ಚಿನ್ನ ತೆಗೆಯುವ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಶುದ್ದ ಕುಡಿಯುವ ನೀರು ಸೇರಿ ನಾನಾ ವಿವಿಧ ಮೂಲಭೂತ ಸೌಕರ್ಯಗಳನ್ನು ಬಗೆಹರಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದಿಂದ ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇಂದು ಲಿಂಗಸುಗೂರು ತಾಲ್ಲೂಕು ಹಟ್ಟಿ ಪಟ್ಟಣಕ್ಕೆ ಆಗಮಿಸಿದ ಸಚಿವರಿಗೆ ಮನವಿ ಸಲ್ಲಿಸಿ ದೇಶದಲ್ಲಿಯೇ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ದೊಡ್ಡ ಗಣಿಯನ್ನು ಹೊಂದಿದ್ದರೂ, ಪಟ್ಟಣದ ನಿವಾಸಿಗಳು ಮಾತ್ರ ಕನಿಷ್ಠ ಆರೋಗ್ಯ ಶಿಕ್ಷಣ, ಶುದ್ಧ ಕುಡಿಯುವ ನೀರು, ಉತ್ತಮ ಪರಿಸರದಂತಹ ಅಗತ್ಯ ಸೌಕರ್ಯಗಳಿಲ್ಲದೇ ಪಟ್ಟಣವು ತಿಪ್ಪೆಯಂತಾಗಿ ಜನರಿಗೆ ರೋಗ ಭೀತಿ ಕಾಡುತ್ತಿದೆ ಎಂದು ಆರೋಪಿಸಿದರು.
“ಸ್ವಚ್ಛತೆ ಇಲ್ಲದೆ, ಪಟ್ಟಣದ ಕೆಲವು ಮುಖ್ಯ ರಸ್ತೆಗಳಲ್ಲಿ ಗಬ್ಬು ನಾರುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಬರುವ ಹಟ್ಟಿ ವಿಲೇಜ್‌ನಲ್ಲಿ ಕುಡಿಯುವ ನೀರಿಗಾಗಿ ಸುಮಾರು ವರ್ಷಗಳಿಂದ ಸಿಪಿಎಂ ಸೇರಿ ಎಸ್ಎಫ್ಐ, ಡಿವೈಎಫ್ಐ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳಿಂದ ಹೋರಾಟ ಮಾಡಿದರೂ ಅಧಿಕಾರಿಗಳು, ಶಾಸಕರು ಕಂಡು ಕಾಣದ ಕುರುಡರಂತೆ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕನಿಷ್ಟ ಪದವಿ ಶಿಕ್ಷಣ ಪಡೆಯಲು ಪದವಿ ಕಾಲೇಜು ಇಲ್ಲದಂತಾಗಿದೆ. ಅಲ್ಲದೇ ಇಲ್ಲಿಯೇ ಚಿನ್ನದ ಗಣಿ ಇದ್ದರೂ ಮೌನಿಂಗ್ ಕಾಲೇಜು, ಐಟಿಐ ಕಾಲೇಜುಗಳು ಇಲ್ಲದೇ ಶಿಕ್ಷಣಕ್ಕಾಗಿ ದೂರದ ಬೇರೆ ಬೇರೆ ನಗರಗಳಿಗೆ ಪ್ರಯಾಣ ಮಾಡಬೇಕಿದೆ. ಇದರಿಂದ ಇಲ್ಲಿನ ಕಾರ್ಮಿಕ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಅಲ್ಲದೇ ಕುಡಿಯಲು ನೀರಲ್ಲದೆ ಹಟ್ಟಿಯನ್ನು ತ್ಯಜಿಸಿ ಪಕ್ಕದ ಹಳ್ಳಿಗೆ ಗುಳೆ ಹೊರಟಿದ್ದಾರೆ. ಇಲ್ಲಿ ವಾಸಿಸುವ ಕುಟುಂಬಗಳು ನಿತ್ಯವೂ ನೀರಿಗಾಗಿ ಸೈಕಲ್, ಬೈಕ್, ಟ್ಯಾಂಕರ್, ಆಟೋಗಳನ್ನು ಅವಲಂಬಿಸಿ, ಕಿಲೋಮೀಟರ್‌ಗಟ್ಟಲೆ ಅಲೆದು ನೀರು ತರುವಂತಾಗಿದೆ. ಇದರಿಂದ ಜನರ ಜೀವನ ತೀವ್ರ ಅಸ್ತ ವ್ಯಸ್ತಗೊಂಡಿದೆ. ಹಲವು ಬಡಾವಣೆಗಳಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿ, ಸ್ವಚ್ಛತೆ, ಬೀದಿದೀಪ ಅಳವಡಿಕೆ, ಕುಡಿಯುವ ನೀರಿನ ಸಮಸ್ಯೆಗಳು ತಾರಕಕ್ಕೇರಿವೆ ಎಂದರು.
