ಜು.15ರಂದು ಕರ್ನಾಟಕ ಸರ್ಕಾರ ವಚನಭ್ರಷ್ಟವಾಗದೆ ರೈತಪರ ತೀರ್ಪು ಕೈಗೊಳ್ಳಲು ಶೀಘ್ರ ಮಧ್ಯಪ್ರವೇಶಿಸುವಂತೆ ದೆಹಲಿಯ ಕಾಂಗ್ರೆಸ್ ವರಿಷ್ಠರನ್ನು ವಿಜ್ಞಾನಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸಾರ್ವಜನಿಕ ಬುದ್ಧಿಜೀವಿ ವಲಯದ ಪ್ರಮುಖರು ಸೇರಿದ ಜನಪರ ನಿಯೋಗ ಆಗ್ರಹಿಸಿದೆ.
ಇತಿಹಾಸಕಾರ ರಾಮಚಂದ್ರ ಗುಹಾ, ಹಿರಿಯ ಸಾಹಿತಿ ದೇವನೂರು ಮಹಾದೇವ, ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ, ಎಸ್ ಜಿ ಸಿದ್ದರಾಮಯ್ಯ, ಪರಿಸರವಾದಿ ಎಲ್ಲಪ್ಪ ರೆಡ್ಡಿ, ರಂಗಕರ್ಮಿ ಬಿ ಜಯಶ್ರೀ, ಅರುಂಧತಿನಾಗ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಭಾಷಾ ತಜ್ಞ ಗಣೇಶ್ ದೇವಿ, ಬಹುಭಾಷಾ ಚಿತ್ರನಟ ಕಿಶೋರ್ ಹಲವು ವಿಶ್ವವಿದ್ಯಾನಿಲಯಗಳ ಮಾಜಿ ಕುಲಪತಿಗಳು ಬೆಂಗಳೂರಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ನಾಗರೀಕ ಸಮಾಜದ ಪ್ರತಿನಿಧಿಗಳು ಒಗ್ಗೂಡಿ ದೆಹಲಿಯ ಕಾಂಗ್ರೆಸ್ ವರಿಷ್ಠರಿಗೆ ರೈತರ ಪರವಾಗಿ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
“ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ ರೈತರು “ನಾವು ಪ್ರಾಣವನ್ನಾದರೂ ಕೊಟ್ಟೆವು ಭೂಮಿಯನ್ನು ಕೊಡುವುದಿಲ್ಲ” ಎಂದು ಮೂರು ವರ್ಷಗಳಿಗೂ ಮೀರಿದ ಹೋರಾಟ ನಡೆಸುತ್ತಿರುವುದು ತಮಗೆ ತಿಳಿದೇ ಇದೆ. ಇಲ್ಲಿ ಭೂ ಒಡೆತನ, ಮಾರಾಟದ ಪ್ರಶ್ನೆ ಮಾತ್ರ ಅಡಗಿಲ್ಲ. ಇದು ಬೆಂಗಳೂರು ಮಹಾನಗರಕ್ಕೂ ಸೇರಿ ರಾಜ್ಯಕ್ಕೆ ಆಹಾರ, ತರಕಾರಿ, ಹಣ್ಣು, ಹಾಲು, ಹೂವನ್ನು ಸಮೃದ್ಧವಾಗಿ ಬೆಳೆದು ಪೂರೈಸುವ ಫಲತ್ತಾದ ಭೂಪ್ರದೇಶವಾಗಿರುವುದರಿಂದ ನಮ್ಮೆಲ್ಲರ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯ ವಿಚಾರ ಕೂಡ ಇಲ್ಲಿ ಅಡಗಿರುತ್ತದೆ. ಹಾಗಾಗಿ ಎಲ್ಲಾ ವರ್ಗಸಮುದಾಯಗಳ ಬೆಂಬಲ, ಸಹಾನುಭೂತಿ ಈ ಹೋರಾಟ ನಿರತ ರೈತರ ಪರವಾತ್ತದೆ. ರೈತರ ಈ ದೀರ್ಘ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ದಿನಾಂಕ 4 ರಂದು ಕರೆದು ಮಾತಾಡಿ ಇದೇ ತಿಂಗಳ 15ರಂದು ರೈತ ಪರ ತೀರ್ಮಾನಕ್ಕೆ ಬರುವುದಾಗಿ ಆಶ್ವಾಸನೆ ಕೊಟ್ಟಿರುವುದು ಸ್ವಗತಾರ್ಹ ವಿಚಾರವಾಗಿದ್ದರೂ ಸರ್ಕಾರದ ಕೆಲ ಮಂತ್ರಿಗಳು ನಂತರ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನು ನೋಡಿದಲ್ಲಿ ಸರ್ಕಾರದ ಪ್ರಾಮಾಣಿಕತೆ ಬಗ್ಗೆ ಸಂಶಯ ಏಳುವಂತೆ ಮಾಡುತ್ತದೆ” ಎಂದು ವಿವರಿಸಿದ್ದಾರೆ.
