ಅವರು ತನ್ನ ಜಿಲ್ಲೆಯಿಂದ ಎಂದಿಗೂ ಹೊರಹೋಗಿಲ್ಲ. ಅದರಲ್ಲೂ, ಅಂತಾರಾಷ್ಟ್ರೀಯ ಗಡಿಯನ್ನಂತೂ ಎಂದೂ ದಾಡಿಯೇ ಇಲ್ಲ. ಆದರೂ, ಅವರು ನೆರೆಯ ರಾಜ್ಯದಲ್ಲಿ ‘ನಾಗಕರಿಕ ರಾಷ್ಟ್ರೀಯ ನೋಂದಣಿ'(ಎನ್‌ಆರ್‌ಸಿ)ಗಾಗಿ ರಚಿಸಲಾಗಿರುವ ವಿದೇಶಿಯರ ನ್ಯಾಯಮಂಡಳಿಯಿಂದ ನೋಟಿಸ್ ಪಡೆದಿದ್ದಾರೆ. ದಿಗ್ಭ್ರಾಂತರಾಗಿದ್ದಾರೆ.
-ಇದು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ದಿನ್‌ಹಾಟಾ ಬ್ಲಾಕ್-2ರ ಸಡಿಯಾರ್ ಕುಥಿರ್ ಗ್ರಾಮದ ನಿವಾಸಿ ಉತ್ತಮ್ ಕುಮಾರ್ ಬ್ರಜ್‌ಬಾಸಿ ಅವರ ಕಥೆ.
ಉತ್ತಮ್ ಕುಮಾರ್ ಅವರು ಪಶ್ಚಿಮ ಬಂಗಾಳದವರಾಗಿದ್ದರೂ, ಅವರಿಗೆ ಅಸ್ಸಾಂ ಎನ್‌ಆರ್‌ಸಿಗಾಗಿ ರಚಿಸಲಾಗಿರುವ ನ್ಯಾಯಮಂಡಳಿಯು ಜನವರಿಯಲ್ಲಿ ನೋಟಿಸ್ ಕೊಟ್ಟಿದೆ. ಜುಲೈ 15ರೊಳಗೆ ಪೌರತ್ವ ದಾಖಲೆಗಳನ್ನು ಒದಗಿಸಬೇಕು ಅಥವಾ ವಿದೇಶಿಯರೆಂದು ತಮ್ಮನ್ನು ತಾವು ಘೋಷಿಸಿಕೊಳ್ಳಬೇಕು ಎಂದು ತಾಕೀತು ಮಾಡಿದೆ. ಈಗ, ಭಾರತೀಯರೊಬ್ಬರು ತನ್ನದೇ ದೇಶದಲ್ಲಿ ಪರಕೀಯನಾಗುವ ಆತಂಕದಲ್ಲಿದ್ದಾರೆ.
”ನಾನು ಎಂದಿಗೂ ಅಸ್ಸಾಂಗೆ ಹೋಗಿಲ್ಲ. ಆದರೂ ಅವರು ನನ್ನನ್ನು ವಿದೇಶಿಗನೆಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಜನವರಿಯಲ್ಲಿ ನನಗೆ ನೋಟಿಸ್ ಬಂದಿದೆ. ನಾನು ನನ್ನ ವಕೀಲರ ಮೂಲಕ ನನ್ನ ಗ್ರಾಮದಲ್ಲಿ ನಾನು ಶಾಶ್ವತ ನಿವಾಸಿ ಎಂಬುದನ್ನು ಸಾಬೀತುಪಡಿಸಲು ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ. ಆದರೂ, ಅವರು ನಿರ್ದಿಷ್ಟವಾಗಿ ನನ್ನ ತಂದೆಯ ಮತದಾರರ ಪಟ್ಟಿ ದಾಖಲೆಗಳನ್ನು ಕೇಳುತ್ತಿದ್ದಾರೆ. ನಾನು ನನ್ನ ಪೌರತ್ವವನ್ನು ಸಾಬೀತು ಮಾಡಲು ತನ್ನ ತಂದೆಯ ಪೌರತ್ವವನ್ನೂ ದೃಢಪಡಿಸಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಉತ್ತಮ್ ಹೇಳಿದ್ದಾರೆ.
