ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಪುರ್ ಹಿಂದುಳಿದ ವರ್ಗಗಳ ಸರ್ಕಾರಿ ಬಾಲಕಿಯರ ವಸತಿ ನಿಲಯ(ಒಬಿಸಿ ಹಾಸ್ಟೆಲ್)ದ 10 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥವಾಗಿದ್ದು, ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದೆ.
ವಸತಿ ನಿಲಯದಲ್ಲಿ ಎರಡು ದಿನಗಳಿಂದ ಸರಿಯಾದ ಊಟದ ವ್ಯವಸ್ಥೆ ಇಲ್ಲದರಿಂದ ವಿದ್ಯಾರ್ಥಿನಿಯರು ಉಪವಾಸವಿದ್ದು, ತಲೆಸುತ್ತು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದಾರೆ ಎಂಬುದು ಸ್ಥಳೀಯರಿಂದ ಬಯಲಾಗಿದೆ.
ವಿದ್ಯಾರ್ಥಿನಿಯ ಪಾಲಕ ಪರಮಣ್ಣ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಸತಿ ನಿಲಯದಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಒಂದೊತ್ತಿನ ಊಟ ಹಾಕುವುದಿಲ್ಲ, ಹಾಕಿದರೂ ಅಡುಗೆಯಲ್ಲಿ ಉಪ್ಪು, ಖಾರ, ಹುಳಿ ಜಾಸ್ತಿ ಹಾಕುತ್ತಾರೆ. ರುಚಿಕರವಾದ ಅಡುಗೆ ಮಾಡುವುದಿಲ್ಲವೆಂದು ನೀವು ಯಾರಿಗಾದರೂ ಹೇಳಿದರೆ ನಿಮ್ಮನ್ನು ವಸತಿನಿಲಯದಿಂದ ಹೊರಹಾಕುತ್ತೇವೆಂದು ನಿಲಯದ ಸಿಬ್ಬಂದಿಗಳು, ವಾರ್ಡನ್ ವಿದ್ಯಾರ್ಥಿನಿಯರಿಗೆ ಹೆದರಿಕೆ ಒಡ್ಡಿರುವುದರಿಂದ ಮಕ್ಕಳು ನಮಗೆ ಯಾವುದೇ ವಿಷಯ ತಿಳಿಸಿಲ್ಲ” ಎಂದು ಆರೋಪಿಸಿದರು.

“ವಿದ್ಯಾರ್ಥಿನಿಲಯದ ಸಿಬ್ಬಂದಿಗಳ ಬೆದರಿಕೆಗೆ ಬೇಸರಗೊಂಡ ವಿದ್ಯಾರ್ಥಿನಿಯರು ಎರಡು ದಿನಗಳಿಂದ ಸರಿಯಾಗಿ ಊಟ ಮಾಡದೆ ಉಪವಾಸ ಇದ್ದರು. ಖಾಲಿ ಹೊಟ್ಟೆಯಲ್ಲಿಯೇ ಶಾಲೆಗೆ ಹೋದ ಸಂದರ್ಭದಲ್ಲಿ ತಲೆಸುತ್ತು ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದಾರೆ” ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಪ್ಪಾರೆಡ್ಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯಾರ್ಥಿನಿಯರು ಅಸ್ವಸ್ಥವಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ನನಗೆ ಇದೀಗ ತಿಳಿದಿದೆ. ಹಾಗಾಗಿ ತಕ್ಷಣ ನಾನು ಸರ್ಕಾರಿ ಆಸ್ಪತ್ರೆಯ ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಕುರಿತು ವಿಚಾರಿಸಿರುವೆ. ಈಗ ಆಸ್ಪತ್ರೆಗೆ ಹೋಗುತ್ತಿದ್ದೇನೆ” ಎಂದರು.
“ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಕೂಡಲೇ ನನ್ನನ್ನು ಸಂಪರ್ಕಿಸಿ ಎಂದು ವಸತಿ ನಿಲಯದ ಬೋರ್ಡ್ ಮೇಲೆ ನನ್ನ ನಂಬರ್ ಹಾಗೂ ನನ್ನ ಡ್ರೈವರ್(ವಾಹನ ಚಾಲಕ) ಅವರ ನಂಬರ್ ಕೂಡಾ ಬರೆದಿರುವೆ. ಆದರೆ ಯಾವುದೇ ವಿದ್ಯಾರ್ಥಿನಿಯರು ಈವರೆಗೆ ಯಾವ ಸಮಸ್ಯೆಯನ್ನೂ ಕೂಡಾ ನನ್ನ ಗಮನಕ್ಕೆ ತಮದಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಗುಬ್ಬಿ | ಜುಲೈ 20 ರಂದು ವಚನ ವಾಚನ ಸ್ಪರ್ಧೆ
ಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್ ವಿ ನಾಯಕ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಸತಿ ನಿಲಯದ ಹತ್ತು ಮಂದಿ ವಿದ್ಯಾರ್ಥಿನಿಯರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸಮಸ್ಯೆಗೆ ಕಾರಣ ತಿಳಿದುಬಂದಿಲ್ಲ.

ವಸತಿನಿಲಯದ ಆಹಾರ, ಕುಡಿಯುವ ನೀರು(ಫುಡ್, ವಾಟರ್) (ಟೆಸ್ಟ್) ಪರೀಕ್ಷೆ ನಡೆದ ಬಳಿಕ ತಿಳಿಯುತ್ತದೆ. ಎಲ್ಲ ವಿದ್ಯಾರ್ಥಿನಿಯರಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ಎಲ್ಲರೂ ಗುಣಮುಖರಾಗುತ್ತಿದ್ದಾರೆ” ಎಂದು ತಿಳಿಸಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.