BREAKING NEWS | ದಕ್ಷಿಣ ಭಾರತದ ಖ್ಯಾತ ನಟಿ ಬಿ ಸರೋಜಾ ದೇವಿ ನಿಧನ; ಗಣ್ಯರ ಸಂತಾಪ

Date:

Advertisements

ದಕ್ಷಿಣ ಭಾರತದ ಖ್ಯಾತ ನಟಿ ಹಿರಿಯ ನಟಿ ಬಿ.ಸರೋಜಾದೇವಿ(87) ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಜನವರಿ 7, 1938 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವರ ಗ್ರಾಮದಲ್ಲಿ ಸರೋಜಾದೇವಿ ಜನಿಸಿದ್ದರು.

ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು, ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.

1955ರಲ್ಲಿ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆ ಬಳಿಕ ಅವಕಾಶಗಳು ಅವರನ್ನು ಹುಡುಕಿ ಬಂದವು. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೋ ಸರೋಜಾ ದೇವಿ ಅವರು ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಇದನ್ನು ಓದಿದ್ದೀರಾ? ಶಿವರಾಜ್‌ ಜನ್ಮದಿನ | ಶಿವಪುಟ್ಟಸ್ವಾಮಿಯಿಂದ ಶಿವಣ್ಣನವರೆಗೆ ಸಿನಿಪಯಣ

ಮೇರು ನಟರಾದ ರಾಜ್​ಕುಮಾರ್, ಎಂಜಿಆರ್, ಎನ್‌ಟಿಆರ್‌, ಜೆಮಿನಿ ಗಣೇಶನ್‌, ಕಲ್ಯಾಣ್​ ಕುಮಾರ್ ಮೊದಲಾದವರ ಜೊತೆ ಸರೋಜಾ ದೇವಿ ತೆರೆ ಹಂಚಿಕೊಂಡರು. ಒಂದು ಕಾಲದಲ್ಲಿ ತಮಿಳಿನ ಸ್ಟಾರ್‌ ನಟಿಯಾಗಿ ಮಿಂಚಿದ್ದರು.

‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’,  ಹಿಂದಿಯಲ್ಲಿ  ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು.

B sarojadevi 1

ಕನ್ನಡದ ಮೊಟ್ಟಮೊದಲ ವರ್ಣಮಯ ಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರದ ನಾಯಕಿಯಾಗಿರುವುದು. ಈ ದಾಖಲೆ ಚಿತ್ರಗಳ ಜೊತೆಜೊತೆಗೇ ನೆನಪಿಗೆ ಬರುವುದು ‘ಮಲ್ಲಮ್ಮನ ಪವಾಡ’, ‘ಭಾಗ್ಯವಂತರು’, ‘ಬಬ್ರುವಾಹನ’, ‘ಶ್ರೀ ಕೃಷ್ಣರುಕ್ಕಿಣಿ ಸತ್ಯಭಾಮಾ’, ‘ಲಕ್ಷ್ಮೀಸರಸ್ವತಿ’, ‘ಕಥಾಸಂಗಮ’ ಕನ್ನಡದಲ್ಲಿ ಇಷ್ಟೊಂದು ಸದಭಿರುಚಿಯ, ಅತ್ಯುತ್ತಮ ಚಲನಚಿತ್ರಗಳು ಪದ್ಮಭೂಷಣ ಬಿ ಸರೋಜಾದೇವಿ ಅವರ ಮುಡಿಗೇರಿದ್ದರೂ ಅವರನ್ನು ತಮಿಳು ಚಿತ್ರರಂಗದ ನಟಿ ಎಂದೇ ಬಹಳ ಜನ ಕರೆಯುತ್ತಿದ್ದರು.

ಎಂಜಿಆರ್‌ ಜೊತೆ 26 ಚಿತ್ರಗಳಲ್ಲಿ ನಾಯಕಿ

ಆದರೆ ತಮಿಳು ಚಿತ್ರರಂಗದವರು ಅವರನ್ನು ‘ಕನ್ನಡತ್ತು ಪೈಂಗಿಳಿ’ (ಕನ್ನಡದ ಸುಂದರಗಿಣಿ) ಎಂದೇ ಅಭಿಮಾನದಿಂದ ಕರೆಯುತ್ತಿದ್ದರು. ಕನ್ನಡದಿಂದ ತಮಿಳುನಾಡಿಗೆ ಹೋಗಿ ಸಾಧನೆ ಮಾಡಿ, ಸೂಪರ್‌ಸ್ಪಾರ್‌ಗಳಾದವರ ದೊಡ್ಡ ಪಟ್ಟಿಯೇ ಅಲ್ಲಿದೆ. ಎಂಜಿಆರ್ ಜೋಡಿಯಾಗಿ ಸರೋಜಾದೇವಿ ತಮಿಳು ಚಿತ್ರರಂಗದ ಸಾಮ್ರಾಜ್ಞೆಯಾಗಿ ಮೆರೆದವರು.

