ಮೈಸೂರಿನಲ್ಲಿ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಮಂಡಳಿ ಹಾಗೂ ವಿಧಾನಸಭಾ ಕ್ಷೇತ್ರದ ಮುಖಂಡರಿಂದ ಎಂಸಿಸಿ ಚುನಾವಣೆ ಸಂಬಂಧವಾಗಿ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಜಿಲ್ಲಾ, ವಿಧಾನಸಭಾ ಹಾಗೂ ಬೂತ್ ಮಟ್ಟದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ ಮುಂಬರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ವಿಶೇಷವಾಗಿ ಮೈಸೂರು ಎಂಸಿಸಿ ಚುನಾವಣೆಗಳ ಪೂರ್ವ ತಯಾರಿಗಳ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಸಂಘಟನಾ ಸ್ಥಿತಿಗತಿ, ಬೂತ್ ಹಾಗೂ ವಾರ್ಡ್ ಮಟ್ಟದ ಕಾರ್ಯಯೋಜನೆ, ಸಮಿತಿಗಳ ವರದಿಗಳು ಹಾಗೂ ಜವಾಬ್ದಾರಿಗಳ ಹಂಚಿಕೆ ಕುರಿತು ವಿಶ್ಲೇಷಣೆ ನಡೆಯಿತು.
ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡುತ್ತಾ, ‘ ಸ್ಥಳೀಯ ಸಂಸ್ಥೆ ಚುನಾವಣೆಗಳ ವಿಳಂಬ ಮತ್ತು ಆಡಳಿತದ ನಿರ್ಲಕ್ಷ್ಯಕ್ಕೆ ನಾವು ಬಲಿಷ್ಠ ಉತ್ತರ ನೀಡಬೇಕು ‘ ಎಂದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಆಫ್ಸರ್ ಕೊಡ್ಲಿಪೇಟೆ ಮಾತನಾಡಿ, ‘ ಬೂತ್ ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಎಸ್ಡಿಪಿಐ ಗೆ ಪ್ರಮುಖ ಆಯಾಮ. ಪ್ರತಿ ಕಾರ್ಯಕರ್ತನು ಬೂತ್ ಗೆಲುವು, ನನ್ನ ನಿಲುವು ಎಂಬ ಘೋಷಣೆಯಡಿ ನಿರಂತರ ಶ್ರಮಿಸಬೇಕು ‘ ಎಂದು ಕಿವಿಮಾತು ಹೇಳಿದರು.

ಸಭೆಯ ಅಂತಿಮದಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದ ಸಂಘಟನೆ ಬಲವರ್ಧನೆಗಾಗಿ ತಂತ್ರಮೂಲಕ ಪ್ರಸ್ತಾವನೆಗಳನ್ನು ಮಂಡಿಸಿದರು. ಕ್ಷೇತ್ರವಾರು ತಂತ್ರ ಹಾಗೂ ಮುಂದಿನ ಹಂತದ ಚಟುವಟಿಕೆಗಳನ್ನು ಚುರುಕುಗೊಳಿಸಲು ಶೀಘ್ರದಲ್ಲೇ ಬೂತ್ ಮಟ್ಟದ ಕಾರ್ಯಕರ್ತರಿಗೆ ಒಂದು ದಿನದ ಚುನಾವಣಾ ನಿರ್ವಹಣಾ ತರಬೇತಿ ಕಾರ್ಯಾಗಾರ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜುಲೈ.19 ರಂದು ಬೃಹತ್ ಸಮಾವೇಶ; ಸಚಿವ ಮಹದೇವಪ್ಪರಿಂದ ಪೂರ್ವಭಾವಿ ಸಭೆ
ಜಿಲ್ಲಾಧ್ಯಕ್ಷ ರಫತ್ ಖಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಹಾಗೂ ಎಂಸಿಸಿ ಚುನಾವಣೆ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಕಾರ್ಯದರ್ಶಿಗಳಾದ ಅಪ್ಸರ್ (ಕೆ.ಆರ್.ನಗರ) ಮತ್ತು ಅಕ್ರಮ್ ಮೌಲಾನಾ, ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಸಫಿ ಉಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಫಿರ್ದೋಸ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅಜೀಮ್, ಕಾರ್ಯದರ್ಶಿ ಫರ್ದೀನ್ ಮತ್ತು ಅಕ್ಬರ್ ರವರು ಹಾಗೂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿ ಇದ್ದರು.