ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಗೊಳಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಮ್ಮೆಲ್ಲರ ಸಂಘಟನೆಗಳ ಹೋರಾಟದ ಗೆಲುವು ಎಂದು ಜಂಟಿ ಘೋಷಣೆಯಲ್ಲಿ ತಿಳಿಸಿದೆ.
ಇಂದು ಕರ್ನಾಟಕ ಗೆದ್ದಿದೆ. ನಮ್ಮ ಹಿರಿಯರ ಮಣ್ಣನ್ನು ನಾವು ಮಾರುವುದಿಲ್ಲ ಎಂದು ಚನ್ನರಾಯಪಟ್ಟಣ ಮತ್ತು 13 ಹಳ್ಳಿಗಳ ಜನ ಕಳೆದ 1198 ದಿನಗಳಿಂದ ತಪ್ಪಸ್ಸಿನ ರೀತಿಯ ಹೋರಾಟ ನಡೆಸಿದ್ದರು. ವಿಷಾದದ ವಿಚಾರವೆಂದರೆ ಅಧಿಕಾರಕ್ಕೆ ರೈತರ ಈ ಅರ್ತನಾದ ಅರ್ಥವಾಗಿರಲಿಲ್ಲ. ಬಲವಂತದ ಭೂ ಸ್ವಾಧೀನಕ್ಕೆ ಮುಂದಾಗಿ ಅಂತಿಮ ಅಧಿಸೂಚನೆ ಹೊರಡಿಸಿಬಿಟ್ಟಿತ್ತು. ಈ ಗಳಿಗೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ರೈತರಿಗೆ ಈ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತೀರ್ಮಾನಿಸಿ ಜೂನ್ 25 ರಂದು “ದೇವನ ಹಳ್ಳಿ” ಚಲೋಗೆ ಕರೆ ನೀಡಿತ್ತು ಎಂದು ಮುಖಂಡರು ತಿಳಿಸಿದರು.
ಈ ಕರೆಗೆ ಕರ್ನಾಟಕ ಸ್ಪಂದಿಸಿದ ರೀತಿ ಅಮೋಘ. ಪ್ರಕಾಶ್ ರಾಜ್ ಆದಿಯಾಗಿ ಕರ್ನಾಟಕದ ನಾಗರಿಕ ಸಮಾಜ ಮಿಡಿದು ಬಂದಿತ್ತು. ಅಧಿಕಾರಕ್ಕೆ ಈ ನಾಡಿ ಮತ್ತೆ ಅರ್ಥವಾಗಲಿಲ್ಲ. ಬಲವಂತವಾಗಿ ಹೋರಾಟಗಾರರನ್ನು ಬಂಧಿಸಿ ಚಳವಳಿಯನ್ನು ದಮನಿಸುವ ಪ್ರಯತ್ನ ನಡೆಯಿತು. ಆದರೆ ಕರ್ನಾಟಕ ಎಲ್ಲ ಜನ ಸಂಘಟನೆಗಳ ನಾಯಕತ್ವ ಒಂದು ಮುಷ್ಟಿಯಾಗಿ ಹಾಗೂ ದಿಟ್ಟವಾಗಿ ಇದನ್ನು ಎದುರಿಸಿತು. ಫ್ರೀಡಂ ಪಾರ್ಕಿನಲ್ಲಿ “ಭೂ ಸತ್ಯಾಗ್ರಹ”ವನ್ನು ಮುಂದುವರೆಸಿತು ಎಂದು ಸಂಘಟನೆಗಳ ನಾಯಕರು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ಅಸ್ತ್ರವಾಗದಿರಲಿ, ಬಡವರ ಬಗ್ಗೆ ವಿವೇಚನೆಯಿಂದ ಬಳಸಲಿ
ಮುಖ್ಯಮಂತ್ರಿಗಳು ಜುಲೈ 4 ರಂದು ಸಭೆ ನಿಗದಿ ಮಾಡಿದರು. ಅಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕತ್ವ ಒಳಗೊಂಡಂತೆ ವಿವಿಧ ರಾಜ್ಯಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಯಿತು. ಕರ್ನಾಟಕದ ದುಡಿಯುವ ಜನರು, ವಿಶೇಷವಾಗಿ ಬಡ ಬಗರ್ ಹುಕುಂ ರೈತರು, ಭೂಮಿ ಹಕ್ಕು ಕಳೆದುಕೊಂಡವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ “ನಾಡ ಉಳಿಸಿ ಸಮಾವೇಶ”ವನ್ನು ಕರ್ನಾಟಕದ ದನಿಯಾಗಿ ಮಾರ್ಪಡಿಸಿದರು. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು. ಆದರೆ “ಸರ್ಕಾರಕ್ಕೆ ಇನ್ನು 10 ದಿನಗಳ ಕಾಲಾವಕಾಶ ಕೊಡಿ” ಎಂದು ಚಳವಳಿಗಾರರನ್ನು ಕೇಳಿಕೊಂಡರು. ರೈತರಿಗೆ ವಂಚನೆಯಾಗದಂತೆ ನೀವು ನೋಡಿಕೊಳ್ಳಬೇಕು ಎಂಬ ಮಾತಿನೊಂದಿಗೆ ಈ ಕಾಲಾವಕಾಶವನ್ನು ಸರ್ಕಾರಕ್ಕೆ ನೀಡಲಾಯಿತು. ಈ 10 ದಿನಗಳಲ್ಲಿ ರೈತರನ್ನು ಒಡೆಯುವ ಅನೇಕ ಹುನ್ನಾರಗಳು ಕೆಲವು ಸ್ಥಳೀಯ ಪುಡಾರಿಗಳಿಂದ ಹಾಗೂ ರಿಯಲ್ ಎಸ್ಟೇಟ್ ಏಜೆಂಟರು ನಡೆಸಿದರು. ಆದರೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಚನ್ನರಾಯಪಟ್ಟಣ ಹಾಗೂ 13 ಹಳ್ಳಿಗಳ ಜನ ಈ ಷಡ್ಯಂತ್ರವನ್ನು ವಿಫಲಗೊಳಿಸಿದರು. ಪ್ರತಿ ಹಳ್ಳಿಯಲ್ಲಿ ಗ್ರಾಮ ಸಂಕಲ್ಪ ಸಮಾವೇಶಗಳನ್ನು ಮಾಡಿ, ಅಂತಿಮವಾಗಿ ಜುಲೈ 14 ರಂದು “ಗ್ರಾಮ ಸಂಕಲ್ಪ ಸಮಾವೇಶ” ನಡೆಸಿ “ಪ್ರಾಣ ಹೋದರೂ – ಭೂಮಿ ಕೊಡುವುದಿಲ್ಲ” ಎಂಬ ಒಗ್ಗಟ್ಟಿನ ತೀರ್ಮಾನವನ್ನು ಮತ್ತೊಮ್ಮೆ ರುಜುವಾತುಪಡಿಸಿದರು.
