ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೊಡಗಾನೂರ ಕ್ರಾಸ್ ಬಳಿ ಬೂದಿಹಾಳ ಪೀರಾಪುರ ಏತ ನೀರಾವರಿಗೆ ಸಂಬಂಧಿಸಿದ ಕೊನೆ ಹಂತದ ಎಫ್‌ಐಸಿ(ಹೊಲಗಾಲುವೆ) ಕಾಲುವೆ ನಿರ್ಮಾಣ ಮಾಡಿ ತಾಲೂಕಿನ 38 ಹಳ್ಳಿಗಳಿಗೆ ರೈತರ ಜಮೀನುಗಳಿಗೆ ನೀರಿನ ಅನುಕೂಲತೆ ಕಲ್ಪಿಸಬೇಕೆಂದು ಆಗ್ರಹಿಸಿ 38 ಹಳ್ಳಿಗಳ ರೈತರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ಅಂಬೇಡ್ಕರ್ ಸೇನೆಯ ತಾಲೂಕು ಸಮಿತಿಯಿಂದ ಬೆಂಬಲ ಸೂಚಿಸಲಾಗಿದೆ.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, “ಯೋಜನೆ ಶೇ.90ರಷ್ಟು ಪೂರ್ಣಗೊಂಡಿದ್ದು, ಕೇವಲ 10 ಪ್ರತಿಶತ ಕಾಮಗಾರಿ ಬಾಕಿ ಉಳಿದಿದೆ. ₹170 ಕೋಟಿ ಅನುದಾನ ಬೇಕಿದ್ದು, ಕಾಲುವೆ ನಿರ್ಮಾಣವಾದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ” ಎಂದು ಆಗ್ರಹಿಸಿದರು.
ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, “ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಜನರಿಗೆ ಕುಡಿಯಲು ನೀರಿಲ್ಲ. ಈ ಕಾಲುವೆ ಈ ಭಾಗದ ರೈತರಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಬೇಡಿಕೆ ಈಡೇರಿಸದಿದ್ದರೆ ಇನ್ನಷ್ಟು ತೀವ್ರವಾಗಿ ಹೋರಾಟ ಮಾಡಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ
ಈ ವೇಳೆ ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸ್ಸು ಈ ಮಾದರ, ತಾಲೂಕು ಕಾರ್ಯದರ್ಶಿ ಮಹಾದೇವ ಅಸ್ಕಿ, ಖಜಂಚಿ ಪರಶುರಾಮ್ ತಳವಾರ, ಕಾರ್ಮಿಕ ಘಟಕದ ಅಧ್ಯಕ್ಷ ಪರಶುರಾಮ ನಾಲತನಾಡ ಸೇರಿದಂತೆ ಸುತ್ತಮುತ್ತಲಿನ ರೈತ ಬಾಂಧವರು ಇದ್ದರು.