ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಿರ್ಜನವಾದ ಕಾಡಿನ ದಾರಿ. ಆ ಮಾರ್ಗದಲ್ಲೊಂದು ಕಾರು. ಕಾರಿನಲ್ಲಿ ಸುಂದರಿಯಾದ ಸ್ತ್ರೀ. ಅವರ ಜೊತೆಗೊಬ್ಬ ಶಾಫರ್.
ಹೊತ್ತು ಹೋಗದೆ, ಹರಟೆ ಹೊಡೆಯಲು ವಸ್ತು ಸಿಗದೆ ನಾಲಗೆ ತುರಿಸುತ್ತಿದ್ದ ಜನಕ್ಕೆ, ವಾದ ವಿವಾದಕ್ಕೆ ಇದ್ದಕ್ಕಿಂತ ಅಮೋಘವಾದ ರಸವತ್ತಾದ ವಸ್ತು ಬೇರೇನು ಸಿಗಬಹುದು ಹೇಳಿ? ಇದರ ಮೇಲೆ ಕವಿತೆಯನ್ನೇ ಕಟ್ಟಬಹುದು; ವೇದಾಂತ ಮಾತಾಡಬಹುದು; ಮನೋವಿಜ್ಞಾನ ಚರ್ಚಿಸಬಹುದು; ಕಾಮಶಾಸ್ತ್ರ ಮಾತನಾಡಬಹುದು. ಈ ಶಾಸ್ತ್ರಪ್ರಪಂಚ ಸಾಲದೆ ಬಂದರೆ ಕಡೆಗೆ ತಮ್ಮ ತಮ್ಮಲ್ಲೇ ಜಗಳವಾಡಬಹುದು.
ನಿಜವಾಗಿ ತಮ್ಮ ಊಹೆಗೆ ಸಾಣೆ ಕೊಡಲು ಅದಕ್ಕಿಂತ ಸುಂದರವಾದ ವಸ್ತು ಬೇರೊಂದಿಲ್ಲವೇ ಇಲ್ಲ ಎಂದು ನನ್ನ ಅಭಿಪ್ರಾಯ. ನನ್ನ ಅಭಿಪ್ರಾಯವೇನು? ಆ ದಿನ ಅಲ್ಲಿ ಕಲೆತಿದ್ದ ನಮ್ಮೆಲ್ಲರ ಅಭಿಪ್ರಾಯವೂ ಅದೇ ಆಗಿತ್ತು.
ತೀರ್ಥಹಳ್ಳಿಗೆ ಯಾವುದೋ ಭಾಷಣಕ್ಕಾಗಿ ಹೋಗಿದ್ದ ನಾನು ಮತ್ತು ನನ್ನ ಗೆಳೆಯ ಅರಸು, ಆ ಅವಕಾಶವನ್ನು ಉಪಯೋಗಿಸಿಕೊಂಡು ಜಗದ್ವಿಖ್ಯಾತವಾದ ಆಗುಂಬೆಯ ಸೂರ್ಯಾಸ್ತವನ್ನು ನೋಡಲು ತೀರ್ಥಹಳ್ಳಿಯ ಮಿತ್ರ, ವಿಶ್ವನಾಥನ ಕಾರಿನಲ್ಲಿ ಆಗುಂಬೆಯತ್ತ ಹೊರಟಿದ್ದೆವು. ನಮ್ಮೊಂದಿಗೆ ತೀರ್ಥಹಳ್ಳಿಯ ಮತ್ತೆ ಕೆಲವು ಮಿತ್ರರಿದ್ದರು.
ಯಾವ ಚಿಂತೆಯೂ ಇಲ್ಲದೆ ಹೊಟ್ಟೆ ತುಂಬಿ, ಸೇದಲು ಸಾಕಾಗುವಷ್ಟು ಸಿಗರೇಟೂ ಇದ್ದುದರಿಂದ ನಮ್ಮೆಲ್ಲರ ನಾಲಗೆಗೂ ಆ ದಿನ ನೆರೆಬಂದಿತ್ತು. ಆ ಉತ್ಸಾಹದಲ್ಲಿ ಬಹು ಬೇಗ ಹರಟೆಯ ವಿಷಯಗಳೆಲ್ಲವೂ ಮುಗಿದು, ಬೇರೇನು ವಿಷಯ ಎಂಬ ಯೋಚನೆ ನಮ್ಮ ತಲೆಯನ್ನು ಕಾಡುವ ವೇಳೆಗೆ, ಆ ಕಾರು ನಮ್ಮ ಕಣ್ಣಿಗೆ ಬಿತ್ತು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ದಾರಿ- ಒಂದು ವಿಷಯ ಬಿಟ್ಟರೆ ನಿಜಕ್ಕೂ ಸ್ವರ್ಗದ ದಾರಿ.
