ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಎಂದು ಘೋಷಿಸಬೇಕೆಂಬ ಬೇಡಿಕೆಗೆ ಮುಂದಿನ ದಿನಗಳಲ್ಲಿ ನಿರ್ಧಿಷ್ಟ ರೂಪ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆಗೂಡಿ ನಿಯೋಗದ ಮೂಲಕ ಗೋಕಾಕವನ್ನು ಹೊಸ ಜಿಲ್ಲೆ ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದು ಅವರು ಗೋಕಾಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ದಿ. ಜೆ.ಎಚ್. ಪಟೇಲ್ ಸರ್ಕಾರದ ಕಾಲದಲ್ಲಿ ಗೋಕಾಕ ಜಿಲ್ಲಾ ಘೋಷಣೆ ಆಗಿದ್ದರೂ, ಮುಂದೆ ಹಿಂದೆ ತೆಗೆದುಕೊಳ್ಳಲಾಯಿತು. ಇಂದಿಗೂ ಈ ಭಾಗದ ಜನರು ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಆದರೆ ಯಾವುದೇ ಸರ್ಕಾರ ಸ್ಪಂದಿಸಿಲ್ಲ” ಎಂದು ಅವರು ಹೇಳಿದರು.
ಜನಗಣತಿ ಪ್ರಕ್ರಿಯೆ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಬೇಕಿರುವ ಹಿನ್ನೆಲೆಯಲ್ಲಿ, ಈಗಾಗಲೇ ತಾಲೂಕು ಹಾಗೂ ಹೋಬಳಿಗಳ ವಿಂಗಡಣಾ ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ಗೋಕಾಕ ನೂತನ ಜಿಲ್ಲೆ ಘೋಷಣೆ ಮಾಡಬೇಕು ಎಂಬುದು ಅವರ ಒತ್ತಾಯ.
“ಸಿದ್ದರಾಮಯ್ಯ ಗಟ್ಟಿ ನಾಯಕರು. ಸತೀಶ ಜಾರಕಿಹೊಳಿ ಹೋರಾಟಗಾರ ರಾಜಕಾರಣಿ. ಈ ಇಬ್ಬರೂ ಒಟ್ಟಾಗಿ ನಿಲ್ಲಿದರೆ ಗೋಕಾಕ ನೂತನ ಜಿಲ್ಲೆ ನಿರ್ಮಾಣ ಖಚಿತ,” ಎಂದು ಅಶೋಕ ಪೂಜಾರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.