ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ತಂದೆ ಹಾಗೂ ಅಣ್ಣನನ್ನೇ ಬರ್ಬರಬಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.
ದೇವೇಗೌಡ (70), ಮಂಜುನಾಥ್ (50) ಕೊಲೆಯಾದವರಾಗಿದ್ದು, ಮೋಹನ್ (47) ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ.
ಅವಿವಾಹಿತರಾಗಿದ್ದ ಮಂಜುನಾಥ್ ಹಾಗೂ ಮೋಹನ್ ಒಂದೇ ಮನೆಯಲ್ಲಿದ್ದರೂ ಸಹ ಮೋಹನ್ ಪ್ರತ್ಯೇಕವಾಗಿ ವಾಸವಿದ್ದ ಎನ್ನಲಾಗಿದ್ದು, ತಂದೆ-ತಾಯಿ ಜೊತೆ ಮಂಜುನಾಥ್ ವಾಸವಿದ್ದರಂತೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಕೊಲೆಯಾದ ತಂದೆ ದೇವೇಗೌಡರು ಜಮೀನು ಮಾರಾಟ ಮಾಡಿದ್ದರು. ಈ ಹಣವನ್ನು ತನಗೇ ಕೊಡುವಂತೆ ಆರೋಪಿ ಮೋಹನ್ ದುಂಬಾಲು ಬಿದ್ದಿದ್ದ. ಸಾಲ ತೀರಿಸಿ ಉಳಿದ ಹಣದಲ್ಲಿ ಮಕ್ಕಳೆಲ್ಲರಿಗೂ ಹಂಚಿಕೆ ಮಾಡುವುದಾಗಿ ದೇವೇಗೌಡರು ಹೇಳಿದ್ದರು. ಬುಧವಾರ ತಡರಾತ್ರಿ ಕುಡಿದು ಮನೆಗೆ ಬಂದ ಮೋಹನ ಅಣ್ಣ ಮಂಜುನಾಥನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಜಗಳ ಬಿಡಿಸಲು ಹೋದ ತಂದೆಯನ್ನೂ ಕೊಚ್ಚಿದ್ದಾನೆ ಎಂದು ದೇವೇಗೌಡರ ಪತ್ನಿ ಜಯಮ್ಮ ದೂರು ನೀಡಿದ್ದಾರೆ.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹಾಸನ | ಮಹಿಳಾ ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಟ; ಬೃಹತ್ ಸಮಾವೇಶಕ್ಕೆ ಜಾಗೃತಿ ಜಾಥಾ