ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಪಡೆದು ತಂದೆ ತಾಯಿಗಳಿಗೆ ಹೆಸರು ತನ್ನಿ. ಅದೇ ರೀತಿ ಉತ್ತಮ ಸಮಾಜ ನಿರ್ಮಾಣ ಮಾಡುವಂತರಾಗಿ ಅಂಬೇಡ್ಕರ್ ಅವರ ಆಶಯದಂತೆ ಉತ್ತಮ ಶಿಕ್ಷಣ ಪಡೆದು ಉನ್ನತ ಅಧಿಕಾರ ಪಡೆಯಿರಿ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಹೇಳಿದರು.
ಶಿರಾ ನಗರದ ಅಂಬೇಡ್ಕರ್ ಭವನದಲ್ಲಿ ಶಿರಾ ತಾಲ್ಲೂಕು ಮಾತಂಗ ನೌಕರರ ಬಳಗದ ವತಿಯಿಂದ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾತಂಗ ನೌಕರರ ಬಳಗಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದೀರಿ ನಿಮ್ಮ ಮನವಿಯನ್ನು ನನ್ನ ತಂದೆಯವರಾದ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ತಿಳಿಸುತ್ತೇನೆ. ಆದಷ್ಟು ಬೇಗ ಜಮೀನು ಮಂಜೂರಾತಿ ಮಾಡಲು ನಾನೂ ಸಹ ಕೇಳುತ್ತೇನೆ ಎಂದರು.
ಹಿರಿಯ ಹೋರಾಟಗಾರ ಪ್ರೋ. ಕೆ.ದೊರೆರಾಜ್ ಮಾತನಾಡಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ಶ್ರದ್ಧೆ ಇರಬೇಕು. ನಮ್ಮ ಗುರಿ ಸಾಧನೆ ಕಡೆ ಇರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಸಾಮರ್ಥ್ಯ ನೋಡಿ ಕೆಲಸ ಕೊಡುತ್ತಾರೆ. ಆದ್ದರಿಂದ ಯಾವಾಗಲೂ ಅಧ್ಯಯನಶೀಲರಬೇಕು. ಸಾಮಾಜಿಕ ಜವಾಬ್ದಾರಿ ಇಟ್ಟುಕೊಳ್ಳಬೇಕು. ಶ್ರದ್ಧೆ, ಆತ್ಮವಿಶ್ವಾಸ, ಅಧ್ಯಯನಶೀಲತೆ ಈ ಮೂರು ತತ್ವಗಳನ್ನು ಪಾಲಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಹೆಚ್ಚು ಅಂಕ ಗಳಿಸಿದ್ದೀರಿ ನಿಮಗೆ ಅಭಿನಂದನೆಗಳು. ಅಸ್ಪೃಶ್ಯರನ್ನು ಹೀಯಾಳಿಸುವುದು ಈ ದೇಶದ ದೊಡ್ಡ ಶತ್ರು. ಅವಮಾನಿಸುವವರ ಮಧ್ಯೆ ಬದುಕಿ ಗೆಲ್ಲಬೇಕು ಎಂದರು.

ರಾಜ್ಯ ಎಸ್‌ಸಿ ಎಸ್‌ಟಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ ಮಾತನಾಡಿ ಒಳಮೀಸಲಾತಿ ಜಾರಿಯಾಗದಿದ್ದರೆ ಮಾದಿಗ ಸಮುದಾಯದ ಅಭಿವೃದ್ಧಿ ಅಸಾಧ್ಯ. ಒಳಮೀಸಲಾತಿ ಜಾರಿಯಾದರೆ ಮಾದಿಗ ಸಮುದಾಯದ 2.25 ಲಕ್ಷ ವಿದ್ಯಾಥಿಗಳಿಗೆ ಪ್ರತಿ ವರ್ಷ ಇಂಜಿನಿರಿಂಗ್, ವೈದ್ಯಕೀಯ ಸೇರಿದಂತೆ ಇತರೆ ಕೋರ್ಸ್ಗಳಲ್ಲಿ ಸೀಟು ಸಿಗಲಿದೆ. ಜುಲೈ ಅಂತ್ಯದ ವೇಳೆಗೆ ಒಳಮೀಸಲಾತಿ ಜಾರಿಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾದಿಗ ಸಮುದಾಯ ಚಿರಋಣಿಗಳಾಗುತ್ತೇವೆ ಎಂದ ಅವರು ನಾವು ಅಂಬೇಡ್ಕರ್ ವಿಚಾರವನ್ನು ಬುದ್ಧನ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅವರ ವಿಚಾರಗಳನ್ನು ಮನನ ಮಾಡಿಕೊಂಡು ಅವರ ದಾರಿಯಲ್ಲಿ ಹೋದರೆ ನಮಗೆ ಪರಿಹಾರ ಸಿಗುತ್ತದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಚ್ ನಾಗರಾಜ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕರ್ತವ್ಯ ಪಾಲನೆ, ಸಮಯ ಪಾಲನೆ, ಕೆಲಸದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಇದು ಮನುಷ್ಯನನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಮಾತಂಗ ನೌಕರರ ಬಳಗದ ಕಾರ್ಯ ಮಾದರಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ಮುಖ್ಯ ಶಿಕ್ಷಕ ರಾಮರಾಜ್ ಮಾತನಾಡಿ ಮಾತಂಗ ನೌಕರರ ಬಳಗವು ಮಾದಿಗ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 15 ರಾತ್ತಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದೇವೆ. ವಾಟ್ಸ್ಪ್ ಗ್ರೂಪ್ ರಚಿಸಿ ರಕ್ತದಾನ ಮಾಡುವ ಮಹತ್ಕಾರ್ಯ ಮಾಡುತ್ತಿದ್ದೇವೆ. ಮಾತಂಗ ನೌಕರರ ಬಳಗಕ್ಕೆ ಎರಡು ಎಕರೆ ಜಮೀನು ನೀಡಿದರೆ ನಮ್ಮ ಸಮುದಾಯದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪಾವನ ಆಸ್ಪತ್ರೆಯ ಮುಖ್ಯಸ್ಥೆ ಡಾ.ಕೆ.ಪಾವನ ಮುರುಳಿಧರ, ಚರಕ ಆಸ್ಪತ್ರೆಯ ಡಾ.ಬಸವರಾಜು, ಬಿಇಓ ಶಂಕರಪ್ಪ, ದಸಂಸ ಅಧ್ಯಕ್ಷ ಟೈರ್ ರಂಗನಾಥ್, ಕೆಪಿಸಿಸಿ ಸದಸ್ಯ ಕೋಟೆ ಲೋಕೇಶ್, ಮಾಜಿ ತಾ.ಪಂ. ಸದಸ್ಯ ಪಿ.ಬಿ.ನರಸಿಂಹಯ್ಯ, ಚಿಂತಕ ಡಾ.ಕೊಟ್ಟ ಶಂಕರ್, ಜೆ.ಎನ್.ರಾಜಸಿಂಹ, ಮುಖಂಡ ಕಲ್ಲುಕೋಟೆ ಲಿಂಗರಾಜು, ಮಾತಂಗ ನೌಕರರ ಬಳಗದ ಉಪಪ್ರಾಂಶುಪಾಲ ಎನ್.ಕುಮಾರ್, ಬಿಆರ್‌ಸಿ ರಂಗಪ್ಪ, ಮುಖ್ಯ ಶಿಕ್ಷಕರುಗಳಾದ ಎಂ.ರಾಜಣ್ಣ, ಎಸ್.ಬಿ.ನರಸಿಂಹಮೂರ್ತಿ, ಈರಣ್ಣ, ಡಾ.ಎನ್.ಎಸ್.ಶಂಕರಪ್ಪ, ಶ್ರೀನಿವಾಸ್, ನಿವೃತ್ತ ಮುಖ್ಯ ಶಿಕ್ಷಕ ಆರ್.ಸಿ.ರಾಮಚಂದ್ರಪ್ಪ, ದ್ವಾರನಕುಂಟೆ ಲಕ್ಷ್ಮಣ್ , ಡಿ.ಎಸ್.ಕೃಷ್ಣಮೂರ್ತಿ, ಜಯರಾಮಕೃಷ್ಣ, ಕಗ್ಗಲಡು ಮಹಲಿಂಗಪ್ಪ, ಸಿ.ಕೆ.ನರಸಿಂಹಮೂರ್ತಿ, ವಕೀಲ ಸಣ್ಣೀರಪ್ಪ, ಹೆಂದೊರೆ ಶಿವಣ್ಣ, ರವಿ ಹೆಬ್ಬೂರು, ಶಿಕ್ಷಕಿಯರಾದ ಗೌರಮ್ಮ, ಎಚ್.ಎಂ.ಲಕ್ಷ್ಮೀದೇವಿ, ಜಯಮ್ಮ, ಅನಸೂಯಮ್ಮ ಸೇರಿದಂತೆ ಹಲವರು ಹಾಜರಿದ್ದರು.