ಇಬ್ಬದಿಯ ಹೆಮ್ಮರಗಳ ಕಾಡು, ಕಣ್ಣು ತಣಿಸುವ ಹಸಿರು, ಉಸಿರನ್ನು ಬಿಗಿ ಹಿಡಿದಿಡುವ ಕಂದರಗಳು, ಕಂದರದ ಆಳದಲ್ಲಿ ಎಲ್ಲೋ ಕಾಣಿಸುವ ಅಡಕೆಯ ತೋಟಗಳು. ಏರಿ ಇಳಿದು ಛೋಟಾಟವಾಡಿಸುವ ವರ ರಮಣಿಯ ಬೈತಲೆಯ ವಕ್ರವಿನ್ಯಾಸದಂತೆ ಶೋಭಿಸುವ ಕೆಂಪು ದಾರಿ; ಮಧ್ಯೆ ಮಧ್ಯೆ ಕಣ್ಣನ್ನು ಸೆರೆ ಹಿಡಿದು ನಿಲ್ಲಿಸುವ, ಬೇರೆಲ್ಲೂ ಕಾಣಿಸದ ಹೂವು, ಗಿಡಗಳು! ಒಂದೇ ಕಾಲದಲ್ಲಿ ಭಾವಪ್ರಪಂಚವನ್ನೇ ವ್ಯಕ್ತಪಡಿಸುವ ಗಾಯಕನ ಪ್ರತಿಭೆಯಂತೆ ಹಸಿರು ಬಣ್ಣವೊಂದರಲ್ಲೇ ಲೋಕದ ಚೆಲುವನ್ನೆಲ್ಲಾ ತುಂಬಿದ ಪ್ರಕೃತಿಯ ಪ್ರತಿಭೆ. ನಿಜವಾಗಿಯೂ ಆಗುಂಬೆಯ ಮಾರ್ಗ ಜೀವಂತ ಕವಿತೆ. ಆದರೆ ಈ ಸೌಂದರ್ಯಸಾಧನೆಯ ನಮ್ಮ ರಸತಪಸ್ಸಿಗೆ ಭಂಗ ತರುವ ಅಪ್ಸರೆ ಎಂದರೆ ಆ ದಾರಿಯ ನುಣ್ಣನೆಯ ಕೆಂಧೂಳು. ಕಣ್ಣು, ಕಿವಿ, ಮೂಗು ಬಾಯಿಗಳೆಲ್ಲಾ ತುಂಬುವ ಆ ಧೂಳು ಈ ಇಂದ್ರಿಯಗಳು ಬೇರಾವ ಕೆಲಸಕ್ಕೂ ಬಾರದಂತೆ ಮಾಡಿ ಆ ಸ್ವರ್ಗವನ್ನು ಒಂದೇ ಗಳಿಗೆಯಲ್ಲಿ ನರಕವನ್ನಾಗಿ ಮಾಡುತ್ತದೆ.
ಸಣ್ಣ ಗಾಳಿಗೆ ಕೆದರಿ ಮೋಡದಂತೆ ಏಳುವ ಆ ಧೂಳಿಗೆ ಇನ್ನೂ ವೇಗವಾಗಿ ಓಡುವ ಸಾವಿರ ಚಕ್ರಗಳ ನೆರವು ಸಿಕ್ಕಿದರೆ ಕೇಳಬೇಕೇ? ಲೋಕದಲ್ಲಿ ಕೆಂಧೂಳಲ್ಲದೆ ಬೇರೇನೂ ಇಲ್ಲವೇ ಇಲ್ಲ ಎಂಬಂತಿತ್ತು ನಮ್ಮಮುಂದೆ ಹೋಗುತ್ತಿದ್ದ ಕಾರು, ನಮ್ಮತ್ತ ನಿರ್ದಾಕ್ಷಿಣ್ಯವಾಗಿ ಉಗ್ಗುತ್ತಿದ್ದ ಧೂಳನ್ನು ನೋಡಿದರೆ. ಆ ಧೂಳಿನ ಹಾವಳಿಯನ್ನು ಹತ್ತು ನಿಮಿಷ ಸಹಿಸುವುದರೊಳಗಾಗಿ ನಮಗೆಲ್ಲಾ ಆಗುಂಬೆಯನ್ನು ಮರೆತು ತೀರ್ಥಹಳ್ಳಿಗೆ ಹಿಂತಿರುಗೋಣವೆನಿಸುವ ಹಾಗಾಯಿತು. ನಮ್ಮ ಅವಸ್ಥೆಯನ್ನು ಕಂಡು ಕಾರಿನ ಸಾರಥಿಯಾದ ವಿಶ್ವನಾಥ, ನಾವು ಕುಡಿದು ಅನುಭವಿಸಿದ ಧೂಳನ್ನು ಮುಂದೆ ಹೋಗುತ್ತಿದ್ದ ಕಾರಿನವನಿಗೆ ಕುಡಿಸುವ ಶಪಥ ಮಾಡಿ ಹಳೆಯ ಫೋರ್ಡ್ ಬೇಕರ್ ಗಾಡಿ ಎಷ್ಟು ವೇಗವಾಗಿ ಓಡಬಹುದೋ ಅಷ್ಟು ವೇಗವಾಗಿ ಓಡಿಸಿದ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ನಮ್ಮ ಮುಂದೆ ಹೋಗುತ್ತಿದ್ದ ಕಾರು ಹೊಸದು. ನಮ್ಮ ಕಾರಿನ ಇಮ್ಮಡಿ ವೇಗದಲ್ಲಿ ಓಡಬಲ್ಲಂಥ ಹೆಚ್ಚು ಅಶ್ವಶಕ್ತಿಯ ವಾಹಕ. ಅದನ್ನು ನಾವು ಹಿಂದೆ ಹಾಕುವುದು ಸಾಧ್ಯವೇ? ಆ ಹುರುಪಿನಲ್ಲಿ ನಾವು ಮತ್ತಷ್ಟು ಹೆಚ್ಚಾಗಿ ಧೂಳು ಕುಡಿಯುವುದರ ಹೊರತು ಬೇರೇನು ಪ್ರಯೋಜನವಿಲ್ಲವೆಂದು ನನಗೆ ತೋರಿತು. ಆದರೆ ವಿಶ್ವನಾಥ ಕದೀಮ. ಕಾರು ಹೋಗುತ್ತಿದ್ದ ರೀತಿಯಲ್ಲಿ ಅಲ್ಲಿನ ದಾರಿಗೆ ಅವರು ಹೊಸಬರು ಎಂಬುದನ್ನು ಕಂಡುಕೊಂಡು, ಆ ಕಾರು ಒಂದು ತಿರುಗನ್ನು ಸುತ್ತುವಾಗ ವೇಗವನ್ನು ಕಡಿಮೆ ಮಾಡಿದ ಸಂದರ್ಭವನ್ನು ಉಪಯೋಗಿಸಿಕೊಂಡು ಮುಂದಿದ್ದ ಕಾರಿನವರ ಕಿವಿ ಒಡೆಯುವಂತೆ ಹಾರನ್ನು ಬಾರಿಸಿ ಹೆದರಿಸಿ ನಮ್ಮ ಕಾರನ್ನು ಮುಂದೆ ನುಗ್ಗಿಸಿದ. ‘ಈಗ ಚೆನ್ನಾಗಿ ಧೂಳು ಕುಡಿಯಲಿ ಆ ಪಾಪಿಗಳು- ಅವರಿಗೆ ಹತ್ತು ದಿನ ಊಟದ ಖರ್ಚು ಮಿಗುತ್ತದೆʼ -ಎಂದ ವಿಶ್ವನಾಥ ಸ್ಪರ್ಧೆಯಲ್ಲಿ ಗೆದ್ದ ಉತ್ಸಾಹದಲ್ಲಿ, ಬರೀ ಧೂಳೇನು, ಅದರೊಂದಿಗೆ ನಮ್ಮ ಕಾರಿನ ಹಿಂಬದಿಯಿಂದ ಧಾರಾಳವಾಗಿ ಚಿಮ್ಮುತ್ತಿದ್ದ ಹೊಗೆಯನ್ನೂ ಅವರು ಸೇವಿಸಬಹುದಾಗಿತ್ತು. ಆದರೆ ನಾವಾರೂ ಹಿಂದಿನ ಕಾರಿನವರನ್ನು ಕನಿಕರಿಸುವ ಸ್ಥಿತಿಯಲ್ಲಿರಲಿಲ್ಲ.
