ಶಿವಮೊಗ್ಗ, ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಎನ್ನುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ವರದಿಯಾಗಿದೆ.
ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಬೈಕಿನಲ್ಲಿ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಮೆರೆಯಲಾಗಿದೆ.ಸೊರಬದ ಕಾನು ಕೇರಿ ಗ್ರಾಮದ 19 ವರ್ಷದ ಯುವತಿಯೊಬ್ಬರು ಸಾಗರ ಶಾಹಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿದ್ದರು.
ಜುಲೈ.7ರಂದು ಹಿಂದೂ ಯುವಕನ ಬೈಕಿನಲ್ಲಿ ತೆರಳುತ್ತಿದ್ದಾಗ ಮಧ್ಯಾಹ್ನ 12 ಗಂಟೆಗೆ ಯಡವರಸೆ ರೈಲ್ವೆ ಗೇಟ್ ಬಳಿಯಲ್ಲಿ ಕಾರಿನಲ್ಲಿ ಬಂದಂತ ಅನ್ಯಕೋಮಿನ ಯುವಕರು ಬೈಕ್ ಅಡ್ಡಗಟ್ಟಿ ಇದನ್ನು ಪ್ರಶ್ನಿಸಿದ್ದಾರೆ.ಹಿಂದೂ ಹುಡುಗನ ಜೊತೆಗೆ ಹೋಗುತ್ತೀಯ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಬೆರಳುಗಳನ್ನು ಹಿಡಿದು ತಿರುವಿ ಹಲ್ಲೆ ಮಾಡಿದ್ದಾರೆ.
ಇದಲ್ಲದೇ ಬೈಕಿನಲ್ಲಿ ಇಬ್ಬರನ್ನೂ ಕೂರಿಸಿಕೊಂಡು ಹೋಗಿ ಇಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದಂತ ಪೊಲೀಸರು ಇಬ್ಬರನ್ನು ರಕ್ಷಿಸಿದ್ದಾರೆ.
ಯುವತಿ ನೀಡಿದಂತ ದೂರಿನ ಹಿನ್ನಲೆಯಲ್ಲಿ ಎಸ್ ಎನ್ ನಗರದ ಶಬ್ಬೀರ್ (65), ಅರ್ಬಾಸ್(24) ಹಾಗೂ ಅಫ್ರಾಜ್(25) ಎಂಬುವರ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಸುಮ್ಮನಿರಲ್ಲ. ಯಾವುದೇ ಧರ್ಮ, ಪಂಗಡವಾಗಿರಲೀ ನೈತಿಕ ಪೊಲೀಸ್ ಗಿರಿ ನಡೆಸಬಾರದು. ಒಂದು ವೇಳೆ ಕಾನೂನು ಮೀರಿ ವರ್ತಿಸಿದರೇ ಅಂತವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.