ಕೋಲಾರದ ಕೆಂದಟ್ಟಿ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳಪೆಮಟ್ಟದ ಯಂತ್ರ ಅಳವಡಿಕೆ ಮಾಡಲಾಗಿದ್ದು, ಕೋಲಾರ ನಗರಸಭೆಯಲ್ಲಿ ಡೀಸೆಲ್ ಮಾಫಿಯಾ ನಡೆಯುತ್ತಿರುವುದಾಗಿ ನಗರಸಭೆ ಸದಸ್ಯ ಮುರಳಿ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ಕೋಲಾರ ನಗರದಲ್ಲಿ ಸಾಕಷ್ಟು ಕಸ ಶೇಖರಣೆ ಆಗುತ್ತಿತ್ತು. ಈ ಕಸ ವಿಲೇವಾರಿ ಮಾಡುವುದಕ್ಕೆ ಜಾಗ ಇರಲಿಲ್ಲ. ಅದನ್ನು ಗಮನಿಸಿ ಹಿಂದೆ ಇದ್ದಂತಹ ಕೋಲಾರ ಜಿಲ್ಲಾಧಿಕಾರಿ ಸತ್ಯವತಿಯವರು ಸುಮಾರು 16 ಎಕರೆ ಜಮೀನು ಮಂಜೂರು ಮಾಡಿದ್ದು, ಸ್ಥಳೀಯ ಕೆಲವರು ದಾರಿ ಬಿಡದಂತೆ ಸಮಸ್ಯೆ ಮಾಡಿದ್ದಾರೆ. ಅಲ್ಲದೆ ನ್ಯಾಯಾಲಯಕ್ಕೆ ಹೋಗಿದ್ದಾರೆ. ತದನಂತರ ಬಂದ ಕೋಲಾರ ಜಿಲ್ಲಾಧಿಕಾರಿಗಳಾದ ಮಂಜುನಾಥ್ ಹಾಗೂ ಸೆಲ್ವಮಣಿ ಅವರು ಸಮಸ್ಯೆಗಳನ್ನೆಲ್ಲ ಬಗೆಹರಿಸಿ ಹೈಕೋರ್ಟ್‌ನಲ್ಲಿದ್ದ ಪ್ರಕರಣವನ್ನು ಕ್ಲಿಯರ್ ಮಾಡಿಸಿ ಕೋಲಾರ ನಗರಸಭೆಗೆ ಜಾಗವನ್ನು ನೀಡಿದ್ದಾರೆ.
ಕೋಲಾರ ನಗರಸಭೆಗೆ ಬಂದ ಅನುದಾನಗಳಲ್ಲಿ ಹಂತ ಹಂತವಾಗಿ ತ್ಯಾಜ್ಯ ವಿಲೇವಾರಿ ಘಟಕವನ್ನು ಅಭಿವೃದ್ಧಿ ಮಾಡಲಾಯಿತು. ಆದರೆ ಅಲ್ಲಿ ಕೆಲವೊಂದು ಕಳಪೆಮಟ್ಟದ ಯಂತ್ರ ಅಳವಡಿಸಿರುವ ಕಾರಣ ಯಂತ್ರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಕೋಲಾರದಲ್ಲಿ ದಿನಕ್ಕೆ 65 ರಿಂದ 70 ಟನ್ ಮೇಲ್ಪಟ್ಟು ಕಸ ಸಂಗ್ರಹಣೆಯಾಗುತ್ತದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇರುವ ಯಂತ್ರದಿಂದ ಸುಮಾರು 80 ಟನ್ ಕಸ ವಿಲೇವಾರಿ ಮಾಡಬಹುದು. ಆದರೆ ಕಳಪೆ ಮಟ್ಟದ ಯಂತ್ರ ಅಳವಡಿಸಿರುವ ಕಾರಣ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ.