ಸುಮಾರು 200 ಚಿತ್ರಗಳಲ್ಲಿ 5 ಭಾಷಾ ಚಿತ್ರರಂಗದಲ್ಲಿ ಸರೋಜಾದೇವಿ ಅಭಿನಯದ ಛಾಪು ಮೂಡಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಎಂಜಿಆರ್ ಅವರ ಜೋಡಿಯಾಗಿ 26 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನ್ನೇವಾ, ಎಂಗವೀಟ್ಟು ಪಿಳ್ಳೆ, ತಿರುಡಾದೆ, ಪಡಕೋಟಿ ಮೊದಲಾದ ಚಿತ್ರಗಳಲ್ಲಿ ಎಂಜಿಆರ್-ಸರೋಜಾದೇವಿ ಜೋಡಿಯ ಪ್ರಮುಖ ಚಿತ್ರಗಳು.

ತಮಿಳುನಾಡಿನಲ್ಲಿ ಆ ಕಾಲದಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಇಬ್ಬರೂ ಜನಪ್ರಿಯ ನಾಯಕನಟರು. ಅವರಿಗೆ ನಾಯಕಿ ಯಾರು ಎಂದರೆ ಸರೋಜಾದೇವಿ ಅವರಿಗೆ ಆದ್ಯತೆ. ಶಿವಾಜಿ ಗಣೇಶನ್ ಅವರೊಂದಿಗೆ ಆಲಯಮಣಿ, ಪಾಲುಂ ಪಳಮುಂ, ಪುದಿಯ ಪರವೈ ಸೇರಿದಂತೆ 22 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ನಾಗೇಶ್ವರರಾವ್, ಎನ್‌ಟಿಆರ್ ಅವರೊಂದಿಗೆ ನಾಯಕಿಯಾಗಿದ್ದಾರೆ. ಹಿಂದಿಯಲ್ಲಿ ದಿಲೀಪ್‌ ಕುಮಾರ್, ರಾಜೇಂದ್ರಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಅವರುಗಳ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ಮೊದಲಾದ ನಟಿಯರು, ಹಿಂದಿ ಚಿತ್ರರಂಗಕ್ಕೂ ಪ್ರವೇಶ ಪಡೆದಿದ್ದಾರೆ ಎಂದರೆ ಅದಕ್ಕೊಂದು ಪರಂಪರೆಯನ್ನು ಸರೋಜಾದೇವಿ ಅರವತ್ತರ ದಶಕದಲ್ಲೇ ನಿರ್ಮಿಸಿದ್ದರು.

