ಗೊಜನೂರ ಗ್ರಾಮದಲ್ಲಿರುವ ಕರ್ನಾಟಕ ಕಸ್ತೂರ ಬಾ ಬಾಲಕಿಯರ ವಸತಿ ನಿಲಯದ ಕೊಠಡಿಗಳು ಶಿಥಿಲಗೊಂಡಿವೆ. ಅವುಗಳನ್ನು ದುರಸ್ತಿ ಮಾಡಿ, ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ಪಡೆ (ಕರವೇ) ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಕಾರ್ಯಕರ್ತರು, “ವಸತಿ ನಿಲಯದ ಕಟ್ಟಡ ಹಾಳಾಗಿದ್ದು ಮಳೆ ನೀರು ಕಟ್ಟಡದ ಒಳಗಡೆ ಸೋರಿ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗಿದ್ದು, ವಸತಿಗೆ ಅನಾನುಕೂಲವಾಗಿದೆ” ಎಂದು ಆರೋಪಿಸಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಕರವೇ ಮುಖಂಡ ಚೇತನ ಕಣವಿ ಮಾತನಾಡಿ, “ಶಾಲೆಗೆ ಸರಿಯಾದ ಜಾಗದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯದ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ ಈಗಿನ ಕರ್ನಾಟಕ ಕಸ್ತೂರಬಾ ವಸತಿ ನಿಲಯದ ಆವರಣದಲ್ಲಿ ನೀರು ನಿಂತಿದ್ದರಿಂದ ವಿದ್ಯಾರ್ಥಿಗಳ ಜೀವನ ನರಕ ಸದೃಶ ವಾತಾವರಣದ ನಿರ್ಮಾಣ ವಾಗಿದೆ. ಅದರಿಂದ ಈ ಕೂಡಲೇ ಗೋಜನೂರ ಗ್ರಾಮದ ಕರ್ನಾಟಕ ಕಸ್ತೂರಬಾ ವಸತಿ ನಿಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕು, ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾಗಿ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ವೇಳೆ ಕರವೇ ಕಾರ್ಯಕರ್ತರು ಬಸನಗೌಡ ಪಾಟೀಲ್, ದಾವಲಸಾಬ ಆನಿ, ಪ್ರವೀಣ ವಡಕಣ್ಣವರ, ಶಂಕ್ರಪ್ಪ ಸವಣೂರು, ಪ್ರಭು ಕೊಂಡಿಕೊಪ್ಪ ಇನ್ನೂ ಅನೇಕರು ಉಪಸ್ಥಿತರಿದ್ದರು.