ದೇವನಹಳ್ಳಿ ಭೂ ಸ್ವಾಧೀನ | ಎಕರೆಗೆ ₹3 ಕೋಟಿ ಕೊಟ್ಟರೆ ಜಮೀನು ಕೊಡಲು ಸಿದ್ಧ: ಭೂಸ್ವಾಧೀನ ಬೆಂಬಲ ಸಮಿತಿ

Date:

Advertisements

ಒಂದು ಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 1,200 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದ್ದರೆ, ಇತ್ತ ದಿಢೀರ್‌ ಆಗಿ ಒಂದಿಷ್ಟು ರೈತರು ತಮ್ಮ ಜಮೀನನ್ನು ಕೆಲವು ಷರತ್ತುಗಳೊಂದಿಗೆ ಕೆಐಎಡಿಬಿಗೆ ಕೊಡಲು ಸಿದ್ಧ ಎಂದು ಮುಂದೆ ಬಂದಿದ್ದಾರೆ.

ಗೋಕೆರೆ ಬಚ್ಚೇನಹಳ್ಳಿ, ಚನ್ನರಾಯಪಟ್ಟಣ ಹಾಗೂ ಹ್ಯಾಡಾಳ ಗ್ರಾಮದ 15ಕ್ಕಿಂತ ಹೆಚ್ಚು ರೈತರು ಗುರುವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಐಎಡಿಬಿಗೆ ಭೂಮಿ ಕೊಡುವ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದರು.

ಕೆಐಎಡಿಬಿ ಭೂಸ್ವಾಧೀನ ಬೆಂಬಲ ಸಮಿತಿ ಪರವಾಗಿ ಹ್ಯಾಡಾಳ ಗ್ರಾಮದ ರೈತ ಚನ್ನಕೇಶವ ಮಾತನಾಡಿ, “2024ರವರೆಗೂ ನಾನು ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಕಾರಣ ಉಳಿದರೆ ಭೂಮಿ ಉಳಿಯುತ್ತದೆ ಎಂದು. ಆದರೆ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಹೋರಾಟದೊಳಗೆ ನೈಜ ಕಾಳಜಿ ಮರೆಯಾಗಿದೆ. ಮುಂದಿನ 25 ವರ್ಷ ನಮ್ಮ ಭಾಗದ ಜಮೀನು ಮಾರುವ ಹಾಗೇ ಇಲ್ಲ ಎಂದು ಸರ್ಕಾರ ತೀರ್ಮಾನಿಸಿದೆ ಎನ್ನುವ ಮಾಹಿತಿ ಇದೆ. ಹೀಗಾದರೆ ಹೇಗೆ? ಕಷ್ಟ ಕಾಲದಲ್ಲಿ ನಮ್ಮನ್ನು ಕೈಹಿಡಿಯುವುದು ಸರ್ಕಾರಗಳಲ್ಲ. ನಮ್ಮ ಜಮೀನೇ ನಮ್ಮನ್ನು ಕೈ ಹಿಡಿಯುತ್ತದೆ. ಹೀಗಾಗಿ ನಮ್ಮ ಜಮೀನಿನ ಸ್ವಲ್ಪ ಭಾಗ ಕೊಡಲು ನಾವು ಸಿದ್ಧ” ಎಂದರು.

Advertisements

“ನಾನು ನನ್ನ ಪಹಣಿ ಸಮೇತ ಇಲ್ಲಿ ಬಂದಿದ್ದೇನೆ. ನನಗೆ ಕಷ್ಟವಿದೆ. ಸ್ವಲ್ಪ ಜಮೀನು ಉಳಿಸಿಕೊಂಡು, ಸ್ವಲ್ಪ ಜಮೀನು ಮಾರಬೇಕು ಎಂದಿರುವೆ. ನನ್ನ ಜಮೀನು ಮಾರಾಟ ಮಾಡಿದ್ರೆ ಉಳಿದವರಿಗೇನು ತಕರಾರು? ನಾವು ಇಲ್ಲಿ ಬಂದಿರುವ ರೈತರು ಯಾರೂ ಫಲವತ್ತಾದ ಭೂಮಿಯನ್ನು ಕೊಡಲು ಮುಂದೆ ಬರುತ್ತಿಲ್ಲ. ಮಳೆಯಾಶ್ರಿತವಾದ ಭೂಮಿಯನ್ನು ಕೊಡಲು ನಾವು ಸಿದ್ಧ. ಅದು ಕೂಡ ಕೆಲವು ಷರತ್ತುಗಳೊಂದಿಗೆ” ಎಂದು ಹೇಳಿದರು.

“ನಾವು ಸಂಪೂರ್ಣ ಅಭಿವೃದ್ಧಿಯ ವಿರೋಧಿಗಳಲ್ಲ. ನಮ್ಮ ಬೇಡಿಕೆ ಸ್ಪಷ್ಟವಿದೆ. ಎಕರೆಗೆ 3 ಕೋಟಿ ರೂ. ಬೆಲೆ ಕೊಡಬೇಕು. ಜಮೀನು ಕಳೆದುಕೊಂಡ ರೈತರ ಕುಟುಂಬಗಳಿಗೆ ನೌಕರಿ ಕೊಡಬೇಕು. ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ಉಳಿದಂತೆ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ನಮ್ಮ ತಕರಾರು ಇಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆದಿವಾಸಿಗಳನ್ನು ಆದಿವಾಸಿಗಳೇ ಕೊಂದರು ಹೌದು… ಆದರೆ ಯಾಕಾಗಿ ಕೊಂದರು?

