ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಬಿಡುಗಡೆಯಾಗಿದ್ದು, ಟೇಕ್-ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡಿದೆ ಎಂದು ತನಿಖಾ ವರದಿ ಬಹಿರಂಗಪಡಿಸಿದೆ.
ಜೂನ್ 12ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 242 ರಲ್ಲಿ 241 ಜನರು ಸೇರಿದಂತೆ ಕನಿಷ್ಠ 270 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯ ತನಿಖಾ ವರದಿ ಬಿಡುಗಡೆಗೊಂಡಿದೆ.
ಇದನ್ನು ಓದಿದ್ದೀರಾ? ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ನಿಗೂಢ ಸಾವು; ಮತ್ತೆ ಮುನ್ನೆಲೆಗೆ
ಶನಿವಾರ(ಜುಲೈ 12) ಬೆಳಗಿನ ಜಾವ 1 ಗಂಟೆಯ ನಂತರ ವರದಿ ಬಿಡುಗಡೆಯಾಗಿದೆ. ಹಲವು ಆಘಾತಕಾರಿ ಮಾಹಿತಿಗಳು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.
ಟೇಕ್-ಆಫ್ ಆದಾಗಲೇ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡಿದ್ದು ಇಂಧನ ಪೂರೈಕೆಯೂ ನಿಂತಿದೆ. ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಲ್ಲಿ ಒಬ್ಬ ಪೈಲಟ್ “ನೀವು ಏಕೆ ಕಟ್‌ಆಫ್ ಮಾಡಿದ್ದೀರಿ” ಎಂದು ಪ್ರಶ್ನಿಸಿರುವುದು, ಇನ್ನೊಬ್ಬ ಪೈಲಟ್ “ನಾನು ಮಾಡಲಿಲ್ಲ” ಎಂದು ಉತ್ತರಿಸಿರುವುದು ಕೇಳಿಬಂದಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಮಾನದಲ್ಲಿ ಸಂಪೂರ್ಣ ಶಕ್ತಿ ಮತ್ತು ಒತ್ತಡದ ಕೊರತೆ ಕಂಡುಬಂದಿದೆ ಎನ್ನಲಾಗಿದೆ.
“ವಿಮಾನ ನಿಲ್ದಾಣದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ರಾಮ್ ಏರ್ ಟರ್ಬೈನ್ (RAT) ಅನ್ನು ನಿಯೋಜಿಸಲಾಗುತ್ತಿರುವುದನ್ನು ತೋರಿಸಿದೆ. ವಿಮಾನ ಹಾರಾಟ ಮಾರ್ಗದಲ್ಲಿ ಯಾವುದೇ ಪಕ್ಷಿಗಳು ಹಾರಾಡುವುದು ಕಂಡುಬಂದಿಲ್ಲ. ವಿಮಾನ ನಿಲ್ದಾಣದ ಪರಿಧಿಯ ಗೋಡೆಯನ್ನು ದಾಟುವ ಮೊದಲು ಮತ್ತೆ ಕೆಳಕ್ಕಿಳಿಯಲು ಪ್ರಾರಂಭಿಸಿದೆ” ಎಂದು ವರದಿ ಹೇಳಿದೆ.
Air India crashed after taking off. The plane was seen struggling to gain altitude before crashing into a fire ball.. Over 200 people were on board..#AirIndiaCrash pic.twitter.com/xacH20AlSe
— Sudhir Byaruhanga (@Sudhirntv) June 12, 2025
ಎರಡೂ ಎಂಜಿನ್‌ಗಳು ಅಥವಾ ವಿದ್ಯುತ್ ಸರಬರಾಜು ನಿಂತಾಗ ರಾಮ್ ಏರ್ ಟರ್ಬೈನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಇದು ವಿಮಾನ ಎತ್ತರದಲ್ಲೇ ಇರಲು ಸಹಾಯ ಮಾಡುತ್ತದೆ. ವಿದ್ಯುತ್ ಉತ್ಪಾದಿಸಲು ಗಾಳಿಯ ವೇಗವನ್ನು ಬಳಸುತ್ತದೆ.
ವಿಮಾನವು ಕೇವಲ 32 ಸೆಕೆಂಡುಗಳ ಕಾಲ ಮಾತ್ರ ಗಾಳಿಯಲ್ಲಿ ಹಾರಿದ್ದು ವಿಮಾನ ನಿಲ್ದಾಣದ ಸಮೀಪವಿರುವ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿದ್ದು ಕೇವಲ 0.9 ನಾಟಿಕಲ್ ಮೈಲುಗಳಷ್ಟು ಹಾರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
