ಅಲ್ಲಿನ ಸಾಧುಗಳ ನಡುವೆ ಸಣ್ಣಗೆ, ತೆಳ್ಳಗಿನ, ಬಿಳಿ ಬಣ್ಣದ ಅರವತ್ತರ ಸುಮಾರಿನ ಕಾವಿ ಸೀರೆ ಉಟ್ಟು ವಿಭೂತಿ, ಜಪಮಾಲೆ ಧರಿಸಿದ ಮತ್ತೊಂದು ಅಜ್ಜಿ ಕುರ್ಚಿಯ ಮೇಲೆ ಕುಳಿತಿದ್ದರು. “ನೋಡೊ ನೋಡೋ ಅವಳೇ ನನಗೆ ಮೋಸ ಮಾಡಿದ್ದು, ಪುಟ್ಟೀರಮ್ಮ ಅಂತಾ” ಅಂದಳು. ಅವರನ್ನು ಮತ್ತೆ ನೋಡಿದೆ, ನಿರಾಳವಾದ ಪ್ರಶಾಂತ ಮುಖ, ಅವರ ಮಾತು, ವಿನಯ ನೋಡಿ ಅವರೊಬ್ಬ ನಿಜಕ್ಕೂ ಸಾಧುವಿರಬೇಕು ಎನಿಸಿತು. ಮತ್ತೆ ಅವರ್ಯಾಕೆ ಈರಮ್ಮಜ್ಜಿಯನ್ನು ಆಶ್ರಮದಿಂದ ಹೊರ ಹಾಕಿರಬಹುದು ಎನ್ನುವ ಪ್ರಶ್ನೆಗಳು ಮೂಡತೊಡಗಿದವು.
ಆ ನಡುರಾತ್ರಿಯಲ್ಲಿ ಹೊತ್ತು ಹೊರೆದು, ನನ್ನ ಸಾಕಿ ಸಲಹಿ ಸವೆದು ಹೋಗಿದ್ದ ಹಳ್ಳಿಯಲ್ಲಿದ್ದ ಇಬ್ಬರು ಅಜ್ಜಿಯರ ನೆನಪುಗಳು ಮತ್ತೆ ಮತ್ತೆ ಕಾಡ ತೊಡಗಿದವು. ಮುಂಗಾರಿಗೆ ಹೊಲದ ಬಿತ್ತನೆ, ಕಳೆ, ಒಕ್ಕಣೆ, ಮನೆಯ ಕಸ ಮುಸುರೆ ತಿಕ್ಕಿ ಸ್ವಚ್ಛ ಮಾಡುವ, ಹಸು, ಕರುಗಳಿಗೆ ಆರೈಕೆ, ಹಾಲು ಹಿಂಡಿ, ಮೊಸರು, ಮಜ್ಜಿಗೆ, ಬೆಣ್ಣೆ ಮಾರಿ ಮನೆ ವಾರ್ತೆಗೆ ಸದಾ ನೊಗ ಎಳೆಯುವ ಜೀವಗಳು, ಹತ್ತಾರು ಕೆಲಸದ ಆಳುಗಳಿಗೆ ಹೊತ್ತು ಹೊತ್ತಿಗೆ ಊಟ, ಒಂದಾ ಎರಡಾ ಕೆಲಸಗಳು! ಎಂದಿಗೂ ಸುಸ್ತಾಗಿ ಉಸ್ಸೆಂದು ಮಲಗದ ಅವರು ಜಗತ್ತಿನ ವಿಸ್ಮಯ ಜೀವಿಗಳು.