‘ಲೋ- ಆ ಕಾರಿನಲ್ಲಿದ್ದೋನನ್ನ ನೋಡಿದೆಯೇನೋ?’ ಎಂದ ಅರಸು ನನ್ನ ತೋಳನ್ನು ಚಿವುಟಿ.
‘ಈ ಧೂಳಿನಲ್ಲಿ ಏನೂ ಕಾಣಲಿಲ್ಲ. ಯಾರು ಇದ್ದವರು?’ ಎಂದೆ ನಾನು.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
‘ನೀನು ಪಾಪಿ! ಧೂಳು ಕುಡಿದು ಬೇಸತ್ತ ಕಣ್ಣುಗಳು ಒಂದು ಗಳಿಗೆ ಸಂತೋಷಪಡಲಿ ಎಂದು ದೇವರು ಆ ಕಾರಿನಲ್ಲಿ ಒಬ್ಬ ಚೆಲುವೆಯನ್ನು ಕಳಿಸಿದರೆ ಆ ಅವಕಾಶವನ್ನು ಕಳೆದುಕೊಂಡೆಯಲ್ಲಾ, ನಿನ್ನಂಥ ಪಾಪಿಗಳು ಇನ್ನು ಉಂಟೇ?’ -ಎಂದ ಅರಸು ನನ್ನ ದೌರ್ಭಾಗ್ಯಕ್ಕಾಗಿ ಕನಿಕರಿಸಿ ನಿಟ್ಟುಸಿರು ಬಿಡುತ್ತಾ. ‘ನಿಜವಾಗಿ ಬ್ಯೂಟಿಫುಲ್ ವುಮನ್ ಸಾರ್’ -ಎಂದ ವಿಶ್ವನಾಥ, ಉಳಿದವರೂ ಆಕೆಯನ್ನು ನೋಡಿದ್ದರು. ಅವರೆಲ್ಲರೂ ಆ ಇಬ್ಬರೊಂದಿಗೆ ಧ್ವನಿ ಕೂಡಿಸಿದಾಗ, ಕೊನೆಗೂ, ನಾನೇ ಒಬ್ಬ ಬಡಪಾಪಿ ಎಂದುಕೊಳ್ಳುವ ಹಾಗಾಯಿತು.
ಅಷ್ಟಕ್ಕೆ ನಿಲ್ಲಿಸದೇ ಅವರು ಒಬ್ಬರ ಮೇಲೊಬ್ಬರು ಸ್ಪರ್ಧೆ ಹೂಡಿ ಆ ಕಾರು ನಡೆಸುತ್ತಿದ್ದ ಹೆಣ್ಣಿನ ಸವಿವರವಾದ ವರ್ಣನೆಗೆ ತೊಡಗಿದ್ದರು. ಅಲ್ಲಿಗೂ ನಿಲ್ಲಲಿಲ್ಲ ಮಾತು.
‘ಕಾರಿನಲ್ಲಿ ಅವಳೊಬ್ಬಳೇ ಕಣೋ- ಜೊತೆಗೊಬ್ಬ ಶಾಫರ್ ಅಷ್ಟೆ. ಆ ಶಾಫರ್ ಪುಣ್ಯವಂತ ಕಣೋ’ -ಎಂದ ಒ.ಪಿ.
‘ಹೂಂ! ದಾರಿಯಲ್ಲಿ ಎಲ್ಲಿಯಾದರೂ ಕಾರು ಕೆಟ್ಟು ನಿಂತರೆ ಆತನ ಅದೃಷ್ಟ ಇನ್ನೂ ಖುಲಾಯಿಸುತ್ತದೆ’ -ಎಂದ ವೆಂಕಟಶ್ಯಾಮ್-ಊಹೆಯನ್ನು ಚುರುಕುಮಾಡಿ.
‘ಅಲ್ಲಾ ಸಾರ್ ಕಾಲ ಎಷ್ಟು ಕೆಟ್ಟುಹೋಯಿತು? ಒಂಟಿ ಹೆಂಗಸು. ಅದರಲ್ಲೂ ಸುಂದರಿ, ಇಂಥ ದಾರಿಯಲ್ಲಿ ಒಂಟಿಯಾಗಿ, ಒಬ್ಬ ಡ್ರೈವರ್ ಜೊತೆಗೆ ಪ್ರಯಾಣ ಮಾಡುವುದು ಅಂದರೇನು? ‘ಗಂಡಸು ಅಗ್ನಿಕುಂಡ; ಹೆಂಗಸು ಬೆಣ್ಣೆಯ ಕೊಡ’ ಎಂದು ಹೇಳಿದ್ದಾರೆ ವ್ಯಾಸ ಮಹರ್ಷಿಗಳು, ಹಾಗಿರುವಾಗ, ಆ ಡ್ರೈವರನ ಮನಸ್ಸೇನಾದರೂ ಕೊಂಚ ಕೆಟ್ಟರೆ- ಗತಿ ಏನು? ಕಲಿಕಾಲ ಸಾರ್ ಎಲ್ಲ ಕೆಟ್ಟು ಹೋಯಿತು’ -ಎಂದ ಹಿಂದಿ ಪಂಡಿತರು ಲೊಚಗುಟ್ಟಿದರು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
‘ಡ್ರೈವರನ ಮನಸ್ಸು ಕೆಡುವುದೇ ಇವರಿಗೂ ಬೇಕಾಗಿರುತ್ತೆ ಪಂಡಿತರೇ. ಈ ಕಾಲದ ಹೆಂಗಸರನ್ನು ನಾವು ಕಾಣೆವೆ? ನಮ್ಮ ಕಾಲೇಜಿನಲ್ಲಿ ನಾನು ನೋಡಿದೀನಲ್ಲಾ. ಈ ಕಾಲದ ಹುಡುಗಿಯರು’ -ಎಂದು ಆಗ ತಾನೇ ಕಾಲೇಜಿನ ಮೆಟ್ಟಿಲು ತುಳಿದಿದ್ದ ಮಾನಪ್ಪ ತನ್ನ ಅನುಭವಾಮೃತವನ್ನು ಹಂಚಿದ.
ಅದರೊಂದಿಗೆ ಮಾತು, ಈ ಕಾಲದ ಹೆಂಗಸರು, ಅವರ ಆಧುನಿಕತೆಯ ಮಬ್ಬು, ಅವರ ಮನಸ್ಸು, ಫ್ರಾಯ್ಡನ ಮನೋವಿಜ್ಞಾನ, ಪುರುಷನೊಂದಿಗೆ ಸಮಾನತೆಗೆ ಸ್ಪರ್ಧಿಸುವ ಅವರದು ಹುಚ್ಚು ಹವ್ಯಾಸ, ಅವರ ಉಡುಪು ತೊಡುಪುಗಳು, ಅದಕ್ಕೆ ಕಾರಣವಾದ ಇಂದಿನ ನಾಗರಿಕತೆ, ಮನುಷ್ಯನ ಅಲ್ಪ ಬಯಕೆಗಳನ್ನು ಕೆರಳಿಸುವ ಇಂದಿನ ಅನಿಶ್ಚಿತ ಪರಿಸ್ಥಿತಿ, ಎಲ್ಲದರ ಬಗೆಗೂ ನಡೆದು, ಕಡೆಗೆ ಶಾಶ್ವತವಾದ ಪಾಪಪುಣ್ಯಗಳ ಚರ್ಚೆಗೆ ತಿರುಗಿತು.
‘ಈಗಿನ ಕಾಲದ ಜನಕ್ಕೆ ಪಾಪದ ಭೀತಿಯೇ ಇಲ್ಲ; ಇಂದಿನ ಜನರೆಲ್ಲಾ ಭೋಗವಾದಿಗಳು. ಬಲಿಯ ಹೋತ ತೋರಣದ ಚಿಗುರನ್ನು ತಿನ್ನುವ ಹಾಗೆ, ಇಂದಿನ ಸುಖವೇ ಶಾಶ್ವತವೆಂದು ಭ್ರಮಿಸುತ್ತಾರೆ’ -ಎಂದು ಹಿಂದಿ ಪಂಡಿತರು ಟೀಕಿಸಿದಾಗ, ‘ಇಂದಿನ ಸುಖಕ್ಕಿಂತ ನಾಳಿನ ಸಾವಿಗೇ ಹೆಚ್ಚು ಬೆಲೆಯೋ? ಸಾಕು. ಬಾಳು ಸಾವಿಗೆ ಸಿದ್ಧತೆಯಲ್ಲ- ಸಾವು ಬರುತ್ತದೆ; ಬರಲಿ. ಅದಕ್ಕೆ ಮೊದಲು ಇಲ್ಲಿನದು ಏನಿದೆಯೋ ಅದನ್ನು ಅನುಭವಿಸಿಬಿಡೋಣ’ ಎಂದ ಮಾನಪ್ಪ.
‘ಅಲ್ಲ ಪಂಡಿತರೇ, ಸತ್ತಮೇಲೆ ಸಿಗೋದು ಅಪ್ಸರೆ, ಅಮೃತ. ಅದು ಸಿಗಬೇಕಾದರೆ ಸಾಯಬೇಕು. ಅದು, ಸಾಯುವ ಕಷ್ಟವೇ ಇಲ್ಲದೆ, ಇಲ್ಲೇ ಸಿಗುವುದಾದರೆ, ಅನುಭವಿಸಿಯೇ ಸಾಯುವುದರಲ್ಲೇನು ತಪ್ಪು? ಮಾತಿಗೆ ಮಸಲಾ ಹೇಳ್ತಿನಿ, ಹಿಂದಿನ ಕಾರಿನಲ್ಲಿ ಬರ್ತಿರೋ ಅಪ್ಸರೆ ಕಾರು ನಿಲ್ಲಿಸಿ, ತುಟಿ ಅರಳಿಸಿ, ‘ಎ ಕಿಸ್ ಪ್ಲೀಸ್’ ಎಂದಳೂನ್ನಿ. ಆಗ ನೀವು ಏನು ಮಾಡ್ತೀರಿ? ‘ನಾವಿಬ್ಬರೂ ಬೇಗ ಸತ್ತುಬಿಡೋಣ, ನೀನು ಅಪ್ಸರೆಯಾಗಿ ಬಾ: ನಾನು ಅಮರನಾಗಿ ಕಾದಿದ್ದೀನಿ’ ಅಂತಿರಾ? ಅಥವಾ ಬೇಗ ಆಕೆ ಕೇಳಿದ್ದನ್ನು ಕೊಟ್ಟು ‘ಸೇ ಇಟ್ ಎಗೇನ್ ಬ್ಲಸ್’ ಅನ್ತೀರಾ? ಈಗ ಹೇಳಿ’ ಎಂದ ಕಿಲಾಡಿ ಅರಸು.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಅವನು ಹೇಳಿದ್ದನ್ನು ಕೇಳಿ, ಬ್ರಹ್ಮಚಾರಿ ಪಂಡಿತರ ಮುಖ ಕೆಂಪಾಯಿತು. ‘ಪಾಪಿ! ಪಾಪಿ!’ ಎಂದು ತನಗೆ ತಾನೇ ಹೇಳಿಕೊಂಡರು. ಎಲ್ಲರೂ ನಕ್ಕರು.
