‘ಕೆಂಪು, ನೀಲಿ, ಹಸಿರು ಗೆದ್ದವು’; ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯಗೆ ಅಭಿನಂದನೆ

Date:

Advertisements
"ನನ್ನೊಳಗೆ ನೀಲಿ ಇತ್ತು. ಈಗ ಕೆಂಪು ನನ್ನ ರಕ್ತವಾಗಿದೆ. ಹಸಿರು ನನ್ನ ಹೊದಿಕೆಯಾಗಿದೆ" ಎಂದರು ಕಾರಳ್ಳಿ ಶ್ರೀನಿವಾಸ್. "ದಲಿತನಾದ ನನ್ನ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡರು" ಎನ್ನುವಾಗ ಅವರು ಗದ್ಗದಿತರಾದರು.

ಇದು ಅಕ್ಷರಶಃ ಕೆಂಪು, ನೀಲಿ, ಹಸಿರಿನ ಗೆಲುವು. ಹೋರಾಟಗಳು ಒಂದಾದರೆ ಏನಾಗುತ್ತದೆ ಎಂಬುದಕ್ಕೆ ಬಹುದೊಡ್ಡ ದೃಷ್ಟಾಂತವಾಗಿ ಬಹುಕಾಲ ನೆನಪಿನಲ್ಲಿ ಉಳಿಯುವ ಗೆಲುವು…” ಈ ಅಭಿಪ್ರಾಯ ಎಲ್ಲರ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 1777 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ ಕೂಡಲೇ ರೈತರು ಮತ್ತು ವಿವಿಧ ಸಂಘಟನೆಗಳ ಹೋರಾಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಸಿಎಂ ಸಭೆಗೂ ಮುನ್ನ ಬೆಂಗಳೂರಿನ ಗಾಂಧಿಭವನದಲ್ಲಿ ಸೇರಿದ್ದವರಿಗೆ ವಿಷಯ ತಿಳಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ವಿಜಯೋತ್ಸವ ಆಚರಿಸುತ್ತಾ, ಜೈಕಾರಗಳನ್ನು ಮೊಳಗಿಸಿದರು. ಚಳವಳಿಯನ್ನು 1190 ದಿನ ಕಾಪಿಟ್ಟ ನಾಯಕರನ್ನು ಹೆಗಲ ಮೇಲೆ ಹೊತ್ತು ಕುಣಿಸಿದರು.

1190 ದಿನಗಳಿಗಿಂತಲೂ ಹೆಚ್ಚು ಕಾಲ ನಡೆದ ಹೋರಾಟಕ್ಕೆ ಸರ್ಕಾರ ಮಣಿಯದೆ ಇರಲಾಗಲಿಲ್ಲ. ರೈತ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರ ಮೇಲೆ ಇಟ್ಟುಕೊಂಡಿದ್ದ ಭರವಸೆ ಹುಸಿಯಾಗಲಿಲ್ಲ. ಕೆಐಎಡಿಬಿ ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದ ಭೂಮಿ ಕೊನೆಗೂ ರೈತರ ಕೈಯಲ್ಲೇ ಉಳಿಯಿತು.

Advertisements

ಭೂ ಸ್ವಾಧೀನಕ್ಕೆ ಅಂತಿಮ ಆದೇಶ ಹೊರಬಿದ್ದ ಬಳಿಕ ಸಂಯುಕ್ತ ಕರ್ನಾಟಕ ನೇತೃತ್ವದಲ್ಲಿ ಬಿರುಸಾಗಿದ್ದ ಚಳವಳಿ, ಕೊನೆಗೂ ಗೆದ್ದಿದೆ. ಇದು ಅಕ್ಷರಶಃ ಚನ್ನರಾಯಪಟ್ಟಣ ರೈತರ ಗೆಲುವು, ರೈತ, ಕಾರ್ಮಿಕ, ಕೃಷಿಕ, ದಲಿತ, ಮಹಿಳಾ ಸಂಘಟನೆಗಳ ಗೆಲುವು. ಕರ್ನಾಟಕದ ಹೋರಾಟಗಳಿಗೆ ಮಾದರಿಯಾಗಿ ಉಳಿಯುವ ಗೆಲುವಿದು ಎಂದು ಹೋರಾಟಗಾರರು ಭಾವುಕರಾದರು.

4 23

ಸಿದ್ದರಾಮಯ್ಯನವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ, ಮತ್ತೆ ಗಾಂಧಿಭವನದತ್ತ ಬಂದ ಎಲ್ಲ ಮುಖಂಡರ ಮೊಗದಲ್ಲೂ ಸಂಭ್ರಮ ಮನೆ ಮಾಡಿತ್ತು. ನೆರೆದಿದ್ದ ಯುವಕರು ತಮಟೆ ಭಾರಿಸಲು ಶುರು ಮಾಡಿದ ತಕ್ಷಣ, ಹೋರಾಟದ ಹೀರೋಗಳನ್ನು ಹೊತ್ತು ಮೆರೆಸಲಾಯಿತು. ಸಭಾಂಗಣ ತುಂಬೆಲ್ಲ ಸಂಭ್ರಮದ ಜಯಘೋಷ ಮೊಳಗಿತು.

ಇದನ್ನೂ ಓದಿರಿ: ಐತಿಹಾಸಿಕ ದಿನವಾದ ದೇವನಹಳ್ಳಿ ಹೋರಾಟದ ಗೆಲುವು; ಸಂಯುಕ್ತ ಹೋರಾಟ ಕರ್ನಾಟಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ

ವಿರೋಧ ಪಕ್ಷದ ನಾಯಕರಾಗಿದ್ದಾಗ ಹೋರಾಟದ ಸ್ಥಳಕ್ಕೆ ಬಂದು ಚನ್ನರಾಯಪಟ್ಟಣದ ಜನತೆಗೆ ಭರವಸೆಯನ್ನು ನೀಡಿ ಹೋಗಿದ್ದವರು ಸಿದ್ದರಾಮಯ್ಯ. ಆದರೆ ತಾವೇ ಮುಖ್ಯಮಂತ್ರಿಯಾದಾಗ, ಅವರನ್ನು ಕಾಣದ ಕೈಗಳು ಕಟ್ಟಿ ಹಾಕಲು ಯತ್ನಿಸಿದವು. ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ಅಂತಿಮವಾಗಿ, ಅಧಿಸೂಚನೆಯನ್ನು ಸಂಪೂರ್ಣ ರದ್ದುಗೊಳಿಸುವಾಗ ಅವರ ಮುಖದಲ್ಲಿ ಸಂತಸವಿತ್ತು. ವಿವಿಧ ಸಂಘಟನೆಗಳು ಸೇರಿ ಮಾಡಿದ ಹೋರಾಟವನ್ನು ಅವರು ಮನಃಪೂರ್ವಕವಾಗಿ ಹೊಗಳಿದರು.

3 30

“ರೈತರೊಂದಿಗೆ ಎಲ್ಲ ಪ್ರಗತಿಪರ ಸಂಘಟನೆಗಳು, ಕಮ್ಯುನಿಸ್ಟ್ ಪಾರ್ಟಿಯವರು, ಸಾಹಿತಿಗಳು, ಕಲಾವಿದರು, ರೈತ ಸಂಘಟನೆಗಳು, ಹೀಗೆ ಹಲವರು ಸೇರಿ ಕಟ್ಟಿರುವ ವಿಶಿಷ್ಟವಾದ ಹೋರಾಟವಿದು. ಇದನ್ನು ಐತಿಹಾಸಿಕವಾದ ಹೋರಾಟ ಎಂದರೂ ತಪ್ಪಾಗಲಾರದು. ಸರ್ಕಾರ ಎಲ್ಲಾ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ, ಆದೇಶ ರದ್ದು ಮಾಡುವ ತೀರ್ಮಾನಕ್ಕೆ ಬಂದಿದೆ” ಎಂದರು ಸಿಎಂ ಸಿದ್ದರಾಮಯ್ಯ.

ಸಂಭ್ರಮಾಚರಣೆಯಲ್ಲಿ ಭಾಗಿಯಾದ ಅನೇಕರು ಈ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಹಿರಿಯ ದಲಿತ ಹೋರಾಟಗಾರರಾದ ಇಂದೂಧರ ಹೊನ್ನಾಪುರ ಮಾತನಾಡಿ, “ಇಂದು ಸರ್ಕಾರ ಸುಲಭವಾಗಿ ಈ ತೀರ್ಮಾನ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯನವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಈ ನಿಲುವು ಹೊರಬರುವುದು ತುಂಬಾ ಕಷ್ಟವಾಗುತ್ತಿತ್ತು. ಸಿದ್ದರಾಮಯ್ಯನವರ ಕಾರಣಕ್ಕಾಗಿಯೇ ಗೆಲುವು ಸಿಕ್ಕಿದೆ. ಬಹಳ ದೊಡ್ಡಮಟ್ಟದ ರಾಜಕೀಯ ರಿಸ್ಕ್‌ ತೆಗೆದುಕೊಂಡಿರುವ ಸಿದ್ದರಾಮಯ್ಯನವರಿಗೂ ಅಭಿನಂದನೆಗಳು” ಎಂದರು.

