ಸಮರ್ಪಕ ರಸಗೊಬ್ಬರ ಪೂರೈಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಸುರಪುರದಲ್ಲಿ ರೈತರು ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ‘ರಸಗೊಬ್ಬರ ವರ್ತಕರು ರೈತರಿಗೆ ಗೊಬ್ಬರ ನೀಡದೆ ಸತಾಯಿಸುತ್ತಿದ್ದಾರೆ. ಕ್ರಿಮಿನಾಶಕ ಇತರ ಸಾಮಗ್ರಿಗಳನ್ನು ತೆಗೆದುಕೊಂಡರೆ ಮಾತ್ರ ಗೊಬ್ಬರ ನೀಡುವುದಾಗಿ ಹೇಳುತ್ತಿದ್ದಾರೆ. ಬೆಲೆಯನ್ನೂ ಹೆಚ್ಚಿಸಿದ್ದಾರೆ’ ಎಂದು ಆರೋಪಿಸಿದರು.
ತಾಲ್ಲೂಕಾಧ್ಯಕ್ಷ ಹಣಮಂತ್ರಾಯ ಚಂದಲಾಪುರ ಮಾತನಾಡಿ, ‘ಕಾಲುವೆ ಕೊನೆಭಾಗದ ರೈತರು ಈಗಾಗಲೇ ಹತ್ತಿ, ತೊಗರಿ, ಸಜ್ಜೆ, ಶೇಂಗಾ ಬಿತ್ತಿದ್ದಾರೆ. ಸದ್ಯ ರಸಗೊಬ್ಬರ ಕೊಡಬೇಕು. ರಸಗೊಬ್ಬರ ಸಿಗದಿರುವುದರಿಂದ ಬೆಳೆಗಳು ಸರಿಯಾಗಿ ಬೆಳವಣಿಗೆ ಆಗುತ್ತಿಲ್ಲ’ ಎಂದರು.
‘ರಸಗೊಬ್ಬರ ಸಮರ್ಪಕವಾಗಿ ದೊರೆಯುವ ವ್ಯವಸ್ಥೆ ಆಗಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ರೈತರ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ರೈತರಿಗೆ ತೊಂದರೆ ನೀಡುವ ವರ್ತಕರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಇದನ್ನೂ : ವಿಜಯನಗರ | ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸಾವು
ವೆಂಕಟೇಶಗೌಡ ಕುಪಗಲ್, ಮಲ್ಲಣ್ಣ ಹಾಲಭಾವಿ, ದೇವಿಂದ್ರಪ್ಪ ತಿಪ್ಪನಟಗಿ, ತಿಪ್ಪಣ್ಣ ಜಂಪಾ, ಭೀಮನಗೌಡ ಕರ್ನಾಳ, ಶಿವನಗೌಡ ರುಕ್ಮಾಪುರ, ಪ್ರಭು ದೊರೆ, ನಾಗಪ್ಪ ಕುಪಗಲ್, ಮೌನೇಶ ಅರಳಹಳ್ಳಿ, ಸಾಹೇಬ್ ಗೌಡ, ದೇವಿಂದ್ರಪ್ಪ, ಭೀಮಣ್ಣ, ಭೀಮನಗೌಡ, ತಿಪ್ಪಣ್ಣ, ನಾಗಪ್ಪ, ಶಿವನಗೌಡ, ಮೌನೇಶ ಇನ್ನಿತರರು ಇದ್ದರು.