ನಮ್ಮ ಮಾತಿನಲ್ಲಿ ನಾವು ತೊಡಗಿದ್ದಾಗ, ಸಾರಥಿ ವಿಶ್ವನಾಥ- ಮತ್ತೊಂದು ರೀತಿಯ ಆಟದಲ್ಲಿ ತೊಡಗಿದ್ದ ಹಿಂದೆ ಬರುತ್ತಿದ್ದ ಕಾರಿನವರೊಂದಿಗೆ.
ನಮ್ಮ ಕಾರು ಮುಂದಾಗಿ ಆ ಕಾರು ಹಿಂದಾದುದನ್ನು ಆಗಲೇ ಹೇಳಿದೆನಲ್ಲಾ, ಹಾಗೆ ಮುಂದಾಗಿ, ಹಿಂದಿದ್ದವರಿಗೆ ಧೂಳು ಕುಡಿಸುವಷ್ಟರಿಂದಲೇ ವಿಶ್ವನಾಥನಿಗೆ ತೃಪ್ತಿಯಾದಂತಿರಲಿಲ್ಲ. ಅದರೊಂದಿಗೆ ಹಿಂದಿನ ಕಾರಿನವರೊಂದಿಗೆ ಜೂಟಾಟ ಆರಂಭಿಸಿದ್ದ. ಕಾರನ್ನು ಅಷ್ಟು ದೂರ ವೇಗವಾಗಿ ನಡೆಸಿ, ನಿಧಾನ ಮಾಡುವುದು, ಅವರು ತಮ್ಮ ಕಾರಿನ ವೇಗವನ್ನು ಹೆಚ್ಚಿಸಿ ಹತ್ತಿರ ಬಂದಾಗ, ಧೂಳು ಹೊಗೆಯನ್ನು ಮತ್ತಷ್ಟು ಚೆಲ್ಲಿ ವೇಗವಾಗಿ ಕಾರನ್ನು ನುಗ್ಗಿಸುವುದು. ಈ ಆಟ ಒಂದೇ ಸಮನೆ ನಡೆದಿತ್ತು. ಅಣಿಕನ ಈ ಆಟ ಹಿಂದೆ ಬರುತ್ತಿದ್ದ ಕಾರಿನಾಕೆಯ ತಾಳ್ಮೆಯನ್ನು ಕೆಡಿಸುತ್ತಿತ್ತೆಂಬುದು ಆ ಕಾರಿನ ಹಾರನ್ನಿನ ನಿಲ್ಲದ ಮೊರೆತದಿಂದಲೇ ತಿಳಿಯುತ್ತಿತ್ತು. ಆದರೆ, ವಿಶ್ವನಾಥ, ಅದು ಕಿವಿಗೇ ಬೀಳದವನಂತೆ, ಹಿಂದೆ ಬರುತ್ತಿದ್ದವರಿಗೆ ‘ಸೈಡ್’ ಕೊಡದೆ, ತನ್ನ ಕಾರನ್ನು ಹೆಚ್ಚು ವೇಗದಲ್ಲೂ ಓಡಿಸದೆ ಆಟ ಆಡಿಸುತ್ತಿದ್ದ.
ಇಷ್ಟು ಹೊತ್ತಾದ ಮೇಲೆ ನನಗೆ ಆ ಆಟ ಸಾಕಾಯಿತೇನೋ ಅನಿಸಿ, ‘ಹೋಗಲಿ ಬಿಡು ವಿಶ್ವನಾಥ್, ಅವರಿಗೆ ‘ಸೈಡ್’ ಕೊಟ್ಟುಬಿಡು. ನಾವು ಹೇಗಿದ್ದರೂ ಇಲ್ಲೇ ಆಗುಂಬೆಗೇ ಹೋಗುವುದು. ಅವರು ಇನ್ನೂ ಎಷ್ಟು ದೂರ ಹೋಗಬೇಕೋ ಏನೋ, ಘಾಟೀ ದಾರಿಯಲ್ಲಿ ಕತ್ತಲೆಯ ಪ್ರಯಾಣ, ಏನು ಅವಸರವೋ…’ ಎಂದೆ.
‘ಅದೆಲ್ಲಾ ನಂಬಬೇಡ ವಿಶ್ವನಾಥ್; ಇವನು ಆಗ ಅವಳನ್ನು ನೋಡಲು ಸಾಧ್ಯವಾಗಲಿಲ್ಲ. ಈಗಲಾದರೂ Don’t give this dog a chance!’ -ಎಂದ ಕಿಡಿಗೇಡಿ ಅರಸು.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
‘ಅವಳನ್ನು ನೋಡಬೇಕೆ ಸಾರ್? ಅಷ್ಟು ಆಸೆಯೇ? ಹಾಗಿದ್ದರೆ ಹೇಳಿ; ಅವರ ಕಾರು ನಿಲ್ಲಿಸಿಯೇ ತೋರಿಸುತ್ತೇನೆ. ಬೇಕಾದರೆ ಮಾತೂ ಆಡಿ ಕಣ್ಣು ತುಂಬ ನೋಡಿ!’ -ಎಂದ ವಿಶ್ವನಾಥ ನಗುತ್ತ, ಉಳಿದವರೂ ಆ ನಗೆಯಲ್ಲಿ ಬೆರೆತರು. ನಾನು ನಕ್ಕೆ, ನಗದೆ ಬೇರೆ ದಾರಿಯೇ ಇರಲಿಲ್ಲ.
‘ಆ ಕಾರು ನಿಲ್ಲಿಸಿದರೆ ಉಪಯೋಗವಿಲ್ಲ ವಿಶ್ವನಾಥ್, ಅದಕ್ಕೆ ಡ್ಯಾಷ್ ಮಾಡಿಬಿಡಬೇಕು; ಅದರಲ್ಲಿರುವವರಿಗೆ… Then there is a fair chance’ -ಎಂದ ಅರಸು.
