ಆನ್‌ಲೈನ್‌ನಲ್ಲಿನ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ನಟಿ ಪ್ರಣೀತಾ ಸುಭಾಷ್ ಸೇರಿದಂತೆ 29 ಮಂದಿ ತೆಲಂಗಾಣದ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ. ಇವರೆಲ್ಲರ ಹಣ ವರ್ಗಾವಣೆ ಕುರಿತು ತನಿಖೆ ಆರಂಭಿಸಿದೆ ಎಂಧು ಪಿಐಟಿ ವರದಿ ಮಾಡಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸ್ಥಳೀಯ ಪಿಲೀಸರು ದಾಖಲಿಸಿರುವ ಸುಮಾರು ಐದು ಎಫ್‌ಐಆರ್‌ಗಳನ್ನು ಆಧರಿಸಿ ಇಡಿ ‘ಹಣ ವರ್ಗಾವಣೆ ತಡೆ ಕಾಯ್ದೆ’ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿದೆ. ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗಳಲ್ಲಿ, ಅನಧಿಕೃತ ಜೂಜಾಟಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಆದಾಯ ಗಳಿಸಿದ ಆರೋಪ ಹೊತ್ತಿರುವ ಬೆಟ್ಟಿಂಗ್ ಆ್ಯಪ್‌ಗಳ ಜಾಲವನ್ನೂ ಉಲ್ಲೇಖಿಸಿದೆ ಎಂದು ವರದಿ ತಿಳಿಸಿದೆ.
ಇಡಿ ದಾಖಲಿಸಿರುವ ಪ್ರಕರಣಗಳಲ್ಲಿ ನಟಿ ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ ಹಾಗೂ ಟಿವಿ ನಿರೂಪಕಿ ಶ್ರೀಮುಖಿ ಸೇರಿದಂತೆ ಒಟ್ಟು 29 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ.
ಈ ಸೆಲೆಬ್ರಿಟಿಗಳು ಜಂಗ್ಲಿ ರಮ್ಮಿ, ಜೀಟ್‌ವಿನ್ ಹಾಗೂ ಲೋಟಸ್365 ರೀತಿಯ ಬೆಟ್ಟಿಂಗ್ ಆ್ಯಪ್‌ಗಳು ಕಾನೂನಿನ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿವೆಯೇ ಎಂಬುದನ್ನು ಪರಿಶೀಲಿಸದೆ, ಹಣ ಪಡೆದು ಅವುಗಳ ಪ್ರಚಾರ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿವರಿಸಲಾಗಿದೆ.
ಈ ಲೇಖನ ಓದಿದ್ದೀರಾ?:ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಬಳಸಿಕೊಂಡಿದ್ದೆಷ್ಟು? ಇಲ್ಲಿದೆ ನೋಡಿ…
ಈ ಆ್ಯಪ್‌ಗಳ ನಿಜವಾದ ಸ್ವರೂಪಗಳ ಬಗ್ಗೆ ತಮಗೆ ತಿಳಿದಿಲ್ಲ ಎಂದು ಪ್ರಚಾರ ಮಾಡಿದವರಲ್ಲಿ ಕೆಲವರು ಹೇಳಿಕೊಂಡಿದ್ದಾರೆ. ಆದರೂ, ಆ್ಯಪ್ ಕಾರ್ಯಾಚರಣೆಯಲ್ಲಿ ಅವರ ಒಳಗೊಳ್ಳುವಿಕೆಯ ವ್ಯಾಪ್ತಿಯನ್ನು ನಿರ್ಧರಿಸಲು ಮುಂದಿನ ದಿನಗಳಲ್ಲಿ ಎಲ್ಲರ ಹೇಳಿಕೆಗಳನ್ನು ಇಡಿ ದಾಖಲಿಸುವ ಸಾಧ್ಯತೆ ಇದೆ.
ಇಡಿ ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ಹೆಚ್ಚುವರಿ ದೂರುಗಳು ಮತ್ತು FIRಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಅಪರಾಧದ ಆದಾಯವನ್ನು ಪತ್ತೆಹಚ್ಚುವುದು ಮತ್ತು ಪ್ರಚಾರದ ಒಪ್ಪಂದಗಳ ಮೂಲಕ ಎಷ್ಟು ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದನ್ನು ಶೋಧಿಸುವುದರ ಮೇಲೆ ತನಿಖೆಯು ಕೇಂದ್ರೀಕರಿಸುತ್ತದೆ ಎಂದು ವರದಿಯಾಗಿದೆ.