ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಬಿಹಾರದಲ್ಲಿ ಅದೇ ರೀತಿ ಆಗಲು ಬಿಡಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ(SIR) ಅನ್ನು ಕಡಿಮೆ ಅವಧಿಯಲ್ಲಿ ಜಾರಿಗೆ ತರುವ ಮತ್ತು ಮತದಾರರ ಪರಿಷ್ಕರಣಾ ಕಾರ್ಯವನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುವ ಚುನಾವಣಾ ಸಮಿತಿಯ ಪ್ರಯತ್ನವನ್ನು ಪ್ರಶ್ನಿಸಿದರು.
ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಪಟನಾದಲ್ಲಿ ಇಂಡಿಯಾ ಒಕ್ಕೂಟ ನಡೆಸಿದ ಮೆರವಣಿಗೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ರಾಹುಲ್ ಗಾಂಧಿ ಅವರು, “ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲಿ ‘ಮತ ಕಳ್ಳತನ’ ನಡೆದಂತೆ, ಬಿಹಾರದಲ್ಲಿಯೂ ಇದೇ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಹಾರ ಹಾಸ್ಟೆಲ್‌ನಲ್ಲಿ ‘ಅನಧಿಕೃತ’ ಕಾರ್ಯಕ್ರಮ ಆರೋಪ; ರಾಹುಲ್ ಗಾಂಧಿ ವಿರುದ್ಧ 2 ಎಫ್‌ಐಆರ್‌ಗಳು
“ಮಹಾರಾಷ್ಟ್ರದಲ್ಲಿ, ನಾವು ಲೋಕಸಭಾ ಚುನಾವಣೆಯ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಲೋಕಸಭಾ ಚುನಾವಣೆಯ ಕೆಲವೇ ತಿಂಗಳುಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ, ನಾವು ತುಂಬಾ ಕಳಪೆ ಪ್ರದರ್ಶನ ನೀಡಿದ್ದೇವೆ. ಈ ವಿಚಾರದಲ್ಲಿ ನಾವು ಸ್ವಲ್ಪ ಸಮಯದವರೆಗೆ ಮೌನವಾಗಿದ್ದೆವು. ಆದರೆ ನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಮತದಾರರ ಪಟ್ಟಿಯಲ್ಲಿ ಸುಮಾರು 1 ಕೋಟಿ ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ತಿಳಿದುಬಂದಿತು. ಎಲ್ಲೆಲ್ಲ ಇಂತಹ ಸೇರ್ಪಡೆಯಾಗಿದೆಯೊ ಅಲ್ಲೆಲ್ಲ ಎನ್‌ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಲೋಜಸಭೆ ಚುನಾವಣೆಯ 48 ಸ್ಥಾನಗಳ ಪೈಕಿ 30 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟವು ಗೆದ್ದಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಭಾರೀ ಹಿನ್ನೆಡೆ ಕಂಡಿತ್ತು. ಅದಾದ ಬಳಿಕ ಮತದಾರರ ಅಂಕಿ ಅಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ.
“ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿ ಆಗಲು ಬಿಡಲ್ಲ. ಬಿಹಾರದ ಜನರು ಚುರುಕಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮಾಡಿದಂತೆ ಇಲ್ಲಿ ಮಾಡಲು ಚುನಾವಣಾ ಆಯೋಗಕ್ಕೆ ನಾವು ಬಿಡುವುದಿಲ್ಲ” ಎಂದು ಹೇಳಿದರು.