ಹಟ್ಟಿ ಪಟ್ಟಣ ಮತ್ತು ರಸ್ತೆಗಳು ಕೋಳಿ ಪುಚ್ಚ ಪ್ಲಾಸ್ಟಿಕ್ ಸೇರಿದಂತೆ ಇತರೆ ವಸ್ತುಗಳಿಂದ ಮಲೀನವಾಗಿದ್ದು, ಕೂಡಲೇ ಈ ಕಸ ವಿಲೇವಾರಿ ಘಟಕ ನಿರ್ಮಿಸಿ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ನೈರ್ಮಲ್ಯ ಕಾಪಾಡಿ ಜನರ ಆರೋಗ್ಯ ಕಾಪಾಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಹಟ್ಟಿಯಲ್ಲಿ ಸತ್ತ ಹೆಣಗಳನ್ನು ಹೂಳಲು ಸ್ಮಶಾನ ಭೂಮಿ ಇಲ್ಲದಂತಾಗಿದೆ. ಕೂಡಲೇ ಭೂಮಿಯನ್ನು ಖರೀದಿಸಿ ಸ್ಮಶಾನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಹಟ್ಟಿ ಪಟ್ಟಣದಲ್ಲಿ ಮಟಕಾ, ಗಾಂಜಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು ಸಂಪೂರ್ಣವಾಗಿ ಇವುಗಳಿಗೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ವಿದ್ಯಾರ್ಥಿ ಯುವಜನರ ಭವಿಷ್ಯ ರೂಪಿಸಲು ಉತ್ತಮ ವ್ಯವಸ್ಥೆ ಇರುವ ವ್ಯವಸ್ಥಿತವಾದ ಗ್ರಂಥಾಲಯವನ್ನು ನಿರ್ಮಿಸಬೇಕು. ಹಟ್ಟಿ ಪಟ್ಟಣದಲ್ಲಿ ಎಲ್ಲ ಸಿಎ ಸೈಟುಗಳನ್ನು ಒತ್ತುವರಿ ಮಾಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ನಾಗರಿಕ ಸೌಲಭ್ಯಕ್ಕೆ ಅನುಕೂಲವಾಗುವ ಗ್ರಂಥಾಲಯ, ಪಾರ್ಕ್, ಭವನಗಳನ್ನು ನಿರ್ಮಿಸಬೇಕು ಹಾಗೂ ಹಟ್ಟಿಯ ಸರ್ವಾಂಗೀಣ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಹಟ್ಟಿ ಪಟ್ಟಣವನ್ನು ಐಟೆಕ್ ನಗರವಾಗಿಸಬೇಕು. ಇದಕ್ಕೆ ಬೇಕಿರುವ ಅಗತ್ಯ ಅನುದಾನ ನೀಡಿ ಸಮರ್ಪಕ ಬಳಕೆಯಾಗುವಂತೆ ನೋಡಿಕೊಳ್ಳಬೇಕೆಂದು ಸಿಪಿಎಂ ಲಿಂಗಸ್ಗೂರು ತಾಲೂಕು ಸಮಿತಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಲಿಂಡರ್ ಸ್ಪೋಟ; ಹೋಟೆಲ್ ಭಸ್ಮ
ಈ ಸಂಧರ್ಭದಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಪಕ್ಷದ ಸದಸ್ಯರಾದ ಪೆಂಚಲಯ್ಯ, ವೆಂಕೋಬ ಕಲ್ಲು, ನಿಂಗಪ್ಪ ವೀರಾಪೂರು, ಹಾಜಿಬಾಬು ಕಟ್ಟಿಮನಿ, ಸಂಗಪ್ಪ, ಖಾಜಾ, ಅಲ್ಲಾಭಕ್ಷ, ಮಿಯಾಸಾಬ್, ಶಿವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