ಅಸ್ಸಾಂ ಸರ್ಕಾರದ ನೋಟಿಸ್ ಹೇಳುವಂತೆ- ಉತ್ತಮ್ ಅವರು 1966ರ ಜನವರಿ 1 ಮತ್ತು 1971ರ ಮಾರ್ಚ್ 24ರ ನಡುವೆ ಮಾನ್ಯ ದಾಖಲೆಗಳಿಲ್ಲದೆ ಅಸ್ಸಾಂ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ನಿಗದಿತ ಸಮಯದೊಳಗೆ ಅವರು ಮಾನ್ಯ ಪೌರತ್ವ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ, ಉತ್ತಮ್ ಮತ್ತು ಅವರ ಕುಟುಂಬವು ಕಾನೂನು ಸಲಹೆಗಾಗಿ ದಿನ್ಹಾಟಾ ಬಿಡಿಒ ಕಚೇರಿಗೆ ಅಲೆದಾಡುತ್ತಿದ್ದಾರೆ.
ಪ್ರಾಸಂಗಿಕವಾಗಿ, ಅಸ್ಸಾಂ ಸರ್ಕಾರವು ವಿದೇಶಿ ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸುತ್ತಿರುವ ಉತ್ತಮ್ ಅವರ ತಂದೆ ದಿ. ನರೇಂದ್ರನಾಥ್ ಬ್ರಜ್‌ಬಾಸಿ ಅವರು ಚೌಧುರಿಹತ್ ಗ್ರಾಮ ಪಂಚಾಯತಿಯ ಉಪ ಮುಖ್ಯಸ್ಥರಾಗಿ (ಉಪ-ಪ್ರಧಾನ) ಸೇವೆ ಸಲ್ಲಿಸಿದರು. 1978ರಲ್ಲಿ ಪಶ್ಚಿಮ ಬಂಗಾಳದ ಮೊದಲ ಪಂಚಾಯತ್ ಚುನಾವಣೆಯಲ್ಲಿ ಅವರು ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಬೆಂಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಇದನ್ನು ಅಧಿಕೃತ ದಾಖಲೆಗಳು ದೃಢಪಡಿಸಿವೆ.
ಆದಾಗ್ಯೂ, ಅಸ್ಸಾಂನ ಕಾಮರೂಪ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಳಿಸಿರುವ ನೋಟಿಸ್‌ನಲ್ಲಿ 1970ಕ್ಕಿಂತ ಹಿಂದಿನಿಂದ 2008ರಲ್ಲಿ ನರೇಂದ್ರನಾಥ್ ನಿಧನರಾಗುವವರೆಗೆ ಅವರ ನಿರಂತರ ಉಪಸ್ಥಿತಿಯನ್ನು ಸಾಬೀತುಪಡಿಸುವ ಮತದಾರರ ಪಟ್ಟಿಗಳ ದೃಢೀಕೃತ ಪ್ರತಿಗಳನ್ನು ಸಲ್ಲಿಸುವಂತೆ ಉತ್ತಮ್ ಅವರಿಗೆ ಸೂಚಿಸಲಾಗಿದೆ. ಈ ದಾಖಲೆಗಳನ್ನು ಜುಲೈ 15ರೊಳಗೆ ಕಾಮರೂಪ್ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ, ಉತ್ತಮ್ ಅವರನ್ನು ವಿದೇಶಿಗನೆಂದು ಗುರುತಿಸಲಾಗುತ್ತದೆ ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ.
