ಧರ್ಮಸ್ಥಳ ಪ್ರದೇಶದ ಸುತ್ತಮುತ್ತಲಿನ ಕಾಡಿನಲ್ಲಿ ಸಾಮೂಹಿಕವಾಗಿ ನೂರಾರು ಮೃತದೇಹಗಳನ್ನು ಹೂತು ಹಾಕಿದ್ದೇನೆಂದು ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣದಲ್ಲಿ ಜಿಲ್ಲೆಯ ಸಕ್ಷಮ ಪ್ರಾಧಿಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಕ್ಷಿಯ ರಕ್ಷಣೆಗೆ ಅನುಮೋದನೆ ನೀಡಿದೆ. ಆದರೆ, ದೂರುದಾರ ಸಾಕ್ಷಿಯ ಗುರುತಿನ ರಕ್ಷಣೆಯ ವಿಚಾರದಲ್ಲಿ ಗಂಭೀರ ಲೋಪವಾಗಿರುವುದು ಬೆಳಕಿಗೆ ಬಂದಿದೆ.
ಸಾಕ್ಷಿ ದೂರುದಾರರನ್ನು ಪ್ರತಿನಿಧಿಸುತ್ತಿರುವ ವ್ಯಕ್ತಿಗಳು, ಪತ್ರಿಕಾ ಪ್ರಕಟಣೆ ಹಾಗೂ ಎಫ್.ಐ.ಆರ್ ಪ್ರತಿಯನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಮೂಲಕ, ಸಾಕ್ಷಿ ದೂರುದಾರರ ವಯಸ್ಸು, ವೃತ್ತಿಯ ಸ್ಥಳ, ಚಹರೆ, ವೃತ್ತಿಯಲ್ಲಿದ್ದ ಅವಧಿ, ಸಮುದಾಯ ಮತ್ತು ಇತರೆ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಸ್ಥಳೀಯ ಅನೇಕರು ಸಾಕ್ಷಿ ದೂರುದಾರರನ್ನು ಅಂದಾಜಿಸಿದ್ದಾರೆ.
ಈ ಘಟನೆಯ ಹೊರತಾಗಿಯೂ, ಎಲ್ಲ ಅಧಿಕೃತ ಮೂಲಗಳಿಂದ ಸಾಕ್ಷಿ ದೂರುದಾರರ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ. ಅಲ್ಲದೆ, ಈ ಸಂಬಂಧ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ (ಡಿವೈಎಸ್ಪಿ) ನೇತೃತ್ವದಲ್ಲಿ ಪ್ರತ್ಯೇಕ ತನಿಖೆಯನ್ನು ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ.

ಸಾಕ್ಷಿ ದೂರುದಾರರು ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಶುಕ್ರವಾರ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿರುತ್ತಾರೆ. ಇದೇ ವೇಳೆ ಸಾಕ್ಷಿ ದೂರುದಾರರು ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ನ್ಯಾಯಾಲಯದಲ್ಲಿ ಪೊಲೀಸರಿಗೆ ಹಾಜರುಪಡಿಸಿದ್ದಾರೆ. ಈ ಅವಶೇಷಗಳನ್ನು ಸಾಕ್ಷಿ ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಆದಷ್ಟು ಶೀಘ್ರ ಹೂತಿಟ್ಟಿರುವ ಶವ ಹೊರತರಲು ಕ್ರಮ ಕೈಗೊಳ್ಳಬೇಕು: ವಕೀಲ ಪವನ್ ಶ್ಯಾಮ್
ಇನ್ನು ಶುಕ್ರವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದೂರುದಾರರ ಪರ ವಕೀಲ ಪವನ್ ಶ್ಯಾಮ್, ಪೊಲೀಸರು ಆದಷ್ಟು ಶೀಘ್ರ ಹೂತಿಟ್ಟಿರುವ ಶವ ಹೊರತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೆಣಗಳನ್ನು ಹೂತು ಹಾಕಿರುವ ಜಾಗಗಳನ್ನು ಸ್ಪಷ್ಟವಾಗಿ ದೂರುದಾರನು ಗುರುತಿಸಿ ತೋರಿಸಲು ಸಿದ್ಧನಿದ್ದಾನೆ. ಈ ಬಗ್ಗೆ ಪೊಲೀಸರು ಯಾವಾಗ ಬೇಕಾದರೂ ದಿನ ನಿಗದಿಪಡಿಸಿದ್ದರೂ ನಾವು ದೂರುದಾರನೊಂದಿಗೆ ಬಂದು ಸಹಕರಿಸಲಿದ್ದೇವೆ. ಘಟನೆಯ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ. ಸಾಕ್ಷ್ಯ ನಾಶವಾಗುವ ಆತಂಕವೂ ಇದ್ದು, ಸಾಧ್ಯವಾದಷ್ಟು ವೇಗವಾಗಿ ಇಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ಹೂತು ಹಾಕಿರುವ ಮೃತದೇಹಗಳನ್ನು ಹೊರತೆಗೆಯಲು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಎಂದು ಅವರು ಹೇಳಿದ್ದಾರೆ.
“ನ್ಯಾಯಾಲಯಲಯದಲ್ಲಿ ಹೇಳಿಕೆ ನೀಡಿರುವ ದೂರುದಾರನನ್ನು ಪೊಲೀಸರು ಬಂಧಿಸಿಲ್ಲ ಹಾಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿಲ್ಲ. ಅವರು ನಮ್ಮೊಂದಿಗೆ ಇರುತ್ತಾರೆ” ಎಂದು ದೂರುದಾರರ ಪರ ವಕೀಲ ಪವನ್ ಶ್ಯಾಮ್ ತಿಳಿಸಿದ್ದಾರೆ.