ಸರೋಜಾದೇವಿ ನಿಧನಕ್ಕೆ ಗಣ್ಯರ ಸಂತಾಪ

ಬಹುಭಾಷೆ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಾರತೀಯ ಚಿತ್ರರಂಗದ ಖ್ಯಾತ ಚಿತ್ರನಟಿ ಬಿ.ಸರೋಜಾದೇವಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತಾ ಮಾತನಾಡಿದ ಮುಖ್ಯಮಂತ್ರಿಗಳು, “ಬಿ.ಸರೋಜಾದೇವಿಯವರು ಕನ್ನಡ ನಾಡು ಕಂಡ ಪ್ರತಿಭಾವಂತ ಕಲಾವಿದರಾಗಿದ್ದರು. ಬಹುಭಾಷಾ ನಟಿಯಾಗಿದ್ದ ಅವರು ಅಪ್ರತಿಮ ಕಲಾವಿದರಾಗಿದ್ದು, ಅವರ ಸಾವಿನಿಂದ ಇಡೀ ಕಲಾಜಗತ್ತು ಬಡವಾಗಿದೆ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ” ತಿಳಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್ ಅವರು,ಬಿ.ಸರೋಜಾದೇವಿ ಅವರು ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದವರು. ಇಡೀ ದಕ್ಷಿಣ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟವರು. ನನಗೆ ಆತ್ಮೀಯರಾಗಿದ್ದರು. ರಾಜಕುಮಾರ್ ಹಾಗೂ ಇತರೇ ನಾಯಕ ನಟರ ಜೊತೆ ಅಭಿನಯಿಸಿದ್ದನ್ನು ನೋಡಿದ್ದೇನೆ. ಇವರ ಎಲ್ಲಾ ಅಭಿಮಾನಿಗಳಿಗೆ ಹಾಗೂ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು,ಸುಮಾರು 6 ರಿಂದ 7 ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಹಿರಿಯ ನಟಿ ಬಿ. ಸರೋಜಾದೇವಿ ಅವರು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತುಮಿಳು ಭಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅಭಿನಯ ಸರಸ್ವತಿ ಎಂದು ಪ್ರಖ್ಯಾತಿಯನ್ನು ಪಡೆದಿದ್ದರು.”ಕಿತ್ತೂರು ಚೆನ್ನಮ್ಮ” ಚಲನ ಚಿತ್ರದಲ್ಲಿ ರಾಣಿ ಚೆನ್ನಮ್ಮನಾಗಿ ಸರೋಜಾದೇವಿ ಅವರ ಮನೋಜ್ಞ ಅಭಿನಯ ಇಂದಿಗೂ ಕಣ್ಣಿಗೆ ಕಟ್ಟಿದ್ದಂತಿದೆ ಎಂದು ಹೇಳಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, “ವರನಟ ರಾಜ್‌ಕುಮಾರ್ ಸೇರಿದಂತೆ ಖ್ಯಾತ ನಟರೊಂದಿಗೆ ಅಭಿನಯಿಸಿದ್ದ ಸರೋಜಾದೇವಿ, ತಮ್ಮ ಮನೋಜ್ಞ ಅಭಿನಯದಿಂದ ಅಭಿನಯ ಸರಸ್ವತಿ ಎಂದೇ ಗುರಿತಿಸಿಕೊಂಡಿದ್ದರು. ನಾನು ಚಿಕ್ಕವಯಸ್ಸಿನಿಂದಲೂ ಸರೋಜಾದೇವಿ ಅವರ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಇಡೀ ದಕ್ಷಿಣ ಭಾರತದಲ್ಲೇ ಅವರು ದೊಡ್ಡ ಹೆಸರು ಮಾಡಿದ್ದರು. ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಎಲ್ಲಾ ಅಭಿಮಾನಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು | ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ: 10 ಮಂದಿ ಸಾವು

ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕೀಯ ಪಕ್ಷದ ನಾಯಕ ವಿಜಯ್ ಅವರ ತಮಿಳಗ ವೆಟ್ಟ್ರಿ...

BREAKING NEWS | ಲಡಾಖ್ ಹಿಂಸಾಚಾರ: ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧನ

ಲಡಾಖ್‌ಗೆ ರಾಜ್ಯತ್ವ ಸ್ಥಾನಮಾನ ಸೇರಿದಂತೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ನಡೆದ...

‘ಬಾ**ರ್ಡ್ಸ್‌ ಆಫ್‌ ಬಾಲಿವುಡ್’ ವಿವಾದ: ಮಾನನಷ್ಟ ಮೊಕದ್ದಮೆಯಲ್ಲಿ ಆರ್ಯನ್ ಖಾನ್ ಮತ್ತು ಸಮೀರ್ ವಾಂಖೆಡೆ ಫೈಟ್

‌ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್ಯನ್‌ ಖಾನ್‌ ನಿರ್ದೇಶನದ 'ದಿ ಬಾ**ರ್ಡ್ಸ್‌ ಆಫ್‌ ಬಾಲಿವುಡ್‌'...

ಮಹಿಳೆಗೆ ಹಲ್ಲೆ | ಸೀರೆ ಅಂಗಡಿ ಮಾಲೀಕ & ಸಹಾಯಕ ಬಂಧನ

ಮಹಿಳೆಗೆ ಹಲ್ಲೆ ಮಾಡಿದ್ದ ಸೀರೆ ಅಂಗಡಿಯ ಮಾಲೀಕ ಮತ್ತು ಆತನ ಸಹಾಯಕನನ್ನು...

Download Eedina App Android / iOS

X