗೊಂಡಿರುವ ಹೇರಳ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ ಮಧ್ಯಭಾರತ ಮತ್ತು ಒಡಿಶಾದ ಆದಿವಾಸಿ ಸೀಮೆ. ಆಧುನಿಕ ವೈದ್ಯಕೀಯಕ್ಕಿಂತ ಅಂಧಶ್ರದ್ಧೆಗಳೇ ಈ ಜನರನ್ನು ಆಳಿವೆ. ನಿಜಾರ್ಥದ ಅಭಿವೃದ್ಧಿ ಶಿಕ್ಷಣಗಳು ಅವರನ್ನು ಮುಟ್ಟಿಯೇ ಇಲ್ಲ.
ಮಾಟಮಂತ್ರಗಳ ಆಚರಣೆ- ನರಬಲಿ- ಹತ್ಯೆಗಳು ಒಂದು ಕಾಲಕ್ಕೆ ಪಾಶ್ಚಿಮಾತ್ಯ ಜಗತ್ತಿನಲ್ಲೂ ದಟ್ಟವಾಗಿದ್ದವು ರೋಮ್ ಸಾಮ್ರಾಜ್ಯದಲ್ಲೂ ‘ವಿಜೃಂಭಿಸಿತ್ತು’. ಅದು 15ರಿಂದ 18ನೆಯ ಶತಮಾನ. ಲಕ್ಷಾಂತರ ಮಂದಿಯ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು. 40 ರಿಂದ 60 ಸಾವಿರ ಮಂದಿಯನ್ನು ಕೊಲ್ಲಲಾಯಿತು. ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಸುಡಲಾಯಿತು. ಇವರ ಪೈಕಿ ಶೇ. 80ರಷ್ಟು ಮಹಿಳೆಯರೇ ಇದ್ದರು.
ಭಾರತದಲ್ಲಿ ಈ ಪಿಡುಗು 21ನೆಯ ಶತಮಾನದಲ್ಲೂ ಆಡಗಿಲ್ಲ. ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಈ ಕೃತ್ಯ ಮುಂದುವರೆದಿರುವುದು ಲಜ್ಜೆಗೇಡು. 2000ದಿಂದ 2016ರ ನಡುವೆ 2,500 ಮಂದಿಯನ್ನು ಕೊಲ್ಲಲಾಗಿದ್ದು, ಬಹುಸಂಖ್ಯೆ ಮಹಿಳೆಯರದು (ಶೇ.98) ಮತ್ತು ದಲಿತ-ಆದಿವಾಸಿ-ಅತ್ಯಂತ ಹಿಂದುಳಿದ ವರ್ಗಗಳದು (ಶೇ.99) ಎಂದು ಎನ್.ಸಿ.ಆರ್.ಬಿ. ಅಂಕಿಅಂಶಗಳು ಹೇಳುತ್ತವೆ. ಯಾವುದೇ ನಾಗರಿಕ ಸಮಾಜವನ್ನು ತೀವ್ರ ಆತಂಕಕ್ಕೆ ಈಡು ಮಾಡಬೇಕಿರುವ ಕ್ರೂರ ವಾಸ್ತವವಿದು. ಈ ಅಂಕಿಅಂಶದ ಹಲವು ಪಟ್ಟು ಹೆಚ್ಚು ಹತ್ಯೆಗಳಾಗಿವೆ. ಅವುಗಳು ವರದಿಯಾಗಿಲ್ಲ ಎನ್ನಲಾಗಿದೆ. ಮಹಿಳೆಯರನ್ನು ಬಗೆಬಗೆಯಾಗಿ ದೈಹಿಕ ಚಿತ್ರಹಿಂಸೆ ಮತ್ತು ಮಾನಸಿಕ ಕ್ಲೇಶಕ್ಕೆ ಗುರಿ ಮಾಡಿ ಕೊಲ್ಲಲಾಗುತ್ತಿದೆ.
