ಬೆಂಗಳೂರಿನ ಹೊರವಲಯದಲ್ಲಿರುವ ಮಹದೇವಪುರದ ವಿವಿಧ ಸ್ಥಳಗಳಲ್ಲಿ ಗುಡುಸಲುಗಳನ್ನು ಹಾಕಿಕೊಂಡು ಬದುಕುತ್ತಿರುವ ನಿರಾಶ್ರಿತರ ಮೇಲೆ ಬಿಜೆಪಿಗರು ಅನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ. ರಾಜ್ಯ ಮತ್ತು ದೇಶದ ಇತರ ಭಾಗಗಳಿಂದ ಬಂದು ನೆಲೆಸಿರುವ ನಿರಾಶ್ರಿತರನ್ನುಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಆರೋಪಿಸಿದ್ದಾರೆ. ಅವರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ.
ಮಹದೇವಪುರ ಬಿಜೆಪಿ ವಿಭಾಗದ ಅಧ್ಯಕ್ಷ ಶ್ರೀಧರ್ ರೆಡ್ಡಿ ಮತ್ತು ಕೆಲವರು ಕಾರ್ಯಕರ್ತರು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತೂಬರಹಳ್ಳಿ, ಸಿದ್ದಾಪುರ ಹಾಗೂ ವಿವಿಧ ಸ್ಥಳಗಳಲ್ಲಿ ಬಾಡಿಗೆ ಜಾಗದಲ್ಲಿ ಶೆಡ್‌ಗಳನ್ನು ಹಾಕಿಕೊಂಡು ವಾಸಿಸುತ್ತಿರುವವರ ಮನೆಗಳಲ್ಲಿ ಅಕ್ರಮವಾಗಿ ಶೋಧ ನಡೆಸಿದ್ದಾರೆ. ಅಲ್ಲಿನ ನಿವಾಸಿಗಳ ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ ಸೇರಿದಂತೆ ಕೆಲವು ದಾಖಲೆಗಳನ್ನು ಪರಿಶೀಲಿಸಿ, ಅವರನ್ನು ಹೊರಹಾಕುವುದಾಗಿ ಮತ್ತು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ, “ಮಹದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರಜೆಗಳನ್ನು ಗುರುತಿಸಿ, ಅವರನ್ನು ಬಾಂಗ್ಲಾಗೆ ವಾಪಾಸ್ ಕಳಿಸಲು ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಅಭಿಯಾನ ಕೈಗೊಂಡಿದ್ದೇವೆ. ಕ್ಷೇತ್ರದಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ಶೋಧ ನಡೆಸುತ್ತಿದ್ದೇವೆ” ಎಂದು ಶೀಧರ್ ರೆಡ್ಡಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ | ಸುಪ್ರೀಂ ಆದೇಶ: ಪರ-ವಿರೋಧಗಳ ವಾಗ್ವಾದ
ಬಿಜೆಪಿಗರು ದಾಂಧಲೆ ನಡೆಸಿರುವ ಸ್ಥಳಗಳಿಗೆ ಕೆಲವು ವಕೀಲರು ಮತ್ತು ಸಂಘಟನೆಯ ಮುಖಂಡರು ಭೇಟಿ ನೀಡಿದ್ದು, ಅಲ್ಲಿ ವಾಸಿಸುತ್ತಿರುವ ನಿರಾಶ್ರಿತರ ಜನರು ಮತ್ತು ಅವರಿಗೆ ಬಾಡಿಗೆಗೆ ಭೂಮಿ ನೀಡಿದ ಭೂಮಾಲೀಕರೊಂದಿಗೆ ಚರ್ಚೆ ನಡೆಸಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಜನಶಕ್ತಿಯ ಚೆನ್ನಮ್ಮ, “ತೂಬರಹಳ್ಳಿ, ಸಿದ್ದಾಪುರ ಹಾಗೂ ಇತರ ಪ್ರದೇಶಗಳಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಯಾರೊಬ್ಬರೂ ಬಾಂಗ್ಲಾದಿಂದ ಅಕ್ರಮವಾಗಿ ಬಂದಿರುವವರಲ್ಲ. ಅವರೆಲ್ಲರೂ ಅಸ್ಸಾಂ ಸೇರಿದಂತೆ ದೇಶದ ನಾನಾ ಭಾಗಗಳು ಮತ್ತು ಕರ್ನಾಟಕದ ಕೆಲವ ಭಾಗಗಳಿಂದ ಬಂದಿರುವ ನಿರಾಶ್ರಿತರು. ಅವರನ್ನು ಅಕ್ರಮ ಬಾಂಗ್ಲಾ ವಲಸಿಗರೆಂದು ಆರೋಪಿಸಿ, ಅವರಿಗೆ ಕಿರುಕುಳ ನೀಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಭಾನುವಾರ ಮತ್ತೆ, ಸ್ಥಳಕ್ಕೆ ಭೇಟಿ ನೀಡುತ್ತೇವೆ. ನಿವಾಸಿಗಳೊಂದಿಗೆ ಚರ್ಚಿಸಿ, ಕಾನೂನಾತ್ಮಕವಾಗಿ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.