ಹಿರಿಯ ನಟ ಮತ್ತು ನಿರ್ಮಾಪಕ ಧೀರಜ್ ಕುಮಾರ್ ಅವರು ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ 79 ವರ್ಷದ ಅವರು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಯುನಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಧೀರಜ್ ಕುಮಾರ್ ಅವರ ಕುಟುಂಬ ದೃಢಪಡಿಸಿದೆ. ಹಾಗೆಯೇ ಅಭಿಮಾನಿಗಳು ಮತ್ತು ಹಿತೈಷಿಗಳ ಪ್ರಾರ್ಥನೆ ಮತ್ತು ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ
ಬೆಳಿಗ್ಗೆ 10 ಗಂಟೆಯವರೆಗೆ ಧೀರಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು ಅವಕಾಶವಿದೆ, ನಾಳೆ ಬೆಳಿಗ್ಗೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಧೀರಜ್ ಅವರ ಮನೆಗೆ ತರಲಾಗುವುದು, ಬಳಿಕ ವಿಲೇ ಪಾರ್ಲೆ ವೆಸ್ಟ್‌ನಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಧೀರಜ್ ಕುಮಾರ್ 1965ರಲ್ಲಿ ಮನರಂಜನಾ ಉದ್ಯಮದಲ್ಲಿ ಪ್ರಯಾಣವನ್ನು ಪ್ರಾರಂಭಿಸಿದರು. 1970 ಮತ್ತು 1984ರ ನಡುವೆ, ಅವರು 21 ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದರು. ‘ಓಂ ನಮಃ ಶಿವಾಯ’ ನಂತಹ ಆಧ್ಯಾತ್ಮಿಕ ಮತ್ತು ಪೌರಾಣಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಕ್ರಿಯೇಟಿವ್ ಐ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ಸ್ವಾಮಿ, ಹೀರಾ ಪನ್ನಾ, ರಾತೋಂ ಕಾ ರಾಜಾ ಸೇರಿದಂತೆ ಹಲವು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
