ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಯುವತಿಯೊಬ್ಬಳನ್ನು ಗ್ಯಾಂಗ್ ರೇಪ್ ಮಾಡಿರುವ ಆರೋಪದಲ್ಲಿ ಮೂವರು ಯುವಕರನ್ನು ಚಿಕ್ಕನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಜೂನ್ 9ರಂದು ನಡೆದ ಕೃತ್ಯ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಂದ, ಲಿಖಿತ್ ಹಾಗೂ ಒಬ್ಬ ಅಪರಿಚಿತ ಸೇರಿ ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 9ರಂದು ರಾತ್ರಿ ಆರೋಪಿ ವಿದ್ಯಾನಂದ ಯುವತಿಯನ್ನು ಮಾತನಾಡಬೇಕೆಂದು ಒತ್ತಾಯಿಸಿ ಕರೆಸಿಕೊಂಡಿದ್ದಾರೆ. ಯುವತಿ ಸ್ಥಳಕ್ಕೆ ಬರುತ್ತಿದ್ದಂತೆ ತಕ್ಷಣವೇ ಆಕೆಯ ಬಾಯಿಗೆ ಬಟ್ಟೆ ತುರುಕಿ, ತನ್ನ ಸಹಚರರೊಂದಿಗೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಆರೋಪಿಗಳು ಯುವತಿಗೆ ಜೀವ ಬೆದರಿಕೆ ಹಾಕಿದ್ದು, ಈ ಕಾರಣದಿಂದಾಗಿ ಆಕೆ ಯಾರಿಗೂ ವಿಷಯ ತಿಳಿಸಿರಲಿಲ್ಲ. ಆದರೆ ಒಂದು ತಿಂಗಳ ಬಳಿಕ ಧೈರ್ಯ ಮಾಡಿ ತನ್ನ ಪೋಷಕರೊಂದಿಗೆ ಚಿಕ್ಕನಾಯಕನಹಳ್ಳಿ ಪೊಲೀಸರ ಮೊರೆ ಹೋಗಿದ್ದಾಳೆ.
ಇದನ್ನೂ ಓದಿ: ತುಮಕೂರು | ಔಟರ್ ರಿಂಗ್ ರಸ್ತೆಗೆ ರೈತರ ವಿರೋಧ : ಪ್ರತಿಭಟನೆ
ಆಕೆಯ ದೂರು ಆಧರಿಸಿ ವಿದ್ಯಾನಂದ, ಲಿಖಿತ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಚಿಕ್ಕನಾಯಕನಹಳ್ಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.