‘ಸಾಕು ಸಾಕು. ಯಾರ ಮನೆಯ ಮಗಳೊ. ಯಾವ ಪುಣ್ಯಾತ್ಮನ ಮಡದಿಯೋ, ಹೀಗೆ ಮಾತನಾಡಬಹುದೆ? ಅಂಥ ಯೋಚನೆ ಮಾಡುವುದೂ ಪಾಪ’ -ಎಂದರು ಹಿಂದಿ ಪಂಡಿತರು.
‘ಹೋಗಲಿ ಬಿಡೋ ಅರಸು, ಅವರನ್ನು ಯಾಕೆ ಗೋಳು ಹುಯ್ಕೋತೀಯ? ಆ ಬಳ್ಳಿ ನೋಡು ಎಷ್ಟು ಚೆನ್ನಾಗಿದೆ’ -ಎಂದೆ ನಾನು, ಆ ಮಾತನ್ನು ಬೇರೆ ಕಡೆ ತಿರುಗಿಸಲು.
ಆದರೆ ಮಾತನ್ನು ಆ ಹೆಣ್ಣಿನಿಂದ ಬದಲಿಸಲು ಇಚ್ಛೆಯಿದ್ದಂತಿರಲಿಲ್ಲ. ಹೀಗೆ ಚಿಲ್ಲರೆ ಮಾತು, ಧಾರಾಳವಾಗಿ, ನಗೆಯಲ್ಲಿ ಹಾದಿ ಸವೆಯಿತು. ಆಗುಂಬೆಯೂ ಬಂದಿತು.
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ರಸ್ತೆಯ ಬದಿಯಲ್ಲೇ ಇದ್ದ ಹೋಟೆಲಲ್ಲಿ ಕಾಫಿ ಕುಡಿಯಲು ನಾವು ಕಾರು ನಿಲ್ಲಿಸಿದಾಗ ಹಿಂದಿದ್ದ ಕಾರು ವೇಗವಾಗಿ ಮುಂದೆ ಸರಿಯಿತು.
ಕಾರಲ್ಲಿ ಕುಳಿತಿದ್ದಾಕೆಯನ್ನು ನಾನು ನೋಡಿದೆ. ನಿಜವಾಗಿ ಆಕೆ ಚೆಲುವೆ.
ಆಕೆಯೂ ನಮ್ಮ ಕಡೆ ನೋಡಿದಳು: ಜಗತ್ತಿನ ದ್ವೇಷವೆಲ್ಲಾ ಆ ಒಂದು ನೋಟದಲ್ಲಿ ಅಡಗಿತ್ತು.
ಆ ನೋಟವನ್ನು ನೋಡಿದ ನನಗೆ ಬೆಂಕಿ ಮುಟ್ಟಿದಂತಾಯಿತು.
‘ಆಕೆಯ ಮನಸ್ಸಿಗೆ ತುಂಬಾ ಬೇಜಾರಾದಂತಿದೆ ವಿಶ್ವನಾಥ್. ಅಷ್ಟು ಆಟ ನೋಡಿದ್ದನ್ನು ನೋಡಿದೆಯಾ? ತುಂಬಾ ರೇಗಿದ ಹಾಗಿತ್ತು’ ಎಂದೆ ನಾನು.
‘ಹೆಣ್ಣಿನ ಸೌಂದರ್ಯಕ್ಕೆ ಸಿಟ್ಟು ಮೆರಗು ಕೊಡುತ್ತದೆ ಸುಬ್ಬು, ಅಷ್ಟು ತಿಳಿಯದ ನೀನೆಂಥ ಕಾದಂಬರೀಕಾರ? ಮಂಕೇ, ಸಿಟ್ಟು ಪ್ರೇಮದ ಮತ್ತೊಂದು ಮುಖ. ಅಷ್ಟು ತಿಳಿಯದೆ?’ -ಎಂದ ಅರಸು ನಗುತ್ತ.
ನಾನು ಆ ಮಾತನ್ನು ಮುಂದೆ ಬೆಳೆಸಲಿಲ್ಲ. ಎಲ್ಲರೂ ಮುಖ ತೊಳೆದು, ಕಾಫಿ ಕುಡಿದು, ಸೂರ್ಯಾಸ್ತವನ್ನು ನೋಡಲು, ಅದಕ್ಕಾಗಿ ನಿರ್ಮಿಸಿದ ವೇದಿಕೆಯ ಬಳಿಗೆ ಕಾರಿನಲ್ಲೇ ಹೋದೆವು.
ಆಗುಂಬೆಯ ದಾರಿಯೇ ನಿಸರ್ಗ ಸೌಂದರ್ಯದ ಚರಮ ಸೀಮೆ ಎಂದುಕೊಂಡಿದ್ದ ನನಗೆ, ಆಗುಂಬೆ ಘಟ್ಟದ ಹಾದಿಯ ರಮಣೀಯತೆಯನ್ನು ಕಂಡಾಗ, ನೋಡುವ ಕಣ್ಣು, ವರ್ಣಿಸಿ ಸವೆಯದಿರುವ ಬುದ್ದಿ- ಎರಡೂ ಸೋತು ಹೋಯಿತು. ಘಟ್ಟದ ಬೆನ್ನಿನ ಮೇಲೆ ನಿರ್ಮಿಸಿದ ವೇದಿಕೆಯ ಮೇಲೆ ನಿಂತು, ಅಲ್ಲಿಂದ ಕಡಲಿನ ತುದಿಯವರೆಗೂ ಹಾಸಿದ ವನದ ಶಯ್ಯೆಯನ್ನು ನೋಡಿ ಮೂಕನಾದೆ. ದೂರ, ಬಹು ದೂರದಲ್ಲಿ ಮಿಂಚಿನ ಅಲಗಿನಂತೆ ಹೊಳೆವ ಕಡಲ ತೆರೆ, ಕಣ್ಣು ಹೊಡೆಯುತ್ತಿತ್ತು. ಈ ಭವ್ಯ ದೃಶ್ಯವೇ ಎದೆಯನ್ನು ತುಂಬಿ ಬಾಳು ಧನ್ಯವಾಯಿತು ಎನಿಸಿದ ಹೊತ್ತಿನಲ್ಲಿ ಸುತ್ತಲ ಮೇಘಗಳಿಗೆ ಬಂಗಾರದ ಓಕುಳಿಯನ್ನು ತೂರಿ ಬಗೆಬಗೆಯ ಆಕಾರ ತಳೆದು ಕಡಲಿನಲ್ಲಿ ಕಣ್ಮರೆಯಾದ ಸೂರ್ಯಾಸ್ತಮಾನದ ರಮಣೀಯತೆ ದೈವೀಪವಾಡದಂತೆಯೇ ಕಾಣಿಸಿತು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಎಲ್ಲರೂ ತಮ್ಮನ್ನೂ ತಮ್ಮ ಸುತ್ತಮುತ್ತಲ ಲೋಕವನ್ನೂ ಮರೆತು ನೋಡಿದೆವು.
‘ಇದನ್ನು ನೋಡಿದ್ದಾಯಿತಲ್ಲ. ಹಾಗೇ ಸೋಮೇಶ್ವರದವರೆಗೂ ಹೋಗಿ ಬಂದುಬಿಡೋಣ’ -ಎಂದ ವಿಶ್ವನಾಥ.
‘ಅಲ್ಲೇನಿದೆ?’ -ಎಂದು ಕೇಳಿದೆ ನಾನು.
‘ಫಾಟಿ ಏರಿಗಿಂತ, ಇಳುಕಿನ ಸೊಗಸು ಹೆಚ್ಚಿನದು. ಅದರಲ್ಲೂ ಆಗುಂಬೆ ಘಾಟಿಯದು ಮತ್ತೂ ಸೊಗಸು. ಏಳೇ ಮೈಲು’ -ಎಂದ.
ಎಲ್ಲರೂ ಅದಕ್ಕೆ ಒಪ್ಪಿದರು. ವೇದಿಕೆಯಿಂದ ರಸ್ತೆಗೆ ಇಳಿದು ಕಾರಿನಲ್ಲಿ ಕುಳಿತು ಹೊರಟೆವು.
ಇಳುಕಿನ ಸಾಲು ತಿರುವುಗಳ ದಾರಿಯಲ್ಲಿ ಕಾರು ಬುಗುರಿಯಂತೆ ಸುತ್ತಿತು. ಬಂದ ದಾರಿಯದು ಚೇತೋಹಾರಿಯಾದ ಸೌಂದರ್ಯವಾದರೆ, ಇಳುಕಲಿನದು ಎದೆಗೆಡಿಸುವ ರುದ್ರ ರಮಣೀಯತೆ.
‘ಸಾವು-ಬದುಕಿನ ಅಂತರ ಎಷ್ಟು ಎಂದು ಕಾಣಲು ಇಲ್ಲಿಗೆ ಬರಬೇಕು’ -ಎಂದ ಅರಸು, ಸಾವಿರಾರು ಅಡಿಗಳ ಆಳದ ಕಂದಕದ ಅಂಚಿನಲ್ಲೇ ಕಾರು ಸುತ್ತಿದಾಗ.
ಸಾವು-ಬದುಕು, ಕಣ್ಣೀರು-ನಗೆ, ಸೌಂದರ್ಯ-ವಿಕಾರ ಇಷ್ಟೇ ಅಂತರ- ಎಷ್ಟು ಹತ್ತಿರ.
ಏಕೋ ನನಗೆ ಆ ಮಾತು ಕೇಳಿ ಎದೆ ನಡುಗಿತು.
‘ಅಗೋ ಸೋಮೇಶ್ವರ’ -ಎಂದ ವಿಶ್ವನಾಥ.
ಅವನು ಬೆರಳು ತೋರಿಸಿದತ್ತ ನೋಡಿದೆ. ನನಗೆ ಕಂಡದ್ದು ಸೋಮೇಶ್ವರದಲ್ಲಿ ದಾರಿಯ ಬದಿಯಲ್ಲಿ ನೆರೆದಿದ್ದ ಜನರ ಗುಂಪು; ಅಸ್ಪಷ್ಟವಾಗಿ ಕೇಳುತ್ತಿದ್ದ ಜನರ ಕೋಲಾಹಲದ ಧ್ವನಿ.
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
‘ಏನೋ ಆಕ್ಸಿಡೆಂಟ್ ಆಗಿರಬೇಕು’ ಎಂದ ನಾನು ನೋಡಿದತ್ತ ನೋಡಿದ ವಿಶ್ವನಾಥ, ಕಾರಿನ ವೇಗವನ್ನು ಹೆಚ್ಚು ಮಾಡಿದ. ಬಹು ಬೇಗ ನಮ್ಮ ಕಾರು ಗುಂಪನ್ನು ಸಮೀಪಿಸಿತು.
ಗುಂಪಿನ ಬಳಿಗೆ ಬಂದ ಕೂಡಲೇ, ಎಲ್ಲರೂ ಕಾರಿನಿಂದ ಧುಮುಕಿ ಏನು ಅನಾಹುತವೋ ಎಂದು ನೋಡಿದೆವು.
ನೋಡಿದೆ ತಲೆ ಸುತ್ತು ಬರುವಂತಾಯಿತು.
ಘಾಟಿನಿಂದ ವೇಗವಾಗಿ ಇಳಿದು ಬಂದ ಕಾರೊಂದು ರಸ್ತೆಯ ಪಕ್ಕದ ಮೈಲುಗಲ್ಲಿಗೆ ಢಿಕ್ಕಿ ಹೊಡೆದು, ಚೂರು ಚೂರಾಗಿತ್ತು. ಕಾರು ಢಿಕ್ಕಿ ಹೊಡೆದ ವೇಗಕ್ಕೆ ಒಳಗಿದ್ದವರು ಮುಖ ಮೈ ಮುರಿದು ನೆತ್ತರು ಕಾರುತ್ತ ಅಷ್ಟು ದೂರಕ್ಕೆ ಹಾರಿ ಬಿದ್ದಿದ್ದರು.
ಎರಡು ಹೆಣ!