ಇಂದು ಇಡೀ ಕರ್ನಾಟಕ ಮಾತ್ರವಲ್ಲ ದೇಶವೇ ಕಾಯುತ್ತಿದ್ದ ಸಭೆ ವಿಧಾನ ಸೌಧದಲ್ಲಿ ನಡೆಯಿತು. ನೇರವಾಗಿ ವಿಷಯಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, “ಕೃಷಿಯನ್ನು ಬಿಡುವುದಿಲ್ಲ” ಎಂಬ ರೈತರ ಸಂಕಲ್ಪವನ್ನು, ʼಇಡೀ ಕರ್ನಾಟಕದ ಜನ ಸಂಘಟನೆಗಳು ಹಾಗೂ ನಾಗರೀಕರೆಲ್ಲಾ ಒಗ್ಗೂಡಿ ದನಿ ಎತ್ತಿದ್ದ ಐತಿಹಾಸಿಕ ಪರಿಯನ್ನು ಪುರಸ್ಕರಿಸಿʼ ಇಡೀ ನೋಟಿಫಿಕೇಷನ್ ಅನ್ನು ಸಂಪೂರ್ಣವಾಗಿ ಕೈಬಿಡುವ” ತೀರ್ಮಾನ ಘೋಷಿಸಿದ್ದಾರೆ. ಜನಮನಕ್ಕೆ ಸ್ಪಂದಿಸಿದ್ದಕ್ಕಾಗಿ, ಈ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದ್ದಕ್ಕಾಗಿ ಸರ್ಕಾರಕ್ಕೆ, ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಾಗೂ ಕಾಂಗ್ರೆಸ್ಸಿನ ಹೈಕಮಾಂಡ್‌ಗೆ ವಿಶೇಷವಾಗಿ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಸಂಘಟನೆಗಳ ನಾಯಕರು ತಿಳಿಸಿದ್ದಾರೆ.
ಇದು ಜನಪರ ಚಳವಳಿಗಳ ಒಗ್ಗಟ್ಟಿನ ಹೋರಾಟಕ್ಕೆ ಸಂದ ಸಮಷ್ಟಿ ಜಯವಾಗಿದೆ. ಈ ಐಕ್ಯತೆಯನ್ನು ಹೀಗೇ ಮುಂದುವರೆಸುತ್ತೇವೆ. ಜನರ ನೋವಿಗೆ ದನಿಯಾಗಿ ದುಡಿಯುತ್ತಿವೆ. ಆಳುವವರನ್ನು ಪ್ರಶ್ನಿಸುವ ಜನದನಿಯಾಗಿ ಕೆಲಸ ಮಾಡುತ್ತೇವೆ ಎಂದು ಈ ಐತಿಹಾಸಿಕ ಸಂದರ್ಭದಲ್ಲಿ ಮತ್ತೊಮ್ಮೆ ಸಂಕಲ್ಪ ತೊಡುತ್ತಿದ್ದೇವೆ. ಕರ್ನಾಟಕದ ಅಭಿವೃದ್ಧಿ ಮಾದರಿ ಹೇಗಿರಬೇಕು? ಭೂ ಬಳಕೆ ನೀತಿ ಏನಾಗಿರಬೇಕು? ಎಂಬ ಅಮೂಲ್ಯ ಪ್ರಶ್ನೆಗಳ ಸುತ್ತ ಸಾರ್ವಜನಿಕ ಚರ್ಚೆ ಚಾಲನೆ ನೀಡುವ ತೀರ್ಮಾನವನ್ನೂ ತೆಗೆದುಕೊಳ್ಳುತ್ತಿದ್ದೇವೆ. ಸರ್ಕಾರವೂ ಈ ಚರ್ಚೆಯಲ್ಲಿ ಕೈಗೂಡಿಸಿಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಜನ ಚಳವಳಿಗಳ ಐಕ್ಯತೆ ಚಿರಾಯುವಾಗಲಿ, ಬಲವಂತದ ಭೂಸ್ವಾಧೀನಗಳು ಕೊನೆಯಾಗಲಿ, ಭೂಮಿಯ ಮೇಲೆ ದುಡಿಯುವ ಜನರ ಹಕ್ಕು ಮರುಸ್ಥಾಪನೆಯಾಗಲಿ ಎಂದು ನಾಯಕರು ಹೇಳಿದ್ದಾರೆ.