“ಸರ್ಕಾರ ಜು.15ಕ್ಕೆ ತನ್ನ ನಿಲುವು ಹೇಳುವ ಸಮಯದಲ್ಲೇ ನೀವು ಈಗ ಬಂದು ಜಮೀನು ಕೊಡಲು ಮುಂದೆ ಬಂದಿದ್ದು ನೋಡಿದರೆ ನಿಮ್ಮ ಹಿಂದೆ ಸಚಿವರೇ ಇರಬೇಕು ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ನಮ್ಮ ಹಿಂದೆ ಯಾರೂ ಇಲ್ಲ. ಏನೂ ಬೆಳೆಯಲಾರದ ಭೂಮಿಯನ್ನು ಇಟ್ಟುಕೊಂಡು ನಾವೇನು ಮಾಡುವುದು? ಸ್ಥಳಕ್ಕೆ ಬಂದು ಬೇಕಾದರೆ ಪತ್ರಕರ್ತರು ಪರಿಶೀಲಿಸಲಿ. ನಾವು ಕೊಡಬೇಕು ಎಂದಿರುವ ಜಮೀನಿನಲ್ಲಿ ವಾರ್ಷಿಕವಾಗಿ ಎಷ್ಟು ಇಳುವರಿ ಬರುತ್ತದೆ ಎಂದು ನೀವೇ ನೋಡಿ” ಎಂದು ತಿಳಿಸಿದರು.

ಲಕ್ಷ್ಮೀನಾರಾಯಣ ಮಾತನಾಡಿ, “ಭೂಮಿ ಕೊಡುವುದಿಲ್ಲ ಎಂದು ಪ್ರತಿಭಟಿಸುತ್ತಿರುವ ರೈತರು ನಿಜವಾದ ರೈತರೇ ಅಲ್ಲ. ರೈತರಲ್ಲದವರೇ ಟೆಂಟ್‌ ಹಾಕಿ ಪ್ರತಿಭಟಿಸುತ್ತಿದ್ದಾರೆ. ಬಹಳಷ್ಟು ರೈತರಿಗೆ ತಮ್ಮ ಜಮೀನು ಕೊಡಬೇಕು ಎನ್ನುವ ಮನಸ್ಸಿದೆ” ಎಂದರು.

ಲಕ್ಷ್ಮೀನಾರಾಯಣ ಮಾತಿಗೆ ತಡೆಯೊಡ್ಡಿದ ಪತ್ರಕರ್ತರು, “ನೀವು ರೈತರನ್ನು ಹೀಗೆ ಅವಮಾನಿಸಬೇಡಿ. ಹಾಗಾದ್ರೆ ನೀವು ಸಹ ರೈತರಲ್ಲ ಎನ್ನಬೇಕಾಗುತ್ತದೆ. ನಿಮ್ಮ ಹಕ್ಕು ನೀವು ಕೇಳಿ. ಅವರ ಹಕ್ಕು ಅವರು ಕೇಳುತ್ತಾರೆ” ಎಂದು ತರಾಟಗೆ ತೆಗೆದುಕೊಂಡರು. ಮುಖಭಂಗವಾಗಿ ಲಕ್ಷ್ಮೀನಾರಾಯಣ ತಮ್ಮ ಮಾತನ್ನು ಅರ್ಧಕ್ಕೆ ನಿಲ್ಲಿಸಿದರು.

ಕೆಐಎಡಿಬಿ ಭೂಸ್ವಾಧೀನ ಬೆಂಬಲ ಸಮಿತಿಯಲ್ಲಿದ್ದ ಶ್ರೀನಿವಾಸ ಮಾತನಾಡಿ, “ನಾವು ಸುಮಾರು 500 ರೈತರು ಭೂಮಿ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮ್ಮ ಮನವಿ ಸಲ್ಲಿಸುತ್ತೇವೆ. ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಪಹಣಿ ಸಮೇತ ನಾವು ಹೋರಾಟಕ್ಕೆ ಬರುತ್ತೇವೆ. ನಕಲಿ ಹೋರಾಟ ನಮಗೆ ಬೇಕಿಲ್ಲ. ಭೂಮಿ ಕೊಡಬೇಕು ಎನ್ನುವ ರೈತರಷ್ಟೇ ಪ್ರತಿಭಟಿಸುತ್ತೇವೆ. ನಮ್ಮನ್ನು ಈಗ ಪ್ರಶ್ನಿಸುವ ಪತ್ರಕರ್ತರು ಸಹ ಶನಿವಾರ ಬನ್ನಿ ಎಲ್ಲ ದಾಖಲೆ ತೋರಿಸುತ್ತೇವೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

'ಸಿ' ಮತ್ತು 'ಡಿ' ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ...

ಧರ್ಮಸ್ಥಳ ಸುತ್ತ ವ್ಯವಸ್ಥಿತ ಷಡ್ಯಂತ್ರ, ಹಿಂದಿನ ಶಕ್ತಿಗಳನ್ನು ಎಸ್‌ಐಟಿ ಪತ್ತೆ ಮಾಡಲಿ: ಸುನಿಲ್‍ ಕುಮಾರ್

ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು...

ನಾನು ದಲಿತರನ್ನು ವಿರೋಧಿಸಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ...

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತ, ಬಿಜೆಪಿ ಮುಖಂಡರ ನಡೆಗೆ ಖಂಡನೆ: ಸಿಪಿಐಎಂ

ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್...

Download Eedina App Android / iOS

X