ಕೊಪ್ಪ ತಾಲ್ಲೂಕಿನ ಹರಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜೂನ್ 28ರಂದು ಸ್ನಾನ ಗ್ರಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ತನಿಖೆಗೆ ಆದೇಶಿದ್ದ ಬೆನ್ನಲೇ ವಸತಿ ಶಾಲೆಯ ಪ್ರಾಂಶುಪಾಲೆ ಮತ್ತು ವಾರ್ಡನ್ ಅವರನ್ನು ಅಮಾನತು ಮಾಡಲಾಗಿದೆ.
ಈ ಸಂಬಂಧ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್.ಕಾಂತರಾಜು ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಬಾಲಕಿ ಪೋಷಕರು ಈ ಪ್ರಕರಣದ ಬಗ್ಗೆ ಶಂಕೆ ವ್ಯಕ್ತಪಡಿಸಿ ಶಾಲೆಯ ಸಿಬ್ಬಂದಿಯ ದೌರ್ಜನ್ಯದಿಂದಲೇ ಶಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದರು. 2023ರಲ್ಲೂ ಇದೇ ರೀತಿಯಲ್ಲಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿತುʼ ಎಂದು ದೂರಿದರು.
ಪ್ರಗತಿಪರ, ಕನ್ನಡಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸೋಮವಾರ ಸಾವಿರಾರು ಜನರು ಕೊಪ್ಪ ಪಟ್ಟಣದಲ್ಲಿ ಬೃಹತ್ ಧರಣಿ ನಡೆಸಿ ಶಮಿತಾ ಹಾಗೂ ಅಮೂಲ್ಯ ಆತ್ಮಹತ್ಯೆ ಪ್ರಕರಣಗಳ ತನಿಖೆ ನಡೆಸಿ, ಶಾಲೆಯ ಪ್ರಾಂಶುಪಾಲೆ, ವಾರ್ಡನ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡರು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಕರಣಗಳನ್ನು ಜಿಲ್ಲಾ ಮಟ್ಟದ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಆದೇಶಿಸಿದ್ದು, ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಶೋಭಾ ಅವರನ್ನು ತನಿಖೆಗಾಗಿ ನೇಮಿಸಿ ಆದೇಶಿಸಿದರು. ನ್ಯಾಯಾಂಗ ತನಿಖೆಯ ಆದೇಶದ ಬೆನ್ನಲ್ಲೇ ಬುಧವಾರ ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ರಂಜಿನಿ ಹಾಗೂ ವಾರ್ಡನ್ ಸುಂದರ್ ನಾಯ್ಕ್ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ʼಈದಿನʼ ಫಲಶೃತಿ : ಹಾಲಹಳ್ಳಿ(ಕೆ) ಪ್ರೌಢ ಶಾಲೆಗೆ ಬಿಇಒ ಭೇಟಿ; ಶಾಲೆ ಸ್ಥಳಾಂತರ
ʼವಿದ್ಯಾರ್ಥಿನಿ ಅನುಮಾನಸ್ಪದ ಸಾವಿನ ಹಿನ್ನೆಲೆ ಅಲ್ಲಿನ ಪ್ರಾಂಶುಪಾಲರಾದ ರಜಿನಿ ಅವರ ಕರ್ತವ್ಯಲೋಪ ಕಂಡು ಬಂದಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಚಿವರಿಗೆ ಕೋರಿದ್ದೆ, ಇದೀಗ ಇಬ್ಬರು ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಮೃತ ವಿದ್ಯಾರ್ಥಿನಿ ಕುಟುಂಬದೊಂದಿಗೆ ನಾನಿದ್ದೇನೆʼ ಎಂದು ಶಾಸಕ ಟಿ.ಡಿ.ರಾಜೇಗೌಡರು ತಿಳಿಸಿದ್ದಾರೆ.