ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಆಹಾರ ಸೇವೆಸಿ 50ಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನದ ಅರಸೀಕೆರೆ ತಾಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಇರುವ ವೆಂಕಟೇಶ್ವರ ಸ್ವಾಮಿ ದೇಗುಲದ ಜಾತ್ರೆಯಲ್ಲಿ ಭಾನುವಾರ ರಾತ್ರಿ ಸುಮಾರು ಒಂದುವರೆ ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗಿತ್ತು. ಈ ದೇಗುಲ ಚಿಕ್ಕ ತಿರುಪತಿ ಇಂದೇ ಪ್ರಸಿದ್ಧವಾಗಿದ್ದು, ಜಾತ್ರೆಗೆ ಸಾವಿರಾರು ಜನ ಆಗಮಿಸಿದ್ದರು.
ಖಾಸಗಿ ಸಂಸ್ಥೆಯೊಂದರ ವತಿಯಿಂದ ಭಕ್ತರಿಗೆ ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ವಿತರಣೆ ಮಾಡಲಾಗಿತ್ತು. ಭಾನುವಾರ ರಾತ್ರಿ 7.30 ರಿಂದ ಆಹಾರ ವಿತರಣೆ ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೀಪದ ಜನರ ಬದುಕನ್ನು ಪ್ರತಿನಿಧಿಸಲಿ ‘ತೂಗು ಸೇತುವೆ’
ಜಾತ್ರೆಯಲ್ಲಿ ಆಹಾರ ಸೇವಿಸಿದ ಸುಮಾರು 50ಕ್ಕೂ ಹೆಚ್ಚು ಭಕ್ತರಲ್ಲಿ ಸೋಮವಾರ ಮುಂಜಾನೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಸ್ವಸ್ಥರಾದವರ ಪೈಕಿ 20 ಮಂದಿ ಗುಣಮುಖರಾಗಿದ್ದು, 30ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಭಕ್ತರಿಗೆ ನೀಡಿದ್ದ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ. ತಕ್ಷಣವೇ ಚಿಕಿತ್ಸೆ ದೊರೆತಿದ್ದರಿಂದ ಅನೇಕ ಭಕ್ತರು ಅಪಾಯದಿಂದ ಪಾರಾಗಿದ್ದಾರೆ.
ರಾಜ್ಯದಲ್ಲಿ ಹಲವು ದೇಗುಲಗಳಲ್ಲಿ ಪ್ರಸಾದ ಅಥವಾ ಆಹಾರ ಸೇವಿಸಿ ಭಕ್ತರು ಅಸ್ವಸ್ಥರಾದ ಮತ್ತು ಮೃತಪಟ್ಟ ಘಟನೆಗಳು ಈ ಹಿಂದೆ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಚಿಕ್ಕ ತಿರುಪತಿ ಘಟನೆ ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿತ್ತು.
2018 ರಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ್ದ ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದರು. 17 ಜನರು ಸಾವನ್ನಪ್ಪಿದ್ದರು. ಆದರೆ, ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಘಟನೆಯಲ್ಲಿ ಪ್ರಸಾದಕ್ಕೆ ಉದ್ದೇಶಪೂರ್ವಕ ವಿಷ ಬೆರೆಸಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.