ಕೋಲಾರದ ಕೆಲವು ಬಡಾವಣೆಗಳಲ್ಲಿ ಸಾರ್ವಜನಿಕರು ಕಸವನ್ನು ವಿಲೇವಾರಿ ವಿಂಗಡನೆ ಮಾಡಿ ಕಸವನ್ನು ನಗರಸಭೆ ವಾಹನಕ್ಕೆ ಕೊಡುತ್ತಾರೆ. ಇನ್ನೂ ಕೆಲವರು ಹಾದಿ ಬೀದಿಯಲ್ಲಿ ಬಿಸಾಕುತ್ತಾರೆ. ಆ ಕಸವನ್ನು ನಗರಸಭೆ ಪೌರಕಾರ್ಮಿಕರಿಂದ ಹಾದಿ ಬೀದಿಯಲ್ಲಿ ಕಸ ವಿಂಗಡಣೆ ಮಾಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಈ ಕೆಲಸ ಮಾಡಲು 15 ಜನ ಕಾರ್ಮಿಕರು ಇದ್ದು, ಅವರೇ ಕಸ ವಿಂಗಡಣೆ ಮಾಡುವ ಕೆಲಸ ಮಾಡಬೇಕು. ರಸ್ತೆಯಲ್ಲಿಯೇ ಪೌರ ಕಾರ್ಮಿಕರಿಂದ ಈ ರೀತಿ ಕೆಲಸ ಮಾಡಿಸದರೆ ಮುಜುಗರವಾಗುತ್ತದೆ.
ಕೆಲವು ಸಾರ್ವಜನಿಕರು ಮಾಡುವ ತಪ್ಪಿಗೆ ಪೌರ ಕಾರ್ಮಿಕರಿಂದ ಬೀದಿಯಲ್ಲೇ ಕಸ ವಿಂಗಡಣೆ ಮಾಡುವ ಕೆಲಸ ನಗರಸಭೆ ಅಧಿಕಾರಿಗಳು ಮಾಡದೆ ಕಸ ವಿಂಗಡಣೆ ಮಾಡುವ ಜಾಗದಲ್ಲಿ ಮಾತ್ರ ಮಾಡಬೇಕು.

ತ್ಯಾಜ್ಯ ವಿಲೇವಾರಿ ಘಟಕದಲ್ಲೇ ಕಸ ವಿಂಗಡಣೆ ಮಾಡಿ ಅದರಿಂದ ಗೊಬ್ಬರ ಮಾಡಿ, ಮಾರಾಟ ಮಾಡಬೇಕು. ಇದು ಕೋಲಾರದ ಎಲ್ಲ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇದೆ. ಕಸ ವಿಲೇವಾರಿ ಘಟಕ ಪರಿಶೀಲನೆ ಮಾಡಿದರೆ ನಗರದಲ್ಲಿ ಕಸದ ಸಮಸ್ಯೆಯೇ ಇರುವುದಿಲ್ಲ ಎಂದು ಕೋಲಾರ ನಗರಸಭೆ ಸದಸ್ಯ ಮುರಳಿ ಗೌಡರು ಅಭಿಪ್ರಾಯಪಟ್ಟರು.
ಕೋಲಾರ ನಗರಸಭೆಯಲ್ಲಿ ಡಿಸೇಲ್ ಮಾಫಿಯಾ
ಕೋಲಾರ ನಗರಸಭೆ ಡೀಸೆಲ್ ಮಾಫಿಯಾ ಪ್ರಾರಂಭವಾಗಿದೆ. ವಾಹನಕ್ಕೆ 30 ಲೀಟರ್ ಡೀಸೆಲ್ ಹಾಕುವ ಬದಲು ಕೇವಲ 15 ಲೀಟರ್ ಡೀಸೆಲ್ ಹಾಕಿಕೊಂಡು ಕೇವಲ ಒಂದು ಲೋಡ್ ಕಸ ಹಾಕ್ಬಿಟ್ಟು ಸುಮ್ಮನಿರುತ್ತಾರೆ. ಅದನ್ನು ಯಾವುದಾದ್ರೂ ಹತ್ತಿರದಲ್ಲೇ ಇರುವ ಕೆರೆ, ಕಾಲುವೆಗೆ ಹಾಕಿ ಬಿಡ್ತಾರೆ. ಕೋಲಾರ ನಗರಸಭೆಯಲ್ಲಿ ಡೀಸೆಲ್ ದಂಧೆ ಹೆಚ್ಚಾಗಿದೆ. ಕೆಲವು ಅಧಿಕಾರಿಗಳೂ ಕೂಡ ಡೀಸೆಲ್ ದಂಧೆಯಲ್ಲಿ ಶಾಮೀಲಾಗಿದ್ದಾರೆ.

