ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಾಣಾ ವೇದಿಕೆ ಪದಾಧಿಕಾರಿಗಳು ವಿಜಯಪುರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಎಂ ಸಿ ಮುಲ್ಲಾ ಮಾತನಾಡಿ, “ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ. ತ್ರಿಭಾಷಾ ಸೂತ್ರದ ಕುರಿತು ರಾಷ್ಟಕವಿ ಕುವೆಂಪು ಅವರು ಹಿಂದೆಯೇ ತೀಕ್ಷ್ಣವಾದ ವಿರೋಧವನ್ನು ಸಾರಿದ್ದರು. ಕರ್ನಾಟಕ ಶಾಲೆಗಳಲ್ಲಿ ಭಾಷೆಯನ್ನು ಕಡ್ಡಾಯಗೊಳಿಸುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು. ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು” ಎಂದು ಹೇಳಿದರು.
“ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿಯನ್ನು ಜಾರಿಗೋಳಸಬೇಕು. ಸಿಬಿಎಸ್‌ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ನೀಡಬೇಕು” ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಸಂತೋಷ ಪಾಟೀಲ ಡಂಬಳ ಮಾತನಾಡಿ, “ತಮಿಳುನಾಡು 1968ರಿಂದಲೇ ತ್ರಿಭಾಷಾ ನೀತಿ ತಿರಸ್ಕರಿಸಿ ತಮಿಳು ಮತ್ತು ಇಂಗ್ಲೀಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಕರ್ನಾಟಕವು ಇಂತಹ ಉದಾಹರಣಗಳಿಂದ ಸ್ಪೂರ್ತಿ ಪಡೆದು, ಕನ್ನಡ ಮತ್ತು ಆಂಗ್ಲ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಪೊಲೀಸ್ ರಕ್ಷಣೆಯೊಂದಿಗೆ ಬೆಳ್ತಂಗಡಿ ಕೋರ್ಟ್‌ಗೆ ಹಾಜರಾದ ದೂರುದಾರ
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿದರು. ಫಯಾಜ ಕಲಾದಗಿ, ರಾಜು ಕಾಂಬರಿ, ರವಿ ಕಿತ್ತೂರು, ದಸ್ತಾಗಿರಿ ಸಾಲೊಟಗಿ, ಮುತ್ತು ಹಿರೇಮಠ, ಜೈಭೀಮ್ ಮುತ್ತಗಿ, ಅನುರಾಧ ಕಲಾಲ, ಕಸ್ತೂರಿ ಪೂಜಾರಿ, ಶ್ರೀಕಾಂತ ಬಿಜಾಪುರ್, ಎಚ್ ಎಸ್ ಕಬಾಡೆ, ಸಾಧಿಕ್ ಜನವಕರ, ದಾದಪಿರ್ ಮುಜವರ, ಆಶಿಫ್ ಪಿರವಾಲೆ, ದಯಾನಂದ ಸಾವಳಗಿ, ವಿನೋದ ದಳವಾಯಿ, ಮಲ್ಲನಗೌಡ ಪಾಟೀಲ, ಬಸವರಾಜ ಬಿ ಕೆ, ವಿಜಯಕುಮಾರ ಎಂಬತಾನಾಳ, ಮಂಜುನಾಥ ಹಿರೇಮಠ, ನಿಸಾರ್ ಬೆಫಾರಿ, ಹಣಮಂತ ಟಕ್ಕಳಿಕಿ ಇದ್ದರು.