ಕೈಗಾರಿಕೆ ಅಭಿವೃದ್ಧಿಗಾಗಿ ಕೆಐಎಡಿಬಿ ರೈತರಿಂದ ಭೂಮಿ ವಶಪಡಿಸಿಕೊಳ್ಳುತ್ತಿರುವ ಈ ವ್ಯವಸ್ಥೆಯೇ ಸಮರ್ಪಕವಾಗಿಲ್ಲ, ಪಾರದರ್ಶಕದ ಕೊರತೆ ಅವ್ಯವಹಾರಗಳಿಗೆ ದಾರಿ ಮಾಡಿಕೊಡುವ ಹಾಗಿದೆ. ಇವೆಲ್ಲವನ್ನೂ ಇತ್ತೀಚೆಗಿನ ಸಿಎಜಿ ವರದಿ ಬಹಿರಂಗಪಡಿಸಿರುತ್ತದೆ ಮಾತ್ರವಲ್ಲ ಉಚ್ಚ ನ್ಯಾಯಾಲಯ ಕೂಡ ಮಧ್ಯಪ್ರವೇಶಿಸಿ ಸರ್ಕಾರದ ವಿರುದ್ಧ ತೀರ್ಪು ನೀಡಿರುವ, ವಿಚಾರಗಳೆಲ್ಲವನ್ನು ವಿವರವಾಗಿ ಪ್ರಸ್ತಾಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? : ಈ ದಿನ ಸಂಪಾದಕೀಯ | ಕೈಗಾರಿಕೆಯಲ್ಲಿ ತಮಿಳುನಾಡು ಮಾದರಿ ಅಳವಡಿಸಿಕೊಳ್ಳಲಿ ಕರ್ನಾಟಕ
“ಶೇ.80 ರಷ್ಟು ರೈತರು ಭೂಮಿಯನ್ನು ಕೂಡಲು ಸಹಮತ ತೋರಿಸಿಲ್ಲ. ಹಾಗಿದ್ದರೂ ಭೂಮಿ ಪಡೆಯಲು ಹೊರಟಿರುವುದು ತಮ್ಮದೇ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ತಂದಿರುವ ಕಾಯ್ದೆಗೆ ಸಂಪೂರ್ಣ ವಿರುದ್ಧವಾಗಿರುವ ಇತ್ಯಾದಿ ವಿಚಾರಗಳೆಲ್ಲವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಚನ್ನರಾಯಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಎತ್ತಿಹಿಡಿದಿರುವ ಸಾಮಾಜಿಕ ನ್ಯಾಯದ ತತ್ವಕ್ಕೆ ತಿಲಾಂಜಲಿಯಾಗಿದೆ. ಇವೆಲ್ಲವನ್ನೂ ಸರಿಪಡಿಸುವ ಭರವಸೆಯನ್ನು ವಿರೋಧ ಪಕ್ಷದಲ್ಲಿದ್ದ ಹಾಲಿ ಮುಖ್ಯಮಂತ್ರಿಗಳು ನೀಡಿದ್ದರು. ರಾಜ್ಯದ ಭೂ ಸುಧಾರಣೆ ಕಾಯ್ದೆಗೆ ಹಿಂದಿನ ಸರ್ಕಾರ ತಂದಿರುವ ಮಾರಕ ತಿದ್ದುಪಡಿಗಳನ್ನು ಸರಿಪಡಿಸಿ ರೈತಪರ ನೀತಿ ನಿಲುವುಗಳನ್ನು ರೂಪಿಸುವ ಭರವಸೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಲಾಗಿರುತ್ತದೆ. ಹಾಗಿದ್ದರೂ ಎರಡುವರೆ ವರ್ಷಗಳ ಅವಧಿ ಮುಗಿದರು ಸರ್ಕಾರ ಗಮನಹರಿಸಿದೆ ಕೊಟ್ಟಿರುವ ವಚನವನ್ನು ಪಾಲಿಸುತ್ತಿಲ್ಲ” ಎಂದು ದೂರು ಸಲ್ಲಿಸಲಾಗಿದೆ.
ರೈತರು ಮತ್ತು ಕೈಗಾರಿಕಾ ವಲಯಗಳ ಅಭಿಪ್ರಾಯ ಸಲಹೆ ಸೂಚನೆ ಪಡೆದು ರಾಜ್ಯದ ಆಹಾರ ಭದ್ರತೆ ಮತ್ತು ರೈತರ ಹಿತಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೈಗಾರಿಕೆಗೆ ಅತ್ಯಗತ್ಯವಾಗಿರುವ ಭೂ ಖರೀದಿ ವ್ಯವಹಾರದ ನಿಟ್ಟಿನಲ್ಲಿ ಸಮಗ್ರ ನೀತಿ ರೂಪಿಸಿ, ಮತ್ತು ಈ ಮೂಲಕ ದೇಶಕ್ಕೆ ಒಂದು ಮಾದರಿ ನೀತಿಯನ್ನು ಕರ್ನಾಟಕ ಸರ್ಕಾರ ಜು.15 ರಂದು ಮುಂದಿಡಲಿ” ಎಂದು ಜನಪರ ನಿಯೋಗ ಆಗ್ರಹಿಸಿದೆ.