“ಕೋಲಾರಕ್ಕಿಂತ ಕೆಜಿಎಫ್ ದೊಡ್ಡನಗರ. ಇಲ್ಲಿ ಉಂಟಾಗುವ ಡೀಸೆಲ್ ಖರ್ಚಿಗಿಂತ ದುಪ್ಪಟ್ಟು ಡೀಸೆಲ್ ಕೋಲಾರದಲ್ಲಿ ಖರ್ಚಾಗುತ್ತಿದೆ. ಸುಮಾರು ಬಾರಿ ದೂರು ಕೊಟ್ಟರು ಯಾವುದೇ ಪ್ರಯೋಜನ ಆಗಲಿಲ್ಲ, ನಾನೇ ನಗರಸಭೆಯಲ್ಲಿ ಗಲಾಟೆ ಮಾಡಿ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದೆ. ಅದನ್ನೂ ಕೂಡ ಅಧಿಕಾರಿಗಳೇ ಜಿಪಿಎಸ್ ಕಿತ್ತು ಕಾಹಿದ್ದಾರೆ” ಎಂದು ನಗರಸಭೆ ಸದಸ್ಯ ಮುರಳಿ ಗೌಡ ಗಂಭೀರ ಆರೋಪ ಮಾಡಿದರು.
“ಕೆಲವು ಅಧಿಕಾರಿಗಳು ನಮ್ಮನ್ನು ಯಾಮಾರಿಸಿ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ, ನಾನೂ ಕೂಡ ಬೇರೆ ತಾಲೂಕಿಗೆ ಭೇಟಿ ನೀಡಿ ಯಂತ್ರವನ್ನು ನೋಡಿಕೊಂಡು ಬಂದಿದ್ದೇನೆ. ಪಕ್ಕದ ಬಂಗಾರಪೇಟೆಯಲ್ಲಿರುವ ಯಂತ್ರದ ಶೇಕಡಾ 50ರಷ್ಟು ಕ್ವಾಲಿಟಿ ಕೋಲಾರದಲ್ಲಿ ಅಳವಡಿಸಿರುವ ಯಂತ್ರದಲ್ಲಿಲ್ಲ. ಕಳಪೆ ಮಟ್ಟದ ಯಂತ್ರವನ್ನು ಅಳವಡಿಕೆ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಹೆಚ್ಚು ಗಮನವಹಿಸಿ ಪರಿಶೀಲನೆ ಮಾಡಬೇಕು” ಎಂದು ಹೇಳಿದರು.

“ನಗರಸಭೆಯ ವಾಹನಗಳು ಎಲ್ಲಿಗೆ ಹೋಗುತ್ತೆ, ಎಲ್ಲಿ ಬರುತ್ತೆ ಎನ್ನುವ ಮಾಹಿತಿಯೇ ಇದ್ದಂಗೆ ಆಗಿದೆ ಈ ಕೂಡಲೇ ನಗರಸಭೆ ಅಧಿಕಾರಿಗಳು ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿ ಡೀಸೆಲ್ ಸೋರಿಕೆ ತಡೆಗಟ್ಟಬೇಕು. ಕೋಲಾರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ವಿಶಾಲವಾಗಿರುವ ಕಾರಣ ಎಲ್ಲ ಕಸವನ್ನೂ ಅಲ್ಲೇ ಹಾಕಬೇಕು. ಈ ರೀತಿಯಲ್ಲಿ ಕೆಲಸ ಮಾಡಿದರೆ ಕೋಲಾರದಲ್ಲಿ ಕಸದ ಸಮಸ್ಯೆಯೇ ಇರುವುದಿಲ್ಲ” ಎಂದು ಹೇಳಿದರು.
ಕೋಲಾರ ತ್ಯಾಜ್ಯ ವಿಲೇವಾರಿ ಘಟಕದ ಮೇಲೆ ಮಾಡಿರುವ ಆರೋಪ ಸುಳ್ಳು
ಕೋಲಾರ ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೋಲಾರದ ತಾಜ್ಯ ವಿಲೇವಾರಿ ಘಟಕ ಮೇಲೆ ಮಾಡಿರುವ ಆರೋಪ ಸುಳ್ಳು, ಕೋಲಾರ ನಗರಸಭೆಗೆ ಬಹಳಷ್ಟು ವರ್ಷಗಳಿಂದ ತಾಜ್ಯ ವಿಲೇವಾರಿ ಘಟಕ ಇರಲಿಲ್ಲ. ಜಿಲ್ಲಾಧಿಕಾರಿಗಳು ಒಳ್ಳೆಯ ಜಾಗವನ್ನು ಕೊಟ್ಟಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲಾಗಿದೆ” ಎಂದು ತಿಳಿಸಿದರು.

“ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ನಿಟ್ಟಿನಲ್ಲಿ ನಗರದಲ್ಲಿ ಉತ್ಪತ್ತಿಯಾಗುವ ಹಸಿಕಸ, ಒಣ ಕಸವನ್ನು ಬೇರ್ಪಡಿಸಿ, ಸಂಗ್ರಹ ಮಾಡಿದ ಕಸವನ್ನು ವೈಜ್ಞಾನಿಕವಾಗಿ ಸಾವಯವ ಗೊಬ್ಬರ ಮಾಡಬೇಕು. ಆ ಗೊಬ್ಬರವನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಮಾಡಿಸಿ ಸಾವಯವ ಗೊಬ್ಬರ ಮಾರಟ ಮಾಡಲು ರಾಜ್ಯದಲ್ಲೇ ಪ್ರಥಮವಾಗಿ ನಮ್ಮ ಕೋಲಾರದಲ್ಲಿ ಮಳಿಗೆ ಪ್ರಾರಂಭ ಮಾಡಿದ್ದೇವೆ” ಎಂದು ತಿಳಿಸಿದರು.

“ಈಗ ಸಣ್ಣ, ಪುಟ್ಟ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಬಗೆಹರಿಸುತ್ತೇವೆ. 15 ದಿನದ ಹಿಂದೆ ಮಷಿನ್ ಕೆಟ್ಟುಹೋಗಿತ್ತು. ವಾರದ ಹಿಂದೆಷ್ಟೇ ನಮಗೆ ಗುತ್ತಿಗೆದಾರರೂ ಕೂಡ ಸಹಕಾರ ಕೊಟ್ಟು ರಿಪೇರಿ ಮಾಡಿ ಕೊಟ್ಟಿದ್ದಾರೆ. ಪ್ರತಿ ದಿನ 6 ರಿಂದ 7 ಟನ್ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತನೆ ಮಾಡಿ, ನಾವು ಮಾರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಕೋಲಾರ ನಗರಸಭೆಯಲ್ಲಿ ಡೀಸೆಲ್ ಮಾಫಿಯಾ ಆರೋಪ ಬಂದಮೇಲೆ ನಾವು ಸಹಜವಾಗಿ ಪರಿಶೀಲನೆ ಮಾಡುತ್ತಿದ್ದೇವೆ. ಆ ರೀತಿ ನಡೆದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡುತ್ತೇವೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ಸುಪ್ರೀಂ ಕೋರ್ಟ್ ಹಾಗೂ ಭಾರತ ಸರ್ಕಾರದ ಘನತ್ಯಾಜ್ಯ ವಿಲೇವಾರಿ 2016 ರೂಲ್ಸ್ ಪ್ರಕಾರ ಕಸವನ್ನು ಉತ್ಪತ್ತಿ ಮಾಡುವ ಪ್ರತಿಯೊಬ್ಬರೂ ಕಸವನ್ನು ವಿಂಗಡನೆ ಮಾಡಿ ಸಂಬಂಧಪಟ್ಟ ಇಲಾಖೆ ಅಥವಾ ನಗರಸಭೆಗೆ ನೀಡುವುದು ಅವರ ಆದ್ಯ ಕರ್ತವ್ಯವಾಗಿದೆ.
ಇದನ್ನೂ ಓದಿದ್ದೀರಾ? ಮೋದಿಯ ʼಪರೀಕ್ಷಾ ಪೆ ಚರ್ಚಾʼದ ವೆಚ್ಚ ಶೇ.522ರಷ್ಟು ಏರಿಕೆ: ಮಕ್ಕಳ ವಿದ್ಯಾರ್ಥಿವೇತನ ಸ್ಥಗಿತ
“ಕಸವನ್ನು ವಿಂಗಡಣೆ ಮಾಡಿ ನಗರಸಭೆ ವಾಹನಕ್ಕೆ ನೀಡಬೇಕು. ಇಲ್ಲದಿದ್ದರೆ ದಂಡ ಹಾಕುತ್ತೇವೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಕುವಂತಿಲ್ಲ, ನಗರಸಭೆ ವಾಹನಕ್ಕೆ ಕಸ ವಿಂಗಡಣೆ ಮಾಡಿ ನೀಡಬೇಕು ಅದರಲ್ಲಿರುವ ಹಸಿ ಕಸವನ್ನು ಗೊಬ್ಬರ ಮಾಡುತ್ತೇವೆ. ಒಣ ಕಸವನ್ನು ರಿಸೈಕಲ್ ಮಾಡಿ ರಿಯೂಸ್ ಮಾಡುವುದಕ್ಕೆ ಮಾಡುತ್ತೇವೆ” ಎಂದು ಕೋಲಾರ ನಗರಸಭೆ ಪೌರಾಯುಕ್ತರು ತಿಳಿಸಿದರು.