ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಹಾತ್ಮಾ ಗಾಂಧಿ ಹುಟ್ಟಿದ ದೇಶದಲ್ಲಿ ಬಿಜೆಪಿ ವರ್ಣಭೇದ ನೀತಿಯನ್ನು ಪೋಷಿಸುತ್ತಿದೆ. ಕೇಸರಿ ಪಕ್ಷದ ಧೋರಣೆ ನಿಜಕ್ಕೂ ದುರ್ದೈವ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.
‘ಕಲ್ಯಾಣ ಕರ್ನಾಟಕ ಭಾಗದ ಜನರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಇದು ಗೊತ್ತಾಗುತ್ತದೆ’ ಎಂದು ಹೇಳುವ ಮೂಲಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಆ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರವಲ್ಲದೆ, ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ. ಇದು ಮಾಜಿ ಸಚಿವರ ಘನತೆಗೆ ಶೋಭೆ ತರುವುದಿಲ್ಲ” ಎಂದು ಹೇಳಿದ್ದಾರೆ.
“ಆರಗ ಜ್ಞಾನೇಂದ್ರ ಅವರು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮರಗಳಿಲ್ಲ, ನೆರಳಿಲ್ಲ, ನಮ್ಮ ತಲೆಕೂದಲೇ ನೆರಳು ಎಂದೆಲ್ಲ ತುಚ್ಛವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗಳು ಅವರ ಕೀಳು ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ. ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ, ಮನುಷ್ಯರ ಬಣ್ಣದ ಮೇಲೆ ಟೀಕೆ ಮಾಡಿದ್ದಾರೆ. ಈ ರೀತಿ ನಾಡಿನ ಒಂದು ಕಾಲು ಕೋಟಿ ಜನತೆಗೆ ಅವಮಾನ ಮಾಡಿರುವುದು ನಿಜಕ್ಕೂ ದುರ್ದೈವ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ತಮಗಷ್ಟೇ ಅಲ್ಲದೆ ಇಡೀ ಕಲ್ಯಾಣ ಕರ್ನಾಟಕದ ಜನತೆಯ ಬೇಷರತ್ ಕ್ಷಮೆ ಕೋರಬೇಕು” ಎಂದು ಒತ್ತಾಯಿಸಿದ್ದಾರೆ.
“ನಾನು ಅರಣ್ಯ ಇಲ್ಲದ ಪ್ರದೇಶದಿಂದ ಬಂದಿರಬಹುದು. ಆದರೆ ಹಸಿರಿನ ಮಹತ್ವ ನನಗೆ ತಿಳಿದಿದೆ. ಅರಣ್ಯ ಸಚಿವನಾಗಿ ರಾಜ್ಯದ ಹಸಿರು ವ್ಯಾಪ್ತಿಯನ್ನು ಹೆಚ್ಚಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಕಲ್ಯಾಣ ಕರ್ನಾಟಕವನ್ನು ಹಸಿರುಮಯಗೊಳಿಸಲು ಮುಂದಾಗಿದ್ದೇನೆ” ಎಂದಿದ್ದಾರೆ.
“ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಜೊತೆಗೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ನಾಲ್ಕು ವರ್ಷ ಅಧಿಕಾರ ನಡೆಸಿದೆ. ಆಗ ಅವರು ಏಕೆ ಕಸ್ತೂರಿರಂಗನ್ ವರದಿಯನ್ನು ರದ್ದು ಮಾಡಲಿಲ್ಲ” ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.