ನಟ ಪ್ರಕಾಶ್ ರಾಜ್ ಮಾತನಾಡಿ, “ಇದು ದೇವನಹಳ್ಳಿಯ ರೈತರ ಗೆಲುವು. ನನ್ನನ್ನು ಸಲಹಿಸಿದ ಮಣ್ಣನ್ನು ಮಾರುವುದಿಲ್ಲ ಎಂದು ದೃಢವಾಗಿ ನಿಂತವರ ಗೆಲುವು. 13 ಹಳ್ಳಿಗಳ ರೈತರು ಹೋರಾಡುತ್ತಿದ್ದಾಗ ಅವರೊಂದಿಗೆ ಎಲ್ಲ ಶಕ್ತಿಗಳು ಒಂದಾದವು. ನಾಗರಿಕ ಸಮಾಜ ಒಂದಾಯಿತು. ಸಿದ್ದರಾಮಯ್ಯನವರು ಒಳ್ಳೆಯ ಸುದ್ದಿಯನ್ನು ಕೊಟ್ಟಿದ್ದಾರೆ. ಒಬ್ಬ ವ್ಯಕ್ತಿ ಸಜ್ಜನನಾಗಿದ್ದರೂ ಅವರ ಸರ್ಕಾರ ಸಜ್ಜನವಾಗಿರುವುದಿಲ್ಲ” ಎಂದು ಸೂಚ್ಯವಾಗಿ ಸಚಿವರುಗಳನ್ನು ಕುಟುಕಿದರು.

“ಎಲ್ಲ ಸರ್ಕಾರಗಳು ದಮನಿಸುವ ಕೆಲಸ ಮಾಡುತ್ತವೆ. ಆದರೆ ಹಳ್ಳಿಯವರೊಂದಿಗೆ ಎಲ್ಲಾ ಹೋರಾಟಗಾರರು ಸೇರಿ ದನಿ ಎತ್ತಿದರು. ಸರ್ಕಾರ ಜನರ ಮಾತನ್ನು ಕೇಳಲೇಬೇಕು ಎಂಬುದು ಸಾಬೀತಾಗಿದೆ. ಈ ಹೋರಾಟದ ಶಕ್ತಿಯನ್ನು ಉಳಿಸಿಕೊಳ್ಳಬೇಕಾಗಿದೆ” ಎಂದು ಆಶಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಚನ್ನರಾಯಪಟ್ಟಣ ರೈತರ ಹೋರಾಟ ಮುಂದಿನ ದಿನಗಳಲ್ಲಿ ಚಳವಳಿಗಳಿಗೆ ಪಠ್ಯವಾಗಿ ಉಳಿಯಲಿದೆ. ದೇವನಹಳ್ಳಿ ತಾಲ್ಲೂಕಿನ ಜನರ ಕಣ್ಣಲ್ಲಿ ಸಂತೋಷದ ಕಂಬನಿ ಹರಿದಿದೆ. ರೈತನಿಗೂ ಮತ್ತು ಭೂಮಿಗೂ ಇರುವ ಸಂಬಂಧವನ್ನು ಆ ಕಂಬನಿ ಹೇಳುತ್ತಿದೆ” ಎಂದು ಬಣ್ಣಿಸಿದರು.

ಕಾರ್ಮಿಕ ಮುಖಂಡರಾದ ಮೀನಾಕ್ಷಿ ಸುಂದರಂ ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ ಸಂಯುಕ್ತ ಹೋರಾಟ ನೇತೃತ್ವದಲ್ಲಿ ನಾವು ಮಾಡಿರುವ ಪ್ರಯೋಗ ಇಡೀ ದೇಶದ ಗಮನ ಸೆಳೆದಿದೆ. ಇದೊಂದು ಚಾರಿತ್ರಿಕ ಹೋರಾಟವೆಂದು ಮುಖ್ಯಮಂತ್ರಿಯವರೇ ಅನಿವಾರ್ಯವಾಗಿ ಹೇಳಿದರು” ಎಂದು ಶ್ಲಾಘಿಸಿದರು.

ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ ಮಾತನಾಡಿ, “ಇದು ಐತಿಹಾಸಿಕ ಚಳವಳಿ ಎಂಬ ಮಾತು ಮುಖ್ಯಮಂತ್ರಿಗಳ ಬಾಯಲ್ಲಿ ಬಂತು. ನಾವು ಒಗ್ಗಟ್ಟಾಗಿ ಇದ್ದದ್ದು ಮತ್ತು ಚನ್ನರಾಯಪಟ್ಟಣ ಜನರು ಒಂದಾಗಿ ನಡೆದದ್ದು ಚಳವಳಿಯ ಯಶಸ್ಸಿಗೆ ಕಾರಣ” ಎಂದು ಹೊಗಳಿದರು.

ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್.ಹಿರೇಮಠ ಅವರು ಮಾತನಾಡಿ, “ಒಟ್ಟಾಗಿ ಹೋರಾಡಿದ್ದು ಐತಿಹಾಸಿಕ ಗಳಿಗೆ. ಮುಂದಿನ ಪೀಳಿಗೆಯು ನಮ್ಮೆದುರಿಗಿರುವ ಸವಾಲುಗಳನ್ನು ಎದುರಿಸಬೇಕಾಗಿದೆ” ಎಂದು ಎಚ್ಚರಿಸಿದರು.

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ,“ದೆಹಲಿಯಲ್ಲಿ 13 ತಿಂಗಳ ಕಾಲ ನಡೆದ ಹೋರಾಟಕ್ಕೆ ಜಯ ಸಿಕ್ಕಿತ್ತು. ಈಗ ದೇವನಹಳ್ಳಿಯ ಜನರೂ ಗೆದ್ದಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಮಾತನಾಡಿ, “ಸಂಯುಕ್ತ ಹೋರಾಟಕ್ಕೆ ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮಾದರಿಯಾಗಬೇಕಿದೆ. ನಾಯಕರೇ ಕಾಣಿಸಿಕೊಳ್ಳದ ಸಮಿತಿ ಅದು. ಅಲ್ಲಿ ನಾಯಕರ್ಯಾರು, ಕಾರ್ಯಕರ್ತರ್ಯಾರು ಎಂಬುದನ್ನು ಕಂಡು ಹಿಡಿಯಲಾಗದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಲಿತ ಮುಖಂಡ ವಿ.ನಾಗರಾಜ್ ಮಾತನಾಡಿ, “ಯುವಶಕ್ತಿಯಿಂದಾಗಿ ಈ ಹೋರಾಟಕ್ಕೆ ಪ್ರಚಾರ ಸಿಕ್ಕಿತು. ಚನ್ನರಾಯಪಟ್ಟಣದ ಹಸಿರನ್ನು ಉಳಿಸಬೇಕಾಗಿದೆ” ಎಂದು ಸಲಹೆ ನೀಡಿದರು.

2 33

ದಸಂಸ ಹಿರಿಯ ನಾಯಕ ಗುರುಪ್ರಸಾದ್ ಕರಗೋಡು ಮಾತನಾಡಿ, “ಚನ್ನರಾಯಪಟ್ಟಣದ ಜನರ ತಾಳ್ಮೆ ಮತ್ತು ಹೋರಾಟಕ್ಕೆ ದೊಡ್ಡ ಸಲಾಂ. ಬಿಡಿಬಿಡಿ ಹೋರಾಟಗಳು ಒಂಟಿಕಾಲಿನ ನಡಿಗೆ ಇದ್ದಂತೆ. ಅಂಥವುಗಳು ಗುರಿ ಮುಟ್ಟಿಸಲು ಸಾಧ್ಯವಿಲ್ಲ. ಎಲ್ಲ ಸಂಘಟನೆಗಳು ಒಟ್ಟಿಗೆ ಸೇರಿದರೆ ಜಯ ಸಾಧ್ಯ ಎಂಬುದನ್ನು ಈ ಹೋರಾಟ ಎತ್ತಿಹಿಡಿದಿದೆ” ಎಂದು ಎಚ್ಚರಿಸಿದರು.

ಕಾರ್ಮಿಕ ನಾಯಕಿ ಎಸ್‌.ವರಲಕ್ಷ್ಮಿ ಮಾತನಾಡಿ, “ಈ ಗೆಲುವು ಕೆಂಪು, ನೀಲಿ, ಹಸಿರು ಚಿಹ್ನೆಗಳಿಗೆ ಸಲ್ಲುತ್ತದೆ. ಈ ಬಣ್ಣಗಳು ಒಂದಾದರೆ ಫಲಿತಾಂಶ ಏನೆಂಬುದು ಇಂದು ಗೊತ್ತಾಗಿದೆ” ಎಂದು ಮಾರ್ಮಿಕವಾಗಿ ನುಡಿದರು.

ಭಾವುಕರಾದ ಕಾರಳ್ಳಿ ಶ್ರೀನಿವಾಸ್

ಚನ್ನರಾಯಪಟ್ಟಣ ಹೋರಾಟದ ಮುಂಚೂಣಿಯಲ್ಲಿದ್ದು, 1190 ದಿನಗಳ ಕಾಲ ಚಳವಳಿಯ ಕಾವನ್ನು ಕಾಪಿಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ದಲಿತ ಮುಖಂಡ ಕಾರಳ್ಳಿ ಶ್ರೀನಿವಾಸ್. ಅವರು ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾತಿಗಿಳಿದಾಗ ಇಡೀ ಸಭಾಂಗಣದಲ್ಲಿ ಜಯಘೋಷ ಮೊಳಗಿತು. ಗದ್ಗದಿತರಾಗಿ ಮಾತು ಶುರುಮಾಡಿದ ಅವರು, “ಚನ್ನರಾಯಪಟ್ಟಣದ ಗೆಲುವು ಈ ನಾಡಿನ ಜನಚಳವಳಿಗಳ ಗೆಲುವಾಗಿದೆ. ನಾನು ದಲಿತರ ಹುಡುಗ. ದಲಿತ ಸಂಘರ್ಷ ಸಮಿತಿಯ ಪ್ರಾಡಕ್ಟ್ ನಾನು. ನನ್ನ ನಾಯಕತ್ವವನ್ನು ಎಲ್ಲ ಸಮುದಾಯಗಳು ಒಪ್ಪಿದವು. ಆ ಕಾರಣಕ್ಕೆ ಎಲ್ಲ ಜನವರ್ಗದ ರೈತಾಪಿ ಕುಟುಂಬವನ್ನು ಸ್ಮರಿಸುತ್ತೇನೆ” ಎನ್ನುವಾಗ ಅವರ ಕಣ್ಣುಗಳಲ್ಲಿ ನೀರಿತ್ತು.

ಮುಂದುವರಿದು ಅವರು ನುಡಿದರು: “ನನ್ನೊಳಗೆ ನೀಲಿ ಇತ್ತು. ಈಗ ಕೆಂಪು ನನ್ನ ರಕ್ತವಾಗಿದೆ. ಹಸಿರು ನನ್ನ ಹೊದಿಕೆಯಾಗಿದೆ. ಅದು ಮತ್ತಷ್ಟು ಕಾವನ್ನು ಉಳಿಸಿಕೊಳ್ಳಲಿ. ಈ ನಾಡಿನ ಜನಚಳವಳಿಗಳ ಉಚ್ಛ್ರಾಯ ಸ್ಥಿತಿ ನಿರ್ಮಾಣವಾಗಲಿ. ಹೆಸರುಗಳನ್ನು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಎಲ್ಲರಿಗೂ ಲಾಲ್ ಸಲಾಂ, ನೀಲ್‌ ಸಲಾಂ, ಹಸಿರು ಸಲಾಂ”.

ಹೀಗಿತ್ತು ಸಂಭ್ರಮದ ಕ್ಷಣ. ಸಮಾಜವಾದಿ, ರೈತ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರ ಮೇಲೆ ಇಟ್ಟ ಭರವಸೆ ಹುಸಿಯಾಗಲಿಲ್ಲವೆಂದು ಚನ್ನರಾಯಪಟ್ಟಣದ ಜನರು ಆನಂದಭಾಷ್ಪ ಸುರಿಸಿದರು. ಕೊನೆಗೂ ದೇವನಹಳ್ಳಿಯ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ದೇವನಹಳ್ಳಿಯ ನೂರಾರು ರೈತರು, ಹಿರಿಯ ಹೋರಾಟದ ಸಂಗಾತಿಗಳಾದ ಡಾ ವಿಜಯಮ್ಮ, ಸಿರಿಮನೆ ನಾಗರಾಜ್‌, ಪ್ರಭಾ ಬೆಳವಂಗಲ, ಯುವ ಹೋರಾಟಗಾರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X