2024ರ ಡಿಸೆಂಬರ್ ನ ‘ಫ್ರಂಟ್ ಲೈನ್’ ಮಾಸಿಕದ ಪ್ರಕಾರ ದೇಶದಲ್ಲಿ ಸುಮಾರು 75 ಸಾವಿರ ಮಹಿಳೆಯರಿಗೆ ಮಾಟಗಾತಿಯ ಹಣೆಪಟ್ಟಿ ಹಚ್ಚಿ ಹಿಂಸಿಸಲಾಗುತ್ತಿದೆ. ಊರಿನಿಂದ ಹೊರಹಾಕಿ ಬಹಿಷ್ಕರಿಸಲಾಗುತ್ತಿದೆ. ಅವರ ತಲೆ ಬೋಳಿಸಿ, ಬೆತ್ತಲೆಗೊಳಿಸಿ, ಲೈಂಗಿಕವಾಗಿ ಹಿಂಸಿಸಿ, ಮಲ ತಿನ್ನಿಸಲಾಗುತ್ತಿದೆ. ಈ ಅಮಾನುಷತೆಯ ಹಿಂದಿರುವುದು ಆಳಕ್ಕೆ ಬೇರುಬಿಟ್ಟ ಗಂಡಾಳಿಕೆ ಮತ್ತು ಸರ್ಕಾರದ ನಿರ್ಲಕ್ಷ್ಯಗಳು ಎನ್ನುತ್ತಾರೆ ಸಮಾಜವಿಜ್ಞಾನಿಗಳು.
ಆರ್ಥಿಕವಾಗಿ ಸ್ವತಂತ್ರವಾಗಿರುವ, ಮನಸಲ್ಲಿದ್ದುದನ್ನು ಮಾತಾಡಿಬಿಡುವ, ತಾನು ಹೇಳಿದ್ದು ಸರಿಯೆಂದು ವಾದಿಸುವ, ಮುಂಚೂಣಿಯಲ್ಲಿರುವ ಹೆಣ್ಣುಮಕ್ಕಳನ್ನು ಈ ಕಂದಾಚಾರಕ್ಕೆ ಬಲಿ ಕೊಡಲಾಗುತ್ತಿರುವುದೂ ವಾಸ್ತವ. ಉದಾಹರಣೆಗೆ ಝಾರ್ಖಂಡದ ಮಂದರ್ ಗ್ರಾಮದ ಐವರು ಮಹಿಳೆಯರನ್ನು ಮಾಟಗಾತಿಯರೆಂಬ ಶಂಕೆಯ ಮೇರೆಗೆ ಕೊಲ್ಲಲಾಗುತ್ತದೆ. ಈ ಐವರೂ ಮಹಿಳೆಯರು ಮದ್ಯಪಾನ ವಿರೋಧಿ ಆಂದೋಲನದಲ್ಲಿ ಸಕ್ರಿಯರಾಗಿದ್ದ ಕಾರಣವೇ ಅವರ ಹತ್ಯೆ ಮಾಡಲಾಯಿತು ಎಂಬ ಆಂಶ ಆನಂತರ ಬೆಳಕಿಗೆ ಬರುತ್ತದೆ. ಗಂಡಾಳಿಕೆಯ ಅಧಿಕಾರ ಸಂರಚನೆಗೆ ಸವಾಲೆಸೆಯುವ, ಪುರುಷಾಧಿಪತ್ಯ ಕೊರೆದ ಗೆರೆಗಳನ್ನು ದಾಟುವ ಮಹಿಳೆಯರೂ ಮಾಟಗಾತಿಯರ ಹೆಸರಿನ ದಾಳಿಗೆ ತುತ್ತಾಗುತ್ತಿದ್ದಾರೆ. ಶೇ.48ರಷ್ಟು ಪ್ರಕರಣಗಳಲ್ಲಿ ಇಂತಹ ಆಪಾದನೆಗಳು ಗಂಡನ ಮನೆಯವರ ಕಡೆಯಿಂದ, ಶೇ.44ರಷ್ಟು ಆಪಾದನೆಗಳು ಬೇರೆ ಜಾತಿಗೆ ಸೇರಿದ ನೆರೆಹೊರೆಯವರಿಂದ ಹಾಗೂ ಶೇ.7ರಷ್ಟು ಆಪಾದನೆಗಳು ಅದೇ ಜಾತಿ ಅಥವಾ ಧರ್ಮದವರಿಂದ ಬರುತ್ತವೆಂದು ನಿರಂತರ ಟ್ರಸ್ಟ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಮಹಿಳೆಯಿಂದ ಆಕೆಯ ಆಸ್ತಿಪಾಸ್ತಿಯನ್ನು ಲಪಟಾಯಿಸಲೂ ಇದೇ ಹತಾರು ಬಳಕೆಯಾಗುವುದೂ ಉಂಟು.
