ಬೆಂಗಳೂರಿನ ತಾವರೆಕೆರಿಯಲ್ಲಿ ಅಪ್ರಾಪ್ತ ಬಾಲಕಿಗೆ ಅತ್ಯಾಚಾರಗೈದು ಕೊಲೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡದೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸರಕಾರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಕೊಪ್ಪಳ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಈ ಕುರಿತು ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಸಮುದಾಯ ಜಿಲ್ಲಾ ಸಂಯುಕ್ತ ಜಂಟಿಯಾಗಿ ಪ್ರತಿಭಟಿಸಿ ಜಿಲ್ಲಾಧಕಾರಿಗಳ ಮುಖಾಂತರ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಮುದಾಯದ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ ಮಾತನಾಡಿ, ʼಬೆಂಗಳೂರಿನಲ್ಲಿ ಕೊಪ್ಪಳದ ಸಿಳ್ಳಿಕ್ಯಾತ ಅಲೆಮಾರಿ ಸಮುದಾಯದ ಮಗುವನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದ ಹೆಣ್ಣು ಮಕ್ಕಳಿಗೆ ಬೆಂಗಳೂರಿನಲ್ಲಿ ಸುರಕ್ಷತೆಯೇ ಇಲ್ಲದಂತಾಗಿದೆ. ಇಂತಹ ಬಡ ಕುಟುಂಬಗಳ ಮೇಲೆ ಅನ್ಯಾಯ ಆಗಿರುವುದು ಖಂಡನೀಯವಾಗಿದೆ. ಸರ್ಕಾರ ಈ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಬೇಕುʼ ಎಂದು ಒತ್ತಾಯಿಸಿದರು.
ಮುಖಂಡ ಕೃಷ್ಣವೇಣಿ ಪಿ.ಚನ್ನದಾಸರ ಮಾತನಾಡಿ, ʼಅಲೆಮಾರಿ ಬುಡಕಟ್ಟು ಸಮುದಾಯಗಳು ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಹೋಗಿ ಬೇರೆಬೇರೆ ವ್ಯಾಪಾರ ಮಾಡಿಕೊಂಡು ಉಪಜೀವನ ನಡೆಸುತ್ತಾರೆ. ಮೂಲ ಕಸುಬು ನಡೆಸಿದರೆ ಉಪಜೀವನ ನಡೆಸಲು ಸಾಧ್ಯವಾಗದ ಕಾರಣಕ್ಕೆ ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ. ವಲಸಿಗ ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಸುವುದು ಕೌರ್ಯ ಮನಸ್ಥಿತಿಯಾಗಿದೆ. ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕುʼ ಎಂದು ಒತ್ತಾಯಿಸಿದರು.
ಶಿವಣ್ಣ ಕಲಕೇರಿ, ಬಸವರಾಜ್ ವಿಭೂತಿ, ಲೋಕೇಶ್ ಭಜಂತ್ರಿ, ಜಯಣ್ಣ ಸಿಂದೋಳ್ಳಿ, ಬಸಣ್ಣ ವಿಭೂತಿ, ರಮೇಶ್ ಚನ್ನದಾಸರ, ಗೌರಿ.ಡಿ.ಗೋನಾಳ, ರಾಮಕೃಷ್ಣ ಹೆಚ್.ಚನ್ನದಾಸರ, ತಿಮ್ಮಣ್ಣ ದಾಸರ, ನಾಗರಾಜ್ ಮಾಲದಾಸರ, ಬಸವರಾಜ್ ಚನ್ನದಾಸರ ಹಿರೇಮನ್ನಾಪೂರ, ವಿರುಪಣ್ಣ ಕಲಕೇರಿ, ಕರಿಯಪ್ಪ ದಾಸರ, ಹನುಮೇಶ್ ಚನ್ನದಾಸರ ಈಳೀಗನೂರು, ಗವಿಸಿದ್ದಪ್ಪ ಹಲಗಿ, ಶಶಿಕಲಾ ಮಠದ, ಹನುಮಂತಪ್ಪ ಜಿ ಸುಂಕಾಪುರ, ಯಂಕಪ್ಪ ಹೆಬ್ಲಿ, ಮಹೇಶ್ ಕೊಂಡಪಲ್ಲಿ. ಗಿಡ್ಡಪ್ಪ, ದುರ್ಗಪ್ಪ, ಆರ್.ಕೃಷ್ಣ ಬುಡಜಂಗಮ, ಬಸವರಾಜ್ ಶೀಲವಂತರ್, ಎಸ್.ಎ.ಗಫಾರ್, ಗಾಳೆಪ್ಪ ಮುಂಗೋಲಿ, ಮಖಬೂಲ್ ರಾಯಚೂರು, ಚನ್ನಬಸಪ್ಪ ಅಪ್ಪಣ್ಣವರ್, ಪರಶುರಾಮ ಕೆರೆಹಳ್ಳಿ, ನಿಂಗಪ್ಪ ಬೆಣಕಲ್, ಮೈಲಪ್ಪ ಮಾದಿನೂರು, ಮಾರುತಿ ದೊಡ್ಡಮನಿ ಮತ್ತಿತರರು ಇದ್ದರು.