”ಅಧಿಕಾರಿಗಳು 1966 ಮತ್ತು 1988ರ ಮತದಾರರ ಪಟ್ಟಿಯ ಪ್ರತಿಗಳನ್ನು ಒದಗಿಸುವಂತೆ ಕೇಳುತ್ತಿದ್ದಾರೆ. ಅಸ್ಸಾಂನ ಆರೋಪಗಳಿಂದಾಗಿ ನಾನು ಅಸಹಾಯಕನಾಗಿದ್ದೇನೆ. ನನ್ನ ಪರಿಸ್ಥಿತಿಯನ್ನು ವಿವರಿಸಿ, ದಾಖಲೆಗಳನ್ನು ಕೂಚ್ ಬೆಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿದ್ದೇನೆ” ಎಂದು ಉತ್ತಮ್ ಹೇಳಿದ್ದಾರೆ.
ಪ್ರಕರಣವು ಬೆಳಕಿಗೆ ಬಂದ ಬಳಿಕ, ವಿಚಾರವು ರಾಜಕೀಯ ತಿರುವು ಪಡೆದುಕೊಂಡಿದೆ. ಬಂಗಾಳದ ಆಡಳಿತ ಪಕ್ಷ ಟಿಎಂಸಿ ಅಸ್ಸಾಂನ ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಉತ್ತಮ್ ಅವರಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಜಾತ್ಯತೀತ, ಸಮಾಜವಾದ ಬೇಡ; ಇದು ನೂರಕ್ಕೆ ನೂರು ಮೀಸಲಾತಿ ಪಡೆದವರ ಗೊಣಗಾಟ
ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸಂಸದ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮಿರುಲ್ ಇಸ್ಲಾಂ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಉತ್ತಮ್ ಅವರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಉತ್ತಮ್ ಅವರಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹಂಚಿಕೊಂಡಿದ್ದಾರೆ. ”1966ರಲ್ಲಿಯೇ ಮತದಾರರ ಪಟ್ಟಿಯಲ್ಲಿ ಮೊದಲ ಬಾರಿಗೆ ಹೆಸರು ನೋಂದಾಯಿಸಿಕೊಂಡು, ಮತದಾನ ಮಾಡಿದ್ದ ನರೇಂದ್ರನಾಥ್ ಅವರ ಪುತ್ರ ಉತ್ತಮ್ ಅವರಿಗೆ ಅಸ್ಸಾಂನ ಬಿಜೆಪಿ ಸರ್ಕಾರವು ಹೇಗೆ ಎನ್‌ಆರ್‌ಸಿ ನೋಟಿಸ್ ಕಳುಹಿಸಬಹುದು” ಎಂದು ಪ್ರಶ್ನಿಸಿದ್ದಾರೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ನೇತೃತ್ವದ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ”ಉತ್ತಮ್ ಅವರು 50 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಬಂಗಾಳದಲ್ಲಿ ವಾಸಿಸುತ್ತಿದ್ದಾರೆ. ಬಂಗಾಳದ ನಿವಾಸಿಯಾಗಿದ್ದಾರೆ. ಮಾನ್ಯ ಗುರುತಿನ ದಾಖಲೆಗಳನ್ನು ಹೊಂದಿದ್ದಾರೆ. ಆದರೂ, ಅವರನ್ನು ವಿದೇಶಿ/ಅಕ್ರಮ ವಲಸಿಗ ಎಂಬ ಅನುಮಾನದ ಮೇಲೆ ಕಿರುಕುಳ ನೀಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ಪಕ್ಷವು ಈ ಪ್ರಕರಣವನ್ನು ನೆರೆಯ ರಾಜ್ಯ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯ ಮೂಲಕ ಎನ್‌ಆರ್‌ಸಿ ಹೇರುವ ಪ್ರಯತ್ನಕ್ಕೆ ಹೋಲಿಕೆ ಮಾಡಿದ್ದಾರೆ. ಇದೇ ರೀತಿಯಲ್ಲಿ 2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಂಗಾಳಿರಿಗೆ ಕಿರುಕುಳ ನೀಡುತ್ತಾರೆ. ಈ ಬಗ್ಗೆ ಬಂಗಾಳಿ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಪಕ್ಷವು ಹೇಳಿದೆ.