ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಮತ್ತು ಕರಿಯೋಬನಹಳ್ಳಿ ಗ್ರಾಮಗಳ ಹಲವು ಸರ್ವೇ ಜಮೀನುಗಳಲ್ಲಿ ಸುಮಾರು 1,156 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ರಾಜ್ಯ ಪತ್ರ ಹೊರಡಿಸಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡ ಶಂಕರಪ್ಪ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು 2022ರ ಡಿಸೆಂಬರ್ 14ರಂದು ಹೊರಡಿಸಿದ್ದ ರಾಜಪತ್ರದಲ್ಲಿ ಹಿರಿಯೂರಿನ ಮೇಟಿಕುರ್ಕೆ ಮತ್ತು ಕರಿಯೋಬನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಸುಮಾರು 1,156 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಭೂಮಿಯನ್ನು ಗುರುಸಿತ್ತು. ಭೂಮಿಯ ಸ್ವಾಧೀನಕ್ಕಾಗಿ ದಾವಣಗೆರೆಯ ಭೂಸ್ವಾಧೀನಾಕಾರಿಗಳು ರೈತರಿಎಗ ಹಲವು ಬಾರಿ ನೋಟೀಸ್ ನೀಡಿದ್ದರು. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಭೂಮಿಗೆ ಬೆಲೆ ನಿಗದಿ ಮಾಡಲು ರೈತರೊಂದಿಗೆ ಸಭೆ ನಡೆಸಿದ್ದರು. ಅಲ್ಲದೆ, 2023ರ ಜುಲೈ 07ರಂದು ಪರಿಹಾರ ಧನ ಬಿಡುಗಡೆಗೆ ಮಂಡಳಿಯು ಆದೇಶ ಹೊರಡಿಸಿತ್ತು” ಎಂದು ವಿವರಿಸಿದ್ದಾರೆ.
“ಆದರೆ, ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಚಿವರು ಕ್ಷೇತ್ರದ ಅಭಿವೃದ್ಧಿಯನ್ನು ಮನಗಂಡು, ಅನೇಕ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಒತ್ತುಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಂ.ಕೆ ವೀರೇಂದ್ರವ ಕುಮಾರ್, ಎನ್ ಸಂತೋಷ ಕುಮಾರ್, ಬಸವರಾಜ ನಾಯಕ್, ತಿಪ್ಪೇಸ್ವಾಮಿ ಟಿ.ಎಲ್ ರಾಜು ಇದ್ದರು.