ಕನ್ನಡ ಸಾಹಿತ್ಯ, ಸಂಶೋಧನೆ ಹಾಗೂ ವಚನ ಪರಂಪರೆಗೆ ಅಪಾರ ಸೇವೆ ಸಲ್ಲಿಸಿದ ಪ್ರಧಾನ್ ವೆಂಕಪ್ಪ ನಾರಾಯಣರವರಿಗೆ (ಪಿವಿಎನ್) ಸಿಗಬೇಕಾದ ಮಾನ್ಯತೆ, ಗೌರವ, ಹಾಗೂ ಸನ್ಮಾನಗಳು ಲಭಿಸಲಿಲ್ಲ. ಎಂದು ಇತಿಹಾಸ ಸಂಶೋಧಕ ಡಾ. ಡಿ ಎನ್ ಯೋಗೀಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ (ಜಿಲ್ಲಾ ಶಾಖೆ, ತುಮಕೂರು) ಹಾಗೂ ಯಲ್ಲಾಪುರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಚಕೋರ ಸಾಹಿತ್ಯ ಉಪನ್ಯಾಸ ಮಾಲಿಕೆ’ಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ‘ಡಾ.ಪಿ.ವಿ.ನಾರಾಯಣ ನಡೆದು ಬಂದ ದಾರಿ’ ವಿಷಯವಾಗಿ ಉಪನ್ಯಾಸ ನೀಡಿದರು.
“ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ಜನಿಸಿದ ಪಿವಿಎನ್, ಹೈದರಾಲಿ ಕಾಲದ ಪ್ರಧಾನ್ ವೆಂಕಪ್ಪಯ್ಯರ ವಂಶಸ್ಥರಾಗಿದ್ದು, ವಚನ ಸಾಹಿತ್ಯದ ನಿಟ್ಟಿನಲ್ಲಿ ‘ವಚನ ಸಾಹಿತ್ಯ – ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಮಹತ್ವದ ಸಂಶೋಧನೆ ಕೈಗೊಂಡಿದ್ದರು. ವಿಮರ್ಶೆ, ಪ್ರವಾಸ ಕಥನ, ಸಂಪಾದನೆ, ಸೃಜನಶೀಲತೆ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವ ಅವರು, 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರಲ್ಲಿ ಹೆಚ್ಚಿನವು ವಚನ ಸಾಹಿತ್ಯಕ್ಕೆ ಸಂಬಂಧಪಟ್ಟುವಾಗಿವೆ” ಎಂದು ವಿವರಿಸಿದರು.
“ಅವರು ರಚಿಸಿದ ಒಂಬತ್ತು ಕಾದಂಬರಿಗಳ ಪೈಕಿ ʼಧರ್ಮಕಾರಣʼ ಶ್ರೇಷ್ಠ ಕಾದಂಬರಿ ಎನ್ನಿಸಿ, ಆದರೆ ನಿಷೇಧಕ್ಕೊಳಗಾಗಿದ್ದ ಕಾರಣ ಅದು ಹೆಚ್ಚು ಚರ್ಚೆಗೆ ಒಳಪಟ್ಟಿತ್ತು. ಅದರ ಹಿಂದೆ ನಂಬಿಕೆಗೆ ಧಕ್ಕೆಯಾಗುವ ತತ್ವದ ಪ್ರಶ್ನೆಗಳು ಇದ್ದವು. ನಂಬಿಕೆಯು ಇತಿಹಾಸವಾಗಲಾರದು. ನಂಬಿಕೆಗೆ ಧಕ್ಕೆಯಾಗುವ ವಿಚಾರ ಬಂದಾಗ ಸಂಶೋಧನೆ ಸಾಯುತ್ತದೆ” ಎಂದರು.
“ಬೆಂಗಳೂರು ವಿಜಯಾ ಕಾಲೇಜಿನಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದ ಪಿವಿಎನ್ ಕನ್ನಡ ಶಕ್ತಿ ಕೇಂದ್ರದ ಸಕ್ರಿಯ ಸಂಚಾಲಕರಾಗಿದ್ದು, ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿ ನುಡಿಸೇವೆಗೆ ದಿಕ್ಕು ನೀಡಿದವರು. ನಾಲ್ಕು ನಿಘಂಟುಗಳ ರಚನೆಯ ಮೂಲಕ ಕನ್ನಡ ಭಾಷೆಗೆ ಸಂಗ್ರಹದ ಶಕ್ತಿಕೇಂದ್ರವನ್ನೇ ಕಟ್ಟಿದವರು” ಎಂದು ಪ್ರಶಂಸಿಸಿದರು.
ಇದನ್ನೂ ಓದಿ: ತುಮಕೂರು | ಅಕ್ರಮ ಭೂ ಪರಿವರ್ತನೆ ಆರೋಪ : ಜಿಲ್ಲಾಧಿಕಾರಿಗೆ ನಾಗರಿಕ ಸನ್ಮಾನದ ವಿನೂತನ ಪ್ರತಿಭಟನೆಗೆ ಪೊಲೀಸರ ಅಡ್ಡಿ ; ಬಂಧನ
ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯೆ ಸುಮಾ ಸತೀಶ್ ಮಾತನಾಡಿ, “ಪಿವಿಎನ್ ಅವರು ತಮ್ಮ ಇಳಿವಯಸ್ಸಿನಲ್ಲೂ ಹೊಸ ತಂತ್ರಜ್ಞಾನ ಬಳಸಲು ಹಿಂದೆಮುಂದೆ ನೋಡದೆ, ಕಂಪ್ಯೂಟರ್ ಬಳಸಿ ಸ್ವಯಂ ಟೈಪಿಂಗ್ ಮೂಲಕ ಬರವಣಿಗೆ ಮುಂದುವರೆಸಿದವರು. ಅವರ ಸಮರ್ಪಣಾ ಶಕ್ತಿ ಅಗಾಧವಾಗಿತ್ತು” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಂ. ಶಂಕರಪ್ಪ, ಚಕೋರ ಕಾರ್ಯಕ್ರಮದ ತುಮಕೂರು ಜಿಲ್ಲಾ ಸಂಚಾಲಕ ಡಾ. ನಾಗಭೂಷಣ ಬಗ್ಗನಡು, ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಉಪನ್ಯಾಸಕಿ ಮೇ.ನಾ. ತರಂಗಿಣಿ ಹಾಗೂ ವಿದ್ಯಾರ್ಥಿಗಳು ಇದ್ದರು.