ಮಾಟಗಾತಿಯರೆಂದು ಬಹಿಷ್ಕಾರಕ್ಕೆ ಗುರಿಯಾಗುವ ಮಹಿಳೆಯರಿಗೆ ಬದುಕಿ ಉಳಿಯುವುದೇ ದೈತ್ಯ ಸವಾಲಾಗಿ ಹೋಗುತ್ತದೆ ಅವರು ಎದುರಿಸುವ ಒಂಟಿತನ ಅಪಾರ. ಸುತ್ತಮುತ್ತಲ ತೀವ್ರ ಪ್ರಚಾರದ ಕಾರಣ ತಾವು ನಿಜಕ್ಕೂ ಮಾಟಗಾತಿಯರೇ ಇರಬಹುದೆಂಬ ಭಾವನೆಯನ್ನು ಅವರು ಅಂತರ್ಗತಗೊಳಿಸಿಕೊಂಡಿರುವ ಪ್ರಕರಣಗಳಿವೆ.
ಬಿಹಾರ, ಝಾರ್ಖಂಡ, ಛತ್ತೀಸಗಢ, ಒಡಿಶಾ, ರಾಜಸ್ತಾನ ಹಾಗೂ ಅಸ್ಸಾಮ್ ರಾಜ್ಯಗಳು ಮಾಟಮಂತ್ರಗಳ ಆಚರಣೆಯನ್ನು ಶಿಕ್ಷಾರ್ಹ ಅಪರಾಧ ಎಂದು ಕಾನೂನು ಮಾಡಿವೆ. ಮಹಿಳೆಯ ವಿರುದ್ಧ ಮಾಟಗಾತಿ ಎಂದು ಆರೋಪಿಸಿ ಹಿಂಸಿಸುವ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರುಪಾಯಿವರೆಗಿನ ದಂಡ ವಿಧಿಸುವ ಕಾನೂನು ಅಸ್ಸಾಮಿನಲ್ಲಿದೆ. ಆದರೆ ಈ ಕಾನೂನುಗಳು ಬಹುತೇಕ ಕಾಗದದ ಮೇಲೆಯೇ ಉಳಿದು ಹೋಗಿವೆ.
ಇದನ್ನೂ ಓದಿ ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಪೌರತ್ವ ಸಾಬೀತಿಗೆ ಜನರ ಪರದಾಟ; ಮತದಾನದ ಹಕ್ಕನ್ನೇ ಕಳೆದುಕೊಳ್ಳುವರೇ 50% ಜನರು?
ಕೇಂದ್ರದ ಮಟ್ಟದಲ್ಲಿ ಕಾನೂನು ತರುವ ಹಲವು ಪ್ರಯತ್ನಗಳಾಗಿವೆ. ರಾಜ್ಯಸಭೆಯಲ್ಲಿ ಮೂರು ಬಾರಿ ಮಂಡಿಸಲಾದ ಖಾಸಗಿ ನಿರ್ಣಯಗಳು ದಡ ಸೇರಲೇ ಇಲ್ಲ. ನಾಲ್ಕನೆಯ ಇಂತಹುದೇ ಮಸೂದೆ ಬಾಕಿ ಉಳಿದಿದೆ. ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳ ಪ್ರಕಾರ ಈ ಹಿಂಸಾಚಾರ ತಡೆಯಲು ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಪ್ರಯತ್ನಗಳು ನಡೆಯಬೇಕಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣವೆಂಬ ಸೂರ್ಯಕಿರಣವನ್ನು ದಮನಿತರಿಗೆ ಸೋಕಿಸಬೇಕಿದೆ. ಆದರೆ ಅವರನ್ನು ಕತ್ತಲೆಯಲ್ಲೇ ಇರಿಸಲು ಬಯಸುತ್ತವೆ ಪಟ್ಟಭದ್ರ ಹಿತಾಸಕ್ತಿಗಳು.
