ಶಿವಮೊಗ್ಗ, ವಿಸಿಬಲಿಟಿ (Visibility) ಸಮಸ್ಯೆಯಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡ್ ಆಗಲು ಸಮಸ್ಯೆಯಾಗುತ್ತಿದೆ. ಇದನ್ನು ನೀಗಿಸಲು 15 ದಿನದ ಹಿಂದೆಯೇ ಉಪಕರಣ ತರಿಸಲಾಗಿದೆ.
ಆದರೆ ಇದನ್ನು ಅಳವಡಿಸಲು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ವಿಳಂಬ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ವಿಮಾನ ನಿಲ್ದಾಣದ ವಿಸಿಬಲಿಟಿ ಸಮಸ್ಯೆ ನೀಗಿಸಲು ಜೂನ್ ಕೊನೆಯ ವಾರದಲ್ಲಿ ಉಪಕರಣ ತರಿಸಲಾಗಿದೆ. ಇದರ ಅಳವಡಿಕೆಗೆ ಫೌಂಡೇಷನ್, ಆಂಟೆನಾ ನಿರ್ಮಿಸಲು ಸುಮಾರು ಒಂದು ಕೋಟಿ ರೂಪಾಯಿ ಅಗತ್ಯವಿದೆ. ಆದರೆ ಈತನಕ ಹಣವ ಬಿಡುಗಡೆಯಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಸಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ವಿಶೇಷ ವಿಮಾನ ಲ್ಯಾಂಡ್ ಆಗಲು ಸಮಸ್ಯೆಯಾಯಿತು. ವಿಸಿಬಲಿಟಿ ಸಮಸ್ಯೆಯಿಂದಾಗಿ ಸುಮಾರು ಮೂರು ಸುತ್ತು ಹಾಕಿದ ಬಳಿಕ ವಿಮಾನ ಲ್ಯಾಂಡ್ ಆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಭೇಟಿ ಹಿನ್ನೆಲೆ ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿದ್ದೆ. ಆಗ ಅವರು ಶೀಘ್ರ ಉಪಕರಣ ಅಳವಡಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.