ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಕುತ್ತು ಬಂದಂತಾಗಿದೆ. ನಗರ ಸಂಚಾರ ಪೊಲೀಸರು ವ್ಹೀಲಿಂಗ್ ಮಾಡುವವರನ್ನು ಬಂಧಿಸುತ್ತಿದ್ದಾರೆ ಮತ್ತು ದಂಡ ವಿಧಿಸುತ್ತಿದ್ದಾರೆ. ಆದರೂ, ಯುವಕರ ಅತಿರೇಕದ ಹುಚ್ಚಾಟಕ್ಕೆ ಕೊನೆ ಇಲ್ಲದಂತಾಗಿದೆ. ಇದೀಗ ನಗರದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಯುವಕನೊಬ್ಬ ವ್ಹೀಲಿಂಗ್ ಮಾಡಿದ್ದು, ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಥರ್ಡ್ ಐ ಎಂಬ ಯುಟ್ಯೂಬರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.
“ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವ್ಯಕ್ತಿಯೊಬ್ಬ ವ್ಹೀಲಿಂಗ್ ಮಾಡುತ್ತಿದ್ದಾನೆ. ವಿಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ವ್ಹೀಲಿಂಗ್ ಮಾಡುತ್ತಿರುವ ಬೈಕ್‌ನ ನಂಬರ್ ಪ್ಲೇಟ್ ಇಲ್ಲ. ಆದರೆ, ನಾನು ಗಾಡಿಯ ನಂಬರ್ ಕಂಡು ಹಿಡಿದಿದ್ದೇನೆ. ಬೈಕ್ ನ ನೋಂದಣಿ ಸಂಖ್ಯೆ KA53HB3623 ಇಂತಿದೆ” ಎಂದು ಥರ್ಡ್ ಐ ಯುಟ್ಯೂಬರ್ ಟ್ವೀಟ್ ಮಾಡಿದ್ದಾರೆ.
“ಇಂತಹ ವ್ಹೀಲಿಂಗ್ ಮಾಡುವವರಿಗೆ ಇನ್‌ಸ್ಟಾಗ್ರಾಮ್ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ಇಂತಹ ಸಾಹಸಗಳನ್ನು ಪ್ರಚಾರ ಮಾಡುವ ಹಲವಾರು ಪ್ರೊಫೈಲ್‌ಗಳಿವೆ. ಇಂತಹ ಸ್ಟಂಟ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಬೆಂಗಳೂರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಯುವತಿ ಮೇಲೆ ಅತ್ಯಾಚಾರಗೈದ ಮೂವರ ಬಂಧನ
ಯೂಟ್ಯೂಬರ್ ಪೋಸ್ಟ್ಗೆ ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸರು ಪ್ರತಿಕ್ರಿಯೆ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವೈಟ್‌ಫೀಲ್ಡ್ ಬಳಿ ವ್ಹೀಲಿಂಗ್ ಮಾಡುತ್ತಿರುವ ಯುವಕನನ್ನು ನಿರಂಜನ್ (18) ಎಂದು ಗುರುತಿಸಲಾಗಿದೆ. ಈತನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವ್ಹೀಲಿಂಗ್ ಮಾಡುವ ಅನೇಕ ವಿಡಿಯೊಗಳಿವೆ. ಈತನ ಇನ್‌ಸ್ಟಾಗ್ರಾಮ್ ಬಯೋದಲ್ಲಿ, ‘ವೀಲಿಂಗ್ ಲವ್ವರ್’ ಎಂದು ಬರೆದುಕೊಂಡಿದ್ದಾರೆ.