ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ(ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ.ಹಳ್ಳದ ಬುಧವಾರ ಭೇಟಿ ನೀಡಿ ಶಾಲಾ ಕಟ್ಟಡ ಪರಿಶೀಲಿಸಿದರು.
ಶಾಲಾ ಕೋಣೆಗಳ ದುಸ್ಥಿತಿ ಕುರಿತು ನಿನ್ನೆ (ಜು.8) ರಂದು ʼಈದಿನ.ಕಾಮ್ʼ ನಲ್ಲಿ ʼಸೋರುವ ಕೊಠಡಿಯಲ್ಲಿ ಮಕ್ಕಳ ಕಲಿಕೆ : ಜೋರು ಮಳೆ ಬಂದ್ರೆ ಶಾಲೆಗೆ ರಜೆ!ʼ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಈ ವರದಿಗೆ ಸ್ಪಂದಿಸಿದ ಭಾಲ್ಕಿ ತಾಲ್ಲೂಕು ಬಿಇಒ ನೇತ್ರತ್ವದ ತಂಡ (ಇಂದು) ಬುಧವಾರ ಬೆಳಿಗ್ಗೆ ಶಾಲೆಗೆ ಭೇಟಿ ನೀಡಿ ಶಿಥಿಲಗೊಂಡ ಶಾಲಾ ಕೋಣೆಗಳನ್ನು ಪರಿಶೀಲಿಸಿ, ಶಿಕ್ಷಕರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ʼಈದಿನʼ ಮಾಧ್ಯಮದಲ್ಲಿ ಪ್ರಕಟವಾದ ವರದಿ ಓದಿ ಇಂದು ಶಾಲೆ ಭೇಟಿ ನೀಡಿದ್ದೇನೆ. ಶಾಲೆಯ ಏಳು ಕೋಣೆಗಳು ದುರಸ್ತಿ ಕಾಣದಷ್ಟು ಶಿಥಿಲಾವಸ್ಥೆಗೆ ತಲುಪಿವೆ. ಏಳು ಕೊಠಡಿಗಳು ನೆಲಸಮಗೊಳಿಸಲು ಅನುಮತಿಗಾಗಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ. ಈ ಶಾಲೆಯಲ್ಲಿ ಶೇ 50ರಷ್ಟು ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಲ್ಲಿ ಶೀಘ್ರದಲ್ಲಿ ಹೊಸ ಏಳು ಕೋಣೆ ನಿರ್ಮಾಣಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಮುಖಾಂತರ ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗುವುದುʼ ಎಂದು ಬಿಇಒ ಸಿ.ಜೆ.ಹಳ್ಳದ ʼಈದಿನʼಕ್ಕೆ ತಿಳಿಸಿದ್ದಾರೆ.
ಶಾಲೆ ಸ್ಥಳಾಂತರ :
ʼಶಾಲೆಯ ಎಲ್ಲ ಕೋಣೆಗಳು ಪೂರ್ಣ ಶಿಥಿಲಗೊಂಡಿದ್ದು, ಮಳೆಯಾದರೆ ಮಕ್ಕಳ ಕಲಿಕೆ ತೀವ್ರ ತೊಂದರೆಯಾಗುತ್ತಿದೆ. ಶಿಕ್ಷಕರು, ಮಕ್ಕಳು ಜೀವ ಭಯದಲ್ಲೇ ಇರುವ ಪರಿಸ್ಥಿತಿಯನ್ನು ಕಂಡ ಬಿಇಒ ಅವರು ತಾತ್ಕಾಲಿಕವಾಗಿ ಅದೇ ಆವರಣದಲ್ಲಿರುವ ಕನ್ನಡ-ಉರ್ದು ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ನಾಲ್ಕು ಕೋಣೆಗಳಲ್ಲಿ ಪ್ರೌಢ ಶಾಲೆ ಮಕ್ಕಳಿಗೆ ತರಗತಿ ನಡೆಸಲು ತಿಳಿಸಲಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ | ಸೋರುವ ಕೊಠಡಿಯಲ್ಲಿ ಮಕ್ಕಳ ಕಲಿಕೆ : ಜೋರು ಮಳೆ ಬಂದ್ರೆ ಶಾಲೆಗೆ ರಜೆ!
ʼಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗೆ 119 ವಿದ್ಯಾರ್ಥಿಗಳ ಓದುತ್ತಿದ್ದಾರೆ. ಒಟ್ಟು 10 ಜನ ಶಿಕ್ಷಕರಿದ್ದಾರೆ. ಸೋರುವ ಕೊಠಡಿಗಳಲ್ಲೇ ಸುರಕ್ಷಿತವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡುವುದು ಇಲ್ಲಿನ ಶಿಕ್ಷಕರಿಗೆ ತಲೆ ನೋವಾಗಿ ಪರಿಣಮಿಸಿತು. ʼಈದಿನʼ ವರದಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದು ಆತಂಕ ದೂರ ಮಾಡಿದೆʼ ಎಂದು ಶಿಕ್ಷಕರು, ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.