‘ಅದೇ ಕಾರು- ಅದೇ ಜನ’ -ಎಂದ ವಿಶ್ವನಾಥ.
ನಿಜ- ಅದೇ ಕಾರು. ನಾವು ಹಿಂದೆ ಹಾಕಿ, ಆಟವಾಡಿಸಿದ ಕಾರು. ಆ ಕಾರಿನ ಒಳಗಿದ್ದವರು- ಡ್ರೈವರು, ಆ ಚೆಲುವೆ- ಬರೀ ನೆತ್ತರು ಕಾರುವ ಭಯಂಕರ ಶವ, ನೋಡುವವರ ಮುಖದಲ್ಲೂ ನಗೆ ಸತ್ತು ಅದರ ಹೆಣ ತೇಲುತ್ತಿತ್ತು. ಆಕೆಯನ್ನು ನೋಡಿ ನಕ್ಕ ನಾವು. ಸಾವು ನಮ್ಮನ್ನು ನೋಡಿ ನಗುತ್ತಿತ್ತು.
‘ಎಂಥ ಸಾವು’ ಎಂದ ಮಾನಪ್ಪ, ಚಳಿಗಾಳಿಗೆ ಸಿಕ್ಕಿದಂತೆ ಮೈ ನಡುಗಿಸುತ್ತ.
‘ಸಾವಲ್ಲ, ಕೊಲೆ, ನಾನು ಆಕೆಯನ್ನು ದಾರಿಯಲ್ಲಿ ರೇಗಿಸಿದ್ದೇ ಆಕೆ ಹೆಚ್ಚು ವೇಗದಲ್ಲಿ ದಾರಿ ನೋಡದೆ ಕಾರು ಬಿಡಲು ಕಾರಣವಾಗಿರಬೇಕು. ಹೀಗಾಗುತ್ತೆಂದು ತಿಳಿದಿದ್ದರೆ ರೇಗಿಸುತ್ತಿರಲಿಲ್ಲ’ -ಎಂದ ವಿಶ್ವನಾಥ ಜಡವಾದ ಧ್ವನಿಯಲ್ಲಿ.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಆ ಮಾತು ಕೇಳಿ ನನ್ನ ಮೈಗೂ ಕುಳಿರು ಹಿಡಿದಂತಾಯಿತು- ಹೀಗಾಗುತ್ತದೆ ಎಂದು ಯಾರಿಗೆ ತಿಳಿದಿತ್ತು?
‘ಮುತ್ತು ಕೊಡುವ ತುಟಿ ಎಂದಿರಲ್ಲಾ ಸಾರ್, ಈಗ ಮುತ್ತು ಕೊಡಿ! ಅಂಥಾ ಪಾಪದ ಯೋಚನೆ ಬೇಡಾಂತ ಆಗಲೇ ಹೇಳಿದೆ!’ -ಎಂದರು ಪಂಡಿತರು, ಕಹಿಯಾದ ಧ್ವನಿಯಲ್ಲಿ ಅರಸುವಿನತ್ತ ನೋಡಿ.
‘ಪಾಪಿ… ಪಾಪಿ… ನಾನಲ್ಲಾ ಪಾಪಿ.’
‘ಮತ್ತೆ ಯಾರು?’ -ರೇಗಿಸುವಂತೆ ಕೇಳಿದರು ಪಂಡಿತರು. ‘ನಾನಲ್ಲ- ದೇವರು. ಈ ಮೋಹಕ ಸೌಂದರ್ಯವನ್ನು ಸೃಷ್ಟಿಸಿ, ಅದು ಯಾರ ಆಸ್ವಾದನೆಗೂ ಸಿಗದಂತೆ ಸಾವಿನ ತೆರೆ ಎಳೆದನಲ್ಲಾ, ಆ ನಿಮ್ಮ ದೇವರು- ಅವನು ಪಾಪಿ; ಸೌಂದಯ್ಯದ ಅಗರವಾದ ಆಗುಂಬೆಯ ಘಾಟಿಯಲ್ಲಿ, ಈ ಸೌಂದರ್ಯಕ್ಕೆ ಸಾವು ತಂದ ಆ ದೇವರು ಪಾಪಿಯೋ, ಅವನು ಸೃಷ್ಟಿಸಿದ ಸೌಂದರ್ಯಕ್ಕೆ ಮುದ್ರಿತ ಮೆಚ್ಚಿಗೆ ಕೊಡಬಯಸಿದ ನಾನು ಪಾಪಿಯೋ, ಹೇಳಿ’ -ಎಂದು ಸವಾಲು ಹಾಕುವಂತೆ, ಬಿಗಿದು ಬಿರುಸಾದ, ಕಹಿಯಾದ ಕರ್ಕಶ ಧ್ವನಿಯಲ್ಲಿ ಕೇಳಿದ ಅರಸು.
ಕತ್ತಲು ಕವಿದ ಘಾಟಿನ ಬೆಟ್ಟದ ಸಾಲು ಆ ಪ್ರಶ್ನೆಯನ್ನು ಪ್ರತಿಧ್ವನಿಸಿತು.
ಸುತ್ತು ನಿಸರ್ಗವನ್ನು ನೋಡಿದೆ. ಎಲ್ಲರ ಮೊಗದ ನಗೆಯ ಮೇಲೂ ಸಾವು ಕತ್ತಲೆಯ ತೆರೆ ಎಳೆದಿತ್ತು.
ಒಂದು ಘಳಿಗೆಯ ಹಿಂದೆ ಸೌಂದರ್ಯಕರ ಔತಣವನ್ನಿತ್ತ ಆಗುಂಬೆಯ ಘಾಟಿ, ಕಾಳ ಕರಾಳ ದೈತ್ಯದಂತೆ ಮೈ ಜಾಚಿತ್ತು.
ಅದೇ ಘಾಟ್- ಅದೇ ಕಾಡು- ಅದೇ ಜನ- ಆಗ ಕಂಡುದು ಇದೆ; ಈಗಲೂ ಅದೇ ಮುಖ. ಆದರೆ ಎಷ್ಟು ಅಂತರ?
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)
