ಖಾಸಗಿ ವಿಡಿಯೋ ವೈರಲ್ ಮಾಡಿದ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಯೊಬ್ಬರು ಭಾವನಾತ್ಮಕತೆಗೆ ಒಳಗಾಗಿ, ಗದ್ಗರಿತರಾದ ಸನ್ನಿವೇಶ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದಿದೆ. ಮಹಿಳಾ ವಕೀಲೆಯೊಬ್ಬರ ಖಾಸಗಿ ವಿಡಿಯೋ ಮತ್ತು ಚಿತ್ರಗಳನ್ನು ಆಕೆಯ ಸ್ನೇಹಿತ ಕದ್ದು ಚಿತ್ರೀಕರಿಸಿ, ಅವುಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದ. ಅವುಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.
ವಿಚಾರಣೆ ವೇಳೆ ಭಾವನಾತ್ಮಕವಾಗಿ ಮಾತನಾಡಿದ ನ್ಯಾಯಾಧೀಶ ಎನ್ ಆನಂದ ವೆಂಕಟೇಶ, “ಈ ವಕೀಲೆ ಮಾನಸಿಕವಾಗಿ ನೊಂದಿದ್ದಾರೆ. ಆಕೆ ನನ್ನ ಮಗಳಾಗಿದ್ದರೆ ಏನಾಗುತ್ತಿತ್ತು ಎಂಬುದಾಗಿ ನಾನು ಯೋಚಿಸುತ್ತಿದ್ದೆ. ಆಕೆಯನ್ನು ನನ್ನ ಚೇಂಬರ್‌ನಲ್ಲಿ ಭೇಟಿಯಾಗಿ ಬೆಂಬಲದ ಮಾತುಗಳನ್ನಾಡಬೇಕೆಂದು ನಾನು ಉದ್ದೇಶಿಸಿದ್ದೇನೆ. ಮಾತ್ರವಲ್ಲ, ನಾನೂ ಕೂಡ ಸ್ವಯಂ ಖಿನ್ನತೆಗೊಳಗಾಗದಂತೆ ಸಿದ್ದನಾಗಬೇಕಿದೆ” ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಸಂತ್ರಸ್ತ ವಕೀಲೆಯ ಮಾಜಿ ಪ್ರೇಮಿ ಆಕೆಯ ಸಮ್ಮತಿ ಇಲ್ಲದೆ, ಆಕೆಗೆ ಗೊತ್ತಾಗದಂತೆ ವಕೀಲೆಯ ಖಾಸಗಿ ವಿಡಿಯೋ ಮತ್ತು ಚಿತ್ರಗಳನ್ನು ಚಿತ್ರೀಕರಿಸಿ ಅಶ್ಲೀಲ ವೆಬ್‌ಸೈಟ್‌ಗಳು, ಮೆಸೇಜಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದನೆಂದು ಆರೋಪಿಸಲಾಗಿದೆ. ತನ್ನ ಖಾಸಗಿ ವಿಡಿಯೋ-ಚಿತ್ರಗಳನ್ನು ಅಂತರ್ಜಾಲದಿಂದ ತೆಗೆದುಹಾಕುವಂತೆ ಕೋರಿ ಸಂತ್ರಸ್ತ ವಕೀಲೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಧೀಶ ಆನಂದ ವೆಂಕಟೇಶ, “48 ಗಂಟೆಗಳಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪತ್ತೆ ಹಚ್ಚಬೇಕು. ಅವುಗಳನ್ನು ನಿರ್ಬಂಧಿಸಿ, ತೆಗೆದುಹಾಕಬೇಕು. ಈ ಬಗ್ಗೆ ಜುಲೈ 14ರೊಳಗೆ ಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ನಿರ್ದೇಶನ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಬಳಸಿಕೊಂಡಿದ್ದೆಷ್ಟು? ಇಲ್ಲಿದೆ ನೋಡಿ…
ರಾಜ್ಯ ಪೋಲಿಸ್ ಮಹಾನಿರ್ದೇಶಕರನ್ನು (ಡಿಜಿಪಿ) ಪ್ರಕರಣದ ಪ್ರತಿವಾದಿಯನ್ನಾಗಿ ಸ್ವಯಂಪ್ರೇರಿತವಾಗಿ ಸೇರಿಸಿರುವ ನ್ಯಾಯಾಲಯವು, “ಮಹಿಳೆಯರನ್ನು ಇಂತಹ ಆಘಾತಗಳಿಂದ ರಕ್ಷಿಸಲು ವ್ಯವಸ್ಥಿತ ಸುಧಾರಣೆಗಳನ್ನು ತರಬೇಕು” ಎಂದು ಸೂಚಿಸಿದ್ದಾರೆ.
“ಅರ್ಜಿದಾರರ ಮನೋಬಲವು ಅವರ ಕಾನೂನು ತರಬೇತಿ ಮತ್ತು ಬೆಂಬಲ ವ್ಯವಸ್ಥೆಯಿಂದ ರೂಪುಗೊಂಡಿದೆ. ಅದೃಷ್ಟವಶಾತ್ ಅವರು ಈ ವೃತ್ತಿಯಲ್ಲಿದ್ದಾರೆ. ಅವರಿಗೆ ನಮ್ಮೆಲ್ಲರ ನೆರವು-ಬೆಂಬಲವಿದೆ. ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಮೂಲಭೂತ ಹಕ್ಕನ್ನು ರಕ್ಷಿಸುವುದು ಸರ್ಕಾರ ಮತ್ತು ನ್ಯಾಯಾಲಯಗಳ ಸಾಂವಿಧಾನಿಕ ಕರ್ತವ್ಯ” ಎಂದು ಹೇಳಿದ್ದಾರೆ.