ಸಾಲ ತೀರಿಸಲು ತಮ್ಮ 20 ದಿನದ ಗಂಡು ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಹಳೇ ದಾಂಡೇಲಿ ದೇಶಪಾಂಡೆ ನಗರದ ನಿವಾಸಿ ಮಾಹೀನ್ ಜೂನ್ 17 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತಂದೆ ವಸೀಂ ನಜೀರ್ ತುಂಬಾ ಸಾಲ ಮಾಡಿಕೊಂಡಿದ್ದ ಕಾರಣ ಮಗುವನ್ನು ಮಾರಾಟ ಮಾಡಿದ್ದಾರೆ.
ಜುಲೈ 8ರಂದು ಧಾರವಾಡಕ್ಕೆ ಹೋಗಿ, ಬೆಳಗಾವಿಯ ನೂರ್ ಅಹಮ್ಮದ್ ಎಂಬಾತನಿಗೆ 3 ಲಕ್ಷ ರೂ.ಗೆ ಮಗುವನ್ನು ಮಾರಾಟ ಮಾಡಿದ್ದರು. ಮಾಹೀನ್ ಮನೆಯಲ್ಲಿ ಮಗು ಕಾಣದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ಅವರು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂಗನವಾಡಿ ಕಾರ್ಯಕರ್ತೆಯ ದೂರಿನ ಹಿನ್ನೆಲೆಯಲ್ಲಿ ಪಿಎಸ್ಐ ಅಮೀನಸಾಬ ಅತ್ತಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಮಗು ಖರೀದಿಸಿದ ವ್ಯಕ್ತಿ ಮತ್ತು ಇದಕ್ಕೆ ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ, ಮಗುವಿನ ಹೆತ್ತವರು ನಾಪತ್ತೆಯಾಗಿದ್ದಾರೆ.
ಮಾರಾಟ ಮಾಡಲಾಗಿದ್ದ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ಸಮಿತಿಯು ಮಗುವಿನ ಪೋಷಣೆ ಮತ್ತು ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.