ಹಾಸನ ಸಂಸದ ಶ್ರೇಯಸ್ ಎಂ ಪಟೇಲ್ ಚನ್ನರಾಯಪಟ್ಟಣ ಪುರಸಭೆ ಪರಿಶೀಲನಾ ಸಭೆ ನಡೆಸಲು ಮುಂದಾದ ಸಂದರ್ಭದಲ್ಲಿ ಪುರಸಭೆಯ ಸಭಾಂಗಣದಲ್ಲಿ ಸಭೆ ಮಾಡಬಾರದೆಂದು ಪುರಸಭಾ ಅಧ್ಯಕ್ಷ ಮೋಹನ್ ಸೇರಿದಂತೆ ಕೆಲ ಸದಸ್ಯರು ಸಭಾಂಗಣಕ್ಕೆ ಬೀಗ ಹಾಕಿ ಸಂಸದರಿಗೆ ಅಪಮಾನ ಎಸಗಿದ ಪ್ರಸಂಗ ನಡೆದಿದೆ.
ಕೇಂದ್ರ ಸರ್ಕಾರದಿಂದ ಪುರಸಭೆಗೆ ವಿವಿಧ ಯೋಜನೆ ಅಡಿಯಲ್ಲಿ ಹಣ ಬಿಡುಗಡೆಯಾಗಿದ್ದು, ಈ ಹಣವನ್ನು ಯಾವ ರೂಪದಲ್ಲಿ ವ್ಯಯ ಮಾಡಲಾಗಿದೆ ಎಂಬ ಮೂಲ ಉದ್ದೇಶವನ್ನು ಇಟ್ಟುಕೊಂಡು ಲೋಕಸಭಾ ಸದಸ್ಯರು ಬುಧವಾರ ಪುರಸಭೆಗೆ ಭೇಟಿ ನೀಡುತ್ತೇನೆಂದು ಪುರಸಭಾ ಅಧಿಕಾರಿಗೆ ತಿಳಿಸಿದ್ದರು ಎನ್ನಲಾಗಿದೆ.
ಇದರಂತೆ ಪುರಸಭೆಗೆ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಅವರು ಭೇಟಿ ನೀಡಿ ಪುರಸಭಾ ಸಭಾಂಗಣದಲ್ಲಿ ಸಭೆ ಮಾಡಲು ಮುಂದಾದಾಗ ಪುರಸಭಾ ಅಧ್ಯಕ್ಷ ಮೋಹನ್ ಅವರು ಪುರಸಭೆಯ ಸಭಾಣಕ್ಕೆ ಬೇಗ ಹಾಕಿ ತಾವೇ ಬೀಗದ ಕೀ ಇಟ್ಟುಕೊಂಡಿದ್ದರು. ಇದನ್ನು ವಿರೋಧಿಸಿದ ಪುರಸಭಾ ನಾಮನಿರ್ದೇಶಕ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು, “ನಿತ್ಯವೂ ಪುರಸಭೆಯ ಸಭಾಂಗಣವು ತೆರೆದಿರುತ್ತಿತ್ತು. ಇಂದು ಲೋಕಸಭಾ ಸದಸ್ಯರು ಪುರಸಭೆಗೆ ಪ್ರಗತಿ ಪರಿಶೀಲನಾ ಸಭೆ ಮಾಡಲು ಆಗಮಿಸುತ್ತಿರುವುದನ್ನು ಖಂಡಿಸಿ ಪುರಸಭೆಯ ಅಧಿಕಾರಿಗಳು ಮತ್ತು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿಕೊಂಡು ಬೀಗ ಹಾಕಿರುವುದು ಸರಿಯಲ್ಲ”ವೆಂದು ಬೀಗವನ್ನು ಮುರಿಯಲು ಮುಂದಾದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹಾಡಹಗಲೇ 3 ಕೆಜಿ ಚಿನ್ನಾಭರಣ ದರೋಡೆ: ಮಾಲೀಕನಿಗೆ ಗನ್ ತೋರಿಸಿ ಆರೋಪಿಗಳು ಪರಾರಿ
ಪುರಸಭೆಯ ಸಭಾಂಗಣದ ಬೀಗವನ್ನು ತೆರೆದು ಸಭೆ ಮಾಡಲು ಮುಂದಾದಾಗ ನಾಮ ನಿರ್ದೇಶಕ ಸದಸ್ಯರು ಮತ್ತು ಕಾಂಗ್ರೆಸ್ ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಧ್ಯಕ್ಷರು, ಪುರಸಭೆಯ ಮುಖ್ಯಾಧಿಕಾರಿಗಳು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಲೋಕಸಭಾ ಸದಸ್ಯರು ಕಾರ್ಯಕರ್ತರು ಮತ್ತು ನಾಮ ನಿರ್ದೇಶಕ ಸದಸ್ಯರನ್ನು ಮನವೊಲಿಸಿ ಎಲ್ಲರನ್ನೂ ಸಭಾಂಗಣದಿಂದ ಹೊರ ತೆರಳುವಂತೆ ತಿಳಿಸಿ ಸಭೆಯನ್ನು ಆರಂಭಿಸಿದರು.