ಸದಾ ಕೋರ್ಟು ಕಚೇರಿ ಸುತ್ತುವ ಗಂಡನ ಜೊತೆ ಏಗುತ್ತಾ, ನಾಲ್ಕು ಮದ್ವೆ, ಹತ್ತಾರು ಮೊಮ್ಮಕ್ಕಳ ಬಾಣಂತನದ ಖರ್ಚು ನಿಭಾಯಿಸಿದ್ದ ಅಮ್ಮನ ಅಮ್ಮ. ಮತ್ತೆ ಗಂಡನ ಆರ್ಭಟಕ್ಕೆ ಹೆದರುತ್ತಿದ್ದ ನನ್ನ ಅಪ್ಪನ ಅಮ್ಮ ಬೆಳಗಿನ ಜಾವ ಐದಕ್ಕೆ ಹಾಲು ನಿದ್ದೆಯಲ್ಲಿದ್ದ ಎಂಟರ ವಯಸ್ಸಿನ ನನ್ನನ್ನು ಎಬ್ಬಿಸಿ, ಊರಾಚಿನ ಹೊಲದಲ್ಲಿದ್ದ ಹಿಪ್ಪೆ ಬೀಜ ಆರಿಸಲು ಕರೆದೊಯ್ಯುತ್ತಿದ್ದು ನೆನೆದು ಮತ್ತೆ ಮನ ಜುಂ ಎನಿಸಿತು. ಇನ್ನೂ ಸೂರ್ಯ ಮೂಡದ, ನಡುಕ ಹುಟ್ಟಿಸುವ ಚಳಿಯಲ್ಲಿ ಆ ಹೊತ್ತಿನಲ್ಲಿ ಆ ಎರಡು ಬೃಹದಾಕಾರದ ಹಿಪ್ಪೆ ಮರದ ಬಳಿ ಲಾಟೀನು ಹಿಡಿದು ಮರದ ಕೆಳಗೆಲ್ಲಾ ನೂರೆಂಟು ಬಾವಲಿಗಳು ತಿಂದು ಬಿಸಾಡಿದ ಹಿಪ್ಪೆ ಬೀಜಗಳನ್ನು ಆಯ್ದು ಬುಟ್ಟಿಗೆ ತುಂಬಿ ಮನೆಗೆ ಹೊತ್ತು ಚೀಲಗಟ್ಟಲೇ ಬೀಜ ಕೂಡಿಡುತ್ತಿದ್ದೆವು. ಅದನ್ನು ಸಾಬರಿಗೆ ಮಾರುತ್ತಿದ್ದ ಅಜ್ಜ ಖುಷಿಗಾಗಿ ಒಂದು ಜೊತೆ ಬಟ್ಟೆ ಕೊಡಿಸುತ್ತಿದ್ದ.
ಬೆಳಿಗ್ಗೆ ಎದ್ದಾಗ ಮೆಟ್ಟಿಲು ಕೆಳಗೆ ಮಲಗಿದ್ದ ಅಜ್ಜಿ ತುಸು ಹರ್ಷವಾಗಿದ್ದಳು, ಅಲ್ಲಿಯೇ ಸೂಯೆಜ್ ಪಾರಂ ಬಳಿ ಇದ್ದ ವಿನಯ್ ಟಿಪಾನೀಸ್ ಗೆ ಹೋಗಿ ಎರಡು ಇಡ್ಲಿ ಪಾರ್ಸೆಲ್ ತಂದು ಕೊಟ್ಟು ತಿನ್ನುವಂತೆ ಹೇಳಿ ಕಾಲೇಜಿಗೆ ಹೊರಟೆ. ಹೀಗೆಯೇ ನಾಲ್ಕೈದು ದಿನ ಕಳೆದಿರಬೇಕು. ಒಂದು ಸಂಜೆ ಬಂದು ನೋಡಿದಾಗ ಮೆಟ್ಟಿಲ ಕೆಳಗೆ ಒಂದು ಸೀಮೆ ಎಣ್ಣೆ ಸ್ಟೌ, ಎರಡು ಪಾತ್ರೆ, ತಟ್ಟೆ, ಲೋಟ ಕಾಣಿಸಿದವು. ಏನಜ್ಜಿ! ಏನೋ ಅಡುಗೆ ಮಾಡಲು ರೆಡಿ ಮಾಡ್ತಾ ಇದ್ದೀಯಾ ಎಂದು ಕೇಳಿದೆ. ಹೂ ಕಣೋ! ನೋಡು ಆ ಮನೆಯ ಇನ್ಸ್ ಪೆಕ್ಟರ್ ಪರಶಿವಪ್ಪ ನನ್ನ ಕಷ್ಟ ಕೇಳಿ ಇವೆಲ್ಲಾ ಕೊಡಿಸಿದರು. ನಾಳೆಯಿಂದ ಇಲ್ಲಿಯೇ ಅನ್ನ, ಸಾರು ಮಾಡಿಕೊಳ್ಳುತ್ತೇನೆ ಎಂದಳು. ಜೊತೆಗೆ ಅಕ್ಕಿ, ತರಕಾರಿ ಎಲ್ಲವೂ ಇತ್ತು. ನಿಜಕ್ಕೂ ಮರುದಿನ ಬೆಳ್ಳಿಗ್ಗೆ ಅನ್ನ ಮಾಡಿ, ಘಮ ಘಮ ಟೋಮಾಟೋ ಗೊಜ್ಜು ಮಾಡಿಟ್ಟಿದ್ದಳು. “ಏನಜ್ಜಿ ಅಡುಗೆ ರೆಡಿನಾ…” ಎಂದೆ. “ಹುಂ ಬಾರಲೇ ಕಂದಾ ಊಟ ಮಾಡುವಿಯಂತೆ”, ಬೇಡಜ್ಜಿ ಎನ್ನುತ್ತಿದ್ದಂತೆ, “ಯಾಕೋ ಬೇಡ ಅಂತೀಯಾ… ನಾನು ಮಾಂಸ ಮಡ್ಡಿ ತಿನ್ನುವುದಿಲ್ಲ, ದೀಕ್ಷೆ ತಗೊಂಡಿದೀನಿ” ಎಂದು ತನ್ನ ಕತ್ತಿನಲ್ಲಿದ್ದ ದಪ್ಪನೆಯ ರುದ್ರಾಕ್ಷಿ ಸರ ತೋರಿಸುತ್ತಾ ಊಟ ಮಾಡಲು ಒತ್ತಾಯಿಸತೊಡಗಿದಳು. ಇಲ್ಲ, ಅಜ್ಜಿ ಹಾಗೇನಿಲ್ಲ ನಿನಗೇಕೆ ತೊಂದರೆ ನೀನು ಊಟ ಮಾಡು ಎಂದು ಆಕೆಯನ್ನು ಸುಮ್ಮನಾಗಿಸಿದೆ.
ವ್ಯಕ್ತಿಗಳ ಮುಖಚರ್ಯೆ, ಸ್ಥಾನಮಾನ ನೋಡಿ, ಅವರೊಡನೇ ಮಾತನಾಡುವ ಕಲೆ ಆಕೆಗೆ ಸಿದ್ದಿಸಿತ್ತು. ಮಾತಿನ ಉಚ್ಚಾರ, ಎಷ್ಟು ಮಾತ್ರ ಮಾತನಾಡಬೇಕು, ಮಾತನಾಡುವವರ ಆಸಕ್ತಿ ನೋಡಿ ಯಾವ ವಿಷಯ ಮಾತನಾಡಬೇಕು ಎಲ್ಲವೂ ಕರಗತವಾಗಿತ್ತು. “ಏನ್ ಬುದ್ದಿ ಚೆನ್ನಾಗಿದ್ದೀರಾ? ಏನು ಕೆಲಸ ಮಾಡ್ತಾ ಇದ್ದೀರಾ? ನಿಮಗೆಷ್ಟು ಮಕ್ಕಳು? ದೇವರು ನಿಮ್ಮ ಹೆಂಡತಿ, ಮಕ್ಕಳನ್ನೂ ಸುಖವಾಗಿಡಲಿ” ಎಂದು ಮಂದಹಾಸದ ಮಾತು ಆರಂಭಿಸಿ, ನಿಧಾನಕ್ಕೆ ಕೊನೆಯಲ್ಲಿ ತನ್ನ ಸಂಕಷ್ಟ ಹೇಳಿಕೊಳ್ಳುತ್ತಾ, ಕೆಲವು ಅಕ್ಕ ಪಕ್ಕದ ಮನೆಯ ಕೆಲವು ಅಧಿಕಾರಿಗಳಿಗೂ ಬಹು ಬೇಗ ಪರಿಚಯವಾಗಿದ್ದಳು. ಈ ನಡುವೆ ಆಶ್ರಮದಲ್ಲಿ ನಡೆಯುತ್ತಿದ್ದ ನಾಮಕರಣ, ಹುಟ್ಟುಹಬ್ಬ, ತಿಥಿಯಂತಹ ಕಾರ್ಯಕ್ರಮಗಳಿಗೆ ಸ್ವಚ್ಛ ಮಾಡುವ, ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗ ತೊಡಗಿದಳು. ಕೈ ಗಷ್ಟು ಹಣ ಸಿಗತೊಡಗಿತು, ಕಾರ್ಯಕ್ರಮ ಮುಗಿದ ಮೇಲೆ ಉಳಿದ ಅನ್ನ, ಸಾಂಬಾರ್, ತಿನಿಸುಗಳನ್ನು ತಂದು ಸಂಜೆಯ ಸಮಯದಲ್ಲಿ ರಸ್ತೆ ಬದಿಯಲ್ಲಿ ರದ್ದಿ ಆಯುವ ಹುಡುಗರನ್ನೆಲ್ಲಾ ಜೋರಾಗಿ ಕೂಗಿ ಕರೆದು ಎಲೆ ಹಾಕಿ “ತಿನ್ರಲೇ!!! ನನ್ ಮಕ್ಳಾ !” ಎಂದು ಅವರ ಸಂತೃಪ್ತಿಯಾಗುವಂತೆ ಊಟ ಹಾಕುತ್ತಿದ್ದಳು.
ಅವರೆಲ್ಲರೂ ನಿಧಾನವಾಗಿ ಆಕೆಯ ಬಳಿ ಬಂದು ಮಾತನಾಡುವುದು, ಅವಳ ಮಾತುಗಳನ್ನು ಪಾಲಿಸಲು ಆರಂಭಿಸಿದರು. ಒಮ್ಮೆ ಒಂದು ಶಾಲೆ ಹೋಗುತ್ತಿದ್ದ ಹದಿಮೂರು, ಹದಿನಾಲ್ಕು ಹರೆಯದ ಹುಡುಗಿ ರಸ್ತೆಯಲ್ಲಿ ಆಳುತ್ತಾ ನಿಂತಿದ್ದಳು. ಅವಳ ಬಳಿಗೆ ಹೋಗಿ, ಅವಳನ್ನು ಬಳಿಗೆ ಕರೆದು ಏನೋ ಸಮಾಧಾನ ಹೇಳಿ ಆಕೆಯನ್ನು ಮನೆ ತಲುಪಿಸಿ ಬಂದಿದ್ದಳು. ಯಾಕಜ್ಜಿ, ಆ ಹುಡುಗಿ ಯಾಕೆ ಅಳುತ್ತಿದ್ದಳು, ಏನಾಗಿತ್ತಂತೆ ಎಂದೆವು. ನಿಮಾಗ್ಯಾಕೋ ಹೆಂಗಸರ ಸುದ್ದಿ ಎಂದು ಆ ಅನುಮಾನಕ್ಕೆ ಉತ್ತರ ನೀಡದೇ ಸುಮ್ಮನಾಗಿಸಿದ್ದಳು. ಮತ್ತೊಮ್ಮೆ ಗಂಡನಿಂದ ಏಟು ತಿಂದು ಒಬ್ಬ ಹೆಂಗಸು, ತನ್ನ ಎರಡು ವರ್ಷ ವಯಸ್ಸಿನ ಮಗನೊಂದಿಗೆ ರಸ್ತೆಯಲ್ಲಿ ಅಳುತ್ತಾ ಹೋಗುತ್ತಿದ್ದಾಗ ಆಕೆಯನ್ನು ಸಮಾಧಾನ ಮಾಡಿದ್ದಲ್ಲದೇ, ಅವನ ಮನೆ ಬಾಗಿಲಿಗೆ ಹೋಗಿ ಅವನಿಗೆ ಇನ್ನೊಮ್ಮೆ ಹೆಂಡತಿಗೆ ಹೊಡೆದರೇ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಜೋರಾಗಿ ಹೆದರಿಸಿ ಬಂದಿದ್ದಳು. ಆಕೆಯೊಳಗೆ ನಾನು ಆವಾಗವಾಗ ಹೇಳುತ್ತಿದ್ದಂತೆ ಒಬ್ಬ ನಾಯಕಿ ಇಂದಿರಾಗಾಂಧಿ ಇದ್ದಳು. ಆಶ್ರಮದ ಟ್ರಸ್ಟಿಗಳು ಆಕೆಗೊಂದು ರೂಮು ಕಟ್ಟಿಸಿ ಕೊಡಲು ತಯಾರಾದರು. “ಲೋ! ಇವತ್ತು ಪೊಲೀಸ್ ಕಮಿಷನರ್ ಆಫೀಸ್‌ಗೆ ಹೋಗಿ ಹಳೆಯ ಆಶ್ರಮದ ಆ ಹೆಂಗಸಿನ ಮೇಲೆ ದೂರು ಕೊಟ್ಟು ಬಂದಿದ್ದೇನೆ, ನನ್ನ ದುಡ್ಡು ವಾಪಸ್ ಕೊಡಿಸ್ತಾರಂತೆ” ಎಂದಾಗ ಈರಮ್ಮಜ್ಜಿಗೆ ನ್ಯಾಯ, ಒಂದು ಶಾಶ್ವತ ನೆಮ್ಮದಿಯ ನೆಲೆ ಸಿಗುವ ಸೂಚನೆಗಳು ಮೂಡತೊಡಗಿ, ಮನಸ್ಸಿಗೆ ತುಸು ನಿರಾಳವಾಯಿತು.
ಹಣ, ಅಂತಸ್ತು, ಅಧಿಕಾರಕ್ಕಾಗಿ ಹಪಹಪಿಸುವ ನಮ್ಮ ಸಂಬಂಧಗಳು ಸದಾ ಅವುಗಳಿಂದ ಹೊರತಾಗಿರದೇ ತಿಳಿದೂ ತಿಳಿಯದಂತಿರುತ್ತದೆ. ಸಾಧು ಸಮಾಜವೆಂಬ ಆ ಆಶ್ರಮದ ತನ್ನ ಸುಪರ್ದಿಯಲ್ಲಿ ನಡೆಯಬೇಕೆಂದು ಎಲ್ಲಾ ಟ್ರಸ್ಟಿಗಳಾದ ಜಟ್ಟಪ್ಪ, ಶಿವಣ್ಣ, ಮಾಣಿಕ್ಯಂ ಸದಾ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರು. ಶಿವಾನಂದ ಪುರಿ ಎಂಬಾ ಆಂಧ್ರ ಪ್ರದೇಶದಿಂದ ಬಂದಿದ್ದ ಸಾಧುವಿನಿಂದ ಆಶ್ರಮಕ್ಕೆ ಹೆಚ್ಚಿನ ಆದಾಯ ದೇಣಿಗೆ ಬರುತ್ತಿಲ್ಲ ಅವರನ್ನು ಸಾಕುವುದು ಆಶ್ರಮಕ್ಕೆ ಹೊರೆಯಾಗುತ್ತಿದೆ ಎಂದೂ ಅವರ ಬಗ್ಗೆ ಅಸಡ್ಡೆ ಎಲ್ಲರಿಗೂ ದಿನ ದಿನಕ್ಕೂ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ತನಗಿಲ್ಲಿ ಇನ್ನು ಉಳಿಗಾಲವಿಲ್ಲ ಎಂದೂ ಕೆಲವೊಮ್ಮೆ ಬಿಡುವಿದ್ದಾಗ ನಮ್ಮಲ್ಲಿ ಸಂಕಟ ವ್ಯಕ್ತ ಪಡಿಸುತ್ತಿದ್ದರು. ಬೆಳ್ಳಿಗ್ಗೆ ಏಳಕ್ಕೆ ಆಶ್ರಮದ ಕಸ ಗುಡಿಸಿ, ನೆಲ ಸಾರಿಸಿ ಅವರ ಪಾತ್ರೆ ತೊಳೆದು ಕೊಡಲು ಐವತ್ತರ ಅಸುಪಾಸಿನ ರಾಜಮ್ಮ ಬಂದು ಹೋಗುತ್ತಿದ್ದಳು. ಆಶ್ರಮದ ನಡೆಯುತ್ತಿದ್ದ ನಾಮಕರಣ, ಹುಟ್ಟು ಹಬ್ಬ, ತಿಥಿ ಕಾರ್ಯಕ್ರಮಗಳ ಸ್ವಚ್ಛತೆಗೆ, ಪಾತ್ರೆ ತೊಳೆಯಲು ಈರಮ್ಮಜ್ಜಿಯ ಜೊತೆಗೆ ಬರುತ್ತಿದ್ದಳು. ಮೊದಮೊದಲಿಗೆ ಇವರಿಬ್ಬರೂ ಅನೋನ್ಯತೆಯಿಂದ ಇದ್ದರೂ ನಂತರ ನಿಧಾನಕ್ಕೆ ಅವರಿಬ್ಬರ ನಡುವೆ ಹಣ ಹಂಚಿಕೆಗೆ, ಉಳಿದ ಅಡುಗೆಯನ್ನು ತೆಗೆದುಕೊಂಡು ಹೋಗುವ ವಿಷಯಕ್ಕೆ ಮನಸ್ತಾಪ ಶುರುವಾಗತೊಡಗಿತು.
ಈರಮ್ಮಜ್ಜಿಗೆ ಸಾಧುವಿನ ಬಗ್ಗೆ ಇರುವ ಅಸಡ್ಡೆ, ಸದಸ್ಯರ ನಡುವಿನ ಅಸೂಯೆಗಳು, ಅಲ್ಲಿ ಯಾರು ಪ್ರಬಲ, ದುರ್ಬಲ ಎನ್ನುವ ಸಂಗತಿಗಳು ಬಲು ಬೇಗ ಅರ್ಥವಾಗ ತೊಡಗಿತು. ಈ ನಡುವೆ ಆಶ್ರಮದ ಮೇಲುಗಡೆ ಮತ್ತೊಂದು ಸಭಾ ಮಂಟಪ ಜೊತೆಗೆ ಎರಡು ರೂಮುಗಳನ್ನು ಕಟ್ಟುವ ಕೆಲಸ ಆರಂಭವಾಯಿತು. ಮರಳು, ಕಬ್ಬಿಣ, ಸಿಮೆಂಟ್ ಕಾಯುವ ಕೆಲಸವನ್ನು ಅಜ್ಜಿಗೆ ವಹಿಸಲಾಯಿತು. ಅಬ್ಬಾ! ಎಂತಹ ಅಜ್ಜಿ.! ಹಗಲಿರಳು ಕಣ್ಣು ಎವೆಯಿಕ್ಕದೇ ಕಾಯ ತೊಡಗಿದಳು. ಜೀವನದಲ್ಲಿ ಎಂದೂ ಶಾಲೆ ಮೆಟ್ಟಿಲೇರದ ಆಕೆ ಪ್ರತಿ ದಿನ ಖರ್ಚಾದ ಸಿಮೆಂಟ್ ಚೀಲ, ಕಾಮಗಾರಿಯ ಬಗ್ಗೆ ಶಿಸ್ತಿನ ಸಿಪಾಯಿಯಂತೆ ಲೆಕ್ಕ ಕೊಡ ತೊಡಗಿದಳು. “ಲೋ ನೋಡ್ರಲ್ಲೊ! ನಮ್ಮ ಜಟ್ಟಪ್ಪ, ಶಿವಣ್ಣ ಇಬ್ಬರು ಸೇರಿ ನನಗೆ ರೂಮು ಕಟ್ಟಿಸಿ ಕೊಡುತ್ತಿದ್ದಾರೆ” ಎಂದು ಸದಾ ಹಸನ್ಮುಖಿಯಾಗಿ ಹೇಳುತ್ತಿದ್ದಳು. ಪ್ರತಿ ದಿನ ನಾವೆಲ್ಲರೂ ಏಳುವ ಎದ್ದು ಮುನ್ನವೇ ನಮ್ಮೆಲ್ಲರ ಬಾತ್ ರೂಮಿನಲ್ಲೇ ಸ್ನಾನ ಮುಗಿಸಿ ವಿಭೂತಿ ಧರಿಸಿ, ಊದುಬತ್ತಿ ಹಚ್ಚಿ ಆಶ್ರಮದಲ್ಲಿದ್ದ ಗಣೇಶ, ಲಕ್ಷ್ಮಿ, ಸರಸ್ವತಿ ಮೂರ್ತಿಗಳಿಗೆ ನಮಸ್ಕಾರ ಮಾಡಿ ಮುಗಿಸಿರುತ್ತಿದ್ದಳು.
ಇದನ್ನೂ ಓದಿ ವಚನದ ಅಪವ್ಯಾಖ್ಯಾನ ಮಾಡುತ್ತಿರುವ ವಿಕೃತ ಮನಸ್ಸಿನ ವೀರಶೈವ ಮತ್ತು ವೈದಿಕ ಪಂಡಿತರು
ಒಮ್ಮೆ ಆಶ್ರಮದಲ್ಲಿ ಸಾಧು ಸಂತರ ಸಮಾಗಮ ನಡೆದಿತ್ತು. ವ್ಯವಸ್ಥೆಯ ಸಹಾಯಕ್ಕಾಗಿ ಆಶ್ರಮದಲ್ಲಿ ಬಾಡಿಗೆಗೆ ಇದ್ದ ನಮ್ಮೆಲ್ಲರನ್ನೂ ಕರೆದಿದ್ದರು. ದೊಡ್ಡದಾಗಿಯೇ ಜರುಗಿದ ಆ ಕಾರ್ಯಕ್ರಮಕ್ಕೆ ಪುರುಷ, ಮಹಿಳಾ ಸಾಧುಗಳು ಬಂದಿದ್ದರು. ಅವರ ಭಾಷಣ ನಡೆಯುತ್ತಿತ್ತು. ಅಜ್ಜಿ ನಾನಿದ್ದ ಕಡೆಗೆ ಓಡೋಡಿ ಬಂದಳು. “ಲೋ ಸ್ವಾಮಿ, ಆ ನನ್ನ ದುಡ್ಡು ತಿಂದಿರುವ ಕಳ್ಳಿ ಇಲ್ಲಿಗೂ ಬಂದವ್ಳೆ ನೋಡು ಬಾ” ಎಂದು ಕರೆದಳು. ಅಲ್ಲಿನ ಸಾಧುಗಳ ನಡುವೆ ಸಣ್ಣಗೆ, ತೆಳ್ಳಗಿನ, ಬಿಳಿ ಬಣ್ಣದ ಅರವತ್ತರ ಸುಮಾರಿನ ಕಾವಿ ಸೀರೆ ಉಟ್ಟು ವಿಭೂತಿ, ಜಪಮಾಲೆ ಧರಿಸಿದ ಮತ್ತೊಂದು ಅಜ್ಜಿ ಕುರ್ಚಿಯ ಮೇಲೆ ಕುಳಿತಿದ್ದರು. ನೋಡೊ ನೋಡೋ ಅವಳೇ ನನಗೆ ಅವಳೇ ಮೋಸ ಮಾಡಿದ್ದು ಎಂದಳು. ಅಜ್ಜಿ ಅವರ ಹೆಸರೇನು ಅಂದೆ. ಅವಳ ಹೆಸರು ಪುಟ್ಟೀರಮ್ಮ ಅಂತಾ…, ಅವರನ್ನು ಮತ್ತೆ ನೋಡಿದೆ. ನಿರಾಳವಾದ ಪ್ರಶಾಂತ ಮುಖ, ನಿಜಕ್ಕೂ ಅವರ ಮಾತು, ವಿನಯ ಅವರೊಬ್ಬ ನಿಜಕ್ಕೂ ಸಾಧುವಿರಬೇಕು ಎನಿಸಿತು. ಮತ್ತೆ ಅವರ್ಯಾಕೆ ನಮ್ಮ ಈ ಈರಮ್ಮಜ್ಜಿಯನ್ನು ಆಶ್ರಮದಿಂದ ಹೊರ ಹಾಕಿರಬಹುದು ಎನ್ನುವ ಪ್ರಶ್ನೆಗಳು ಮೂಡತೊಡಗಿದವು.
ಹಳ್ಳಿ ಪುರಾಣ | ಮೈಸೂರಿನಲ್ಲಿ ಸಿಕ್ಕ ಈರಮ್ಮಜ್ಜಿ
ಎರಡು ದಿನ ಕಳೆಯಿತು. ಮಾಮೂಲಿನಂತೆ ಬೆಳಿಗ್ಗೆ ಸ್ನಾನಕ್ಕೆ ಕೆಳಗೆ ಬರುತ್ತಿದ್ದೆ. ಸ್ನಾನ ಮಾಡಿ, ಶುಭ್ರವಾಗಿದ್ದ ಅಜ್ಜಿಯ ಹಣೆಯಲ್ಲಿ ವಿಭೂತಿ, ಕೈ ಯಲ್ಲಿ ಊದುಬತ್ತಿಯಿತ್ತು ನನ್ನನ್ನೂ ನೋಡಿ ಗದ್ಗದಿತಳಾಗಿ ಆಳುತ್ತಾ.. ”ನೋಡು, ಸ್ವಾಮಿ ನಾನು ಆಶ್ರಮದ ಒಳಗೆ ಮೂರ್ತಿಗೆ ಕೈ ಮುಗಿಯಲು ಹೋಗಬಾರದು ಅಂತಾ ಶಿವಾನಂದ ಪುರಿ ಸಾಧು ಬೈದರು. ಇದು ಆ ಪುಟ್ಟೀರಮ್ಮನದೇ ಕೈವಾಡ, ನನ್ನ ಬಗ್ಗೆ ಏನೋ ಚಾಡಿ ಹೇಳಿ ಹೋಗಿದ್ದಾಳೆ. ಒಳಗೆ ಕೈ ಮುಗಿಸಲು ಒಂದು ಮಾತು ಹೇಳು” ಎಂದೂ ಕೈ ಮುಗಿಯುತ್ತಾ ಹೇಳಿದಳು. ಶಿವಾನಂದ ಪುರಿ ಸಾಧುಗಳ ಹತ್ತಿರ ಹೋಗಿ ಈ ವಿಷಯ ಹೇಳುತ್ತಿದ್ದಂತೆ ಕೋಪಗೊಂಡ ಅವರು ನನ್ನನ್ನೂ ನೀನು ಆ ತರಲೆ ಅಜ್ಜಿಯ ಪರ ವಹಿಸಿ ಮಾತಾನಾಡಲು ನನ್ನ ಹತ್ತಿರ ಬರಕೂಡದು ಎಂದು ತಾಕೀತು ಮಾಡಿದರು.

ಗಂಗಾಧರ ಸ್ವಾಮಿ
ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