ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಚ ಸರ್ವೇಕ್ಷಣಾ 2024 ರ ಸಮೀಕ್ಷೆಯಲ್ಲಿ ಹಾಗೂ ಘನತಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಹಾಗೂ ಸ್ವಚ್ಚತೆಯಲ್ಲಿ ಉತ್ತಮ ಸಾಧನೆಗಾಗಿ ಕೇಂದ್ರ ಸರ್ಕಾರದ ಮಿನಿಸ್ಟ್ರೀರಿಯಲ್ ಅವಾರ್ಡ್ (ಪ್ರಶಸ್ತಿ) ದಾವಣಗೆರೆ ಮಹಾನಗರ ಪಾಲಿಕೆಗೆ ಲಭಿಸಿದೆ.
ಸ್ವಚ್ಚ ಸರ್ವೇಕ್ಷಣ್ (Swachh survekshan) ಅಭಿಯಾನವು ಭಾರತ ಸರ್ಕಾರವು ಪ್ರತಿ ವರ್ಷ ನಡೆಸುವ ಸ್ವಚ್ಛತೆ ಮತ್ತು ನೈರ್ಮಲ್ಯದ ಸಮೀಕ್ಷೆಯಾಗಿದೆ. ದೇಶದ ನಗರಗಳನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇಡುವುದು ಮತ್ತು ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವುದು ಅಭಿಯಾನ ಮತ್ತು ಸಮೀಕ್ಷೆಯ ಉದ್ದೇಶ.
ಪ್ರತಿ ವರ್ಷ ನಗರದ ಎಲ್ಲಾ ನಾಗರಿಕರು, ಸ್ಥಳೀಯ ಸಂಸ್ಥೆಗಳು, ಮತ್ತು ಸ್ವಚ್ಛತಾ ಕಾರ್ಯಗಳಿಗೆ ಸಂಬಂಧಿಸಿದಂತೆ ಇತರ ಪಾಲುದಾರರು ಭಾಗವಹಿಸುತ್ತಾರೆ. ತ್ಯಾಜ್ಯ ಸಂಗ್ರಹಣೆ, ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ, ಸಾರ್ವಜನಿಕರಲ್ಲಿ ಜಾಗೃತಿ ಮುಂತಾದ ಅಂಶಗಳನ್ನು ಆಧರಿಸಿ ಸಮೀಕ್ಷೆಯ ತಂಡಗಳು ಮೌಲ್ಯಮಾಪನ ಮಾಡುತ್ತವೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಛ ಸರ್ವೇಕ್ಷಣಾ-2024ರ ಅಂಗವಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಗರದ ಸ್ವಚ್ಛತೆಯನ್ನು ಹೆಚ್ಚಿಸಲು ನೈರ್ಮಲೀಕರಣ, ವಾರ್ಡ್ ಗಳ ಸ್ವಚ್ಛತೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಸ್ವಚ್ಛತಾ ಸಿಬ್ಬಂದಿಗೆ ತರಬೇತಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮುಂತಾದವು ಸೇರಿದ್ದವು.
ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಡಿಸೆಂಬರ್ ನಿಂದ ಎರಡು ತಿಂಗಳ ಕಾಲ ಸ್ವಚ್ಛತಾ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ತಂಡ ದಾವಣಗೆರೆಯಲ್ಲಿ ವಾರ್ಡುಗಳಲ್ಲಿ, ನಗರದ ತ್ಯಾಜ್ಯ ವಿಲೇವಾರಿ ನಿರ್ವಹಣೆ, ಘಟಕಗಳಲ್ಲಿ ಸಮೀಕ್ಷೆ ನೆಲೆಸಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಗಳೂರು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಶಕ್ತಿ ಯೋಜನೆ ಸಂಭ್ರಮಾಚರಣೆ
ಈ ಸಾಧನೆಗೆ ಸಹಕರಿಸಿ ಪ್ರೋತ್ಸಾಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಆಯಕ್ತೆ ರೇಣುಕಾ, ಪರಿಸರ ಅಭಿಯಂತರಾದ ಬಸವಣ್ಣ, ಆರೋಗ್ಯ ನಿರೀಕ್ಷಕರು ಹಾಗೂ ಪಾಲಿಕೆ ಪೌರಕಾರ್ಮಿಕರನ್ನು ಮಾಜಿ ಸದಸ್ಯರಾದ ಎ.ನಾಗರಾಜ, ಗಡಿಗುಡಾಳ, ಅಬ್ದುಲ್ ಲತೀಫ್, ಉದಯಕುಮಾರ್, ಜಾಕೀರ ಅಲಿ ಹಾಗೂ ಇತರ ಸದಸ್ಯರು ಅಭಿನಂದಿಸಿದ